ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಎಂಎನ್‌ಸಿ ಉದ್ಯೋಗಿ ಯುವರಾಜ್ ಅವರ ಶವ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸುಮಾರು 10 ದಿನಗಳ ಹಿಂದೆ ಸಾವು ಸಂಭವಿಸಿರಬಹುದೆಂದು ಶಂಕಿಸಲಾಗಿದೆ.

ಬೆಂಗಳೂರು (ಡಿ.5): ಎಂಎನ್‌ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಶವ ಆತನ ಬಾಡಿಗೆ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗುದೆ. ಕೊಳೆತ ಸ್ಥಿತಿಯಲ್ಲಿ ಬಾಡಿಗೆ ಮನೆಯಲ್ಲಿ ಮೃತದೇಹ ಪತ್ತೆಯಾಗಿದ್ದು, ಅಂದಾಜು 10 ದಿನಗಳ ಹಿಂದೆಯೇ ಈ ವ್ಯಕ್ತಿ ಸಾವು ಕಂಡಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ಬೆಂಗಳೂರಿನ ಬಸವೇಶ್ವರ ನಗರದ ಮಂಜುನಾಥ ನಗರದ ಮೂರನೇ ಕ್ರಾಸ್‌ನ ಮನೆಯೊಂದರಲ್ಲಿ ಘಟನೆ ನಡೆದಿದೆ.

ಹಾಸಿಗೆ ಮೇಲೆ ಮಲಗಿರುವಂತೆ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ದುರ್ವಾಸನೆ ಅತಿಯಾದ ಹಿನ್ನಲೆಯಲ್ಲಿ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಬಸವೇಶ್ವರ ನಗರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ ಮಾಡಿದಾಗ ವ್ಯಕ್ತಿಯ ಶವ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು 48 ವರ್ಷದ ಯುವರಾಜ್‌ ಎಂದು ಗುರುತಿಸಲಾಗಿದೆ.

ಯುವರಾಜ್‌ ಎಂಎನ್‌ಸಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ 15 ವರ್ಷಗಳಿಂದ ಅವರು ತಾಯಿಯ ಜೊತೆಗೆ ಇದೇ ಮನೆಯಲ್ಲಿ ವಾಸವಿದ್ದರು. ತಾಯಿ ಸಾವು ಕಂಡ ಬಳಿಕ ಯುವರಾಜ್‌ ಮನೆಯಲ್ಲಿ ಒಬ್ಬರೇ ವಾಸವಿದ್ದರು. ಕಳೆದ ಕೆಲ ದಿನಗಳಿಂದ ಮನೆಯಿಂದ ದುರ್ವಾಸನೆ ಬರುತ್ತಿತ್ತು. ಇಲಿ ಸತ್ತಿರಬಹುದು ಎಂದು ನೆರೆಹೊರೆಯವರು ಕೂಡ ಸುಮ್ಮನಾಗಿದ್ದರು. ಆದರೆ, ದುರ್ವಾಸನೆ ಕಡಿಮೆ ಆಗದ ಹಿನ್ನಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸ್ ಪರಿಶೀಲನೆ ಬಳಿಕ ಯುವರಾಜ್ ಸಾವಾಗಿರೋದು ಬೆಳಕಿಗೆ ಬಂದಿದೆ.