ಮುಂಬೈನಲ್ಲಿ, ಪತ್ನಿಯ ಶೀಲವನ್ನು ಶಂಕಿಸಿದ ಪತಿಯೊಬ್ಬ ನಿದ್ರೆಯಲ್ಲಿದ್ದ ತನ್ನ 14 ವರ್ಷದ ಮಗಳ ಕತ್ತು ಸೀಳಿದ್ದಾನೆ. ಮಗಳನ್ನು ರಕ್ಷಿಸಲು ಬಂದ ಪತ್ನಿಯ ಮೇಲೂ ಹಲ್ಲೆ ನಡೆಸಿದ್ದು, ಪೊಲೀಸರು ಆರೋಪಿಯನ್ನು ಕೊಲೆ ಯತ್ನ ಹಾಗೂ ಕೌಟುಂಬಿಕ ಹಿಂಸಾಚಾರದ ಅಡಿಯಲ್ಲಿ ಬಂಧಿಸಿದ್ದಾರೆ.

ಮುಂಬೈ: ಪತ್ನಿಯ ಶೀಲ ಶಂಕಿಸಿದ ಪತಿಯೋರ್ವ ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಆಘಾತಕಾರಿ ಘಟನೆ ಮುಂಬೈನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಈಗ ಗಂಡನ ವಿರುದ್ಧ ಕೊಲೆಗೆ ಯತ್ನ ಹಾಗೂ ಕೌಟುಂಬಿಕ ಹಿಂಸಾಚಾರ ಪ್ರಕರಣ ದಾಖಲಾಗಿದೆ.

14 ವರ್ಷ ಪ್ರಾಯದ ಮಗಳು ನಿದ್ರಿಸುತ್ತಿದ್ದಾಗ ಆಕೆ ಮಲಗಿದ್ದ ಕೋಣೆಗೆ ಬಂದ ತಂದೆ ಆಕೆಯ ಕತ್ತನ್ನು ಸೀಳಿದ್ದಾನೆ. ಈ ವೇಳೆ ಅಪ್ರಾಪ್ತ ಮಗಳು ನೋವಿನಿಂದ ಜೋರಾಗಿ ಕೂಗಿಕೊಂಡಿದ್ದು, ಮಗಳ ಕಿರುಚಾಟದ ಸದ್ದು ಕೇಳಿ ತಾಯಿ, ಮಗಳ ರಕ್ಷಣೆಗೆ ಓಡಿ ಬಂದಿದ್ದು, ಈ ವೇಳೆ ಹೆಂಡ್ತಿ ಮೇಲೂ ಆರೋಪಿ ಪತಿ ಹಲ್ಲೆ ಮಾಡಿದ್ದಾನೆ. ಹೀಗೆ ಹೆಂಡ್ತಿ ಮಗಳ ಕೊಲೆಗೆ ಯತ್ನಿಸಿದ ಆರೋಪಿಯನ್ನು ಹನುಮಂತ್ ಸೋನವಾಲೆ ಎಂದು ಗುರುತಿಸಲಾಗಿದೆ. ಹೆಂಡ್ತಿ ಶೀಲದ ಮೇಲೆ ಅನುಮಾನ ಹೊಂದಿದ್ದ ಹನುಮಂತ್ ಸೋನವಾಲೆ ಕುಡಿದು ಬಂದು ಪತ್ನಿ ರಾಜಶ್ರೀ ಜೊತೆಗೆ ಜಗಳವಾಡುವುದಕ್ಕೆ ಶುರು ಮಾಡಿದ್ದಾನೆ. ನಂತರ ನಿದ್ರಿಸುತ್ತಿದ್ದ ಮಗಳ ಮೇಲೆ ದಾಳಿ ಮಾಡಿದ್ದಾನೆ. ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಆರೋಪಿ ಹನುಮಂತ್ ಸೋನವಾಲೆಗೆ ಉದ್ಯೋಗ ಇರಲಿಲ್ಲ. ಇದರ ಜೊತೆಗೆ ಆತ ವಿಪರೀತ ಕುಡಿತಕ್ಕೆ ದಾಸನಾಗಿದ್ದ. ಹೀಗಾಗಿ ಕೆಲಸ ಇಲ್ಲದ ಸುಮ್ಮನೇ ಕುಳಿತಿದ್ದ ಈತನ ತಲೆಯಲ್ಲಿ ಪತ್ನಿಯ ಶೀಲದ ಬಗ್ಗೆ ಅನುಮಾನ ಮೂಡಿತ್ತು. ಹೀಗಾಗಿ ಪದೇ ಪದೇ ಆಕೆಯ ಗುಣನಡತೆಯ ಬಗ್ಗೆ ಸದಾ ಪ್ರಶ್ನೆ ಮಾಡುತ್ತಿದ್ದ. ಅದೇ ರೀತಿ ಮೊನ್ನೆಯೂ ಆತ ಪತ್ನಿಯ ಶೀಲದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಜಗಳ ಶುರು ಮಾಡಿದ್ದಾನೆ. ಜಗಳ ವಿಕೋಪಕ್ಕ ತಿರುಗಿದಾಗ ಆರೋಪಿ ಮಲಗಿದ್ದ ಮಗಳ ಮೇಲೆ ಬ್ಲೇಡ್‌ನಿಂದ ಹಲ್ಲೆ ಮಾಡಿ ಕತ್ತು ಸೀಳಿದ್ದಾನೆ. ಈ ವೇಳೆ ಪತ್ನಿ ಮಧ್ಯಪ್ರವೇಶಿಸಲು ಹೋದಾಗ ಆಕೆಯ ಮೇಲೂ ಹಲ್ಲೆ ಮಾಡಿದ್ದಾನೆ.

ಈತನ ಹಾವಳಿ ತಡೆಯಲಾಗದೇ ಇತ್ತೀಚೆಗೆ ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ವಕೀಲರ ಜೊತೆ ಮಾತುಕತೆ ನಡೆಸಿದ್ದಳು. ಇದು ಆತನನ್ನು ಮತ್ತಷ್ಟು ಚಿಂತೆಗೀಡು ಮಾಡಿತ್ತು. ತಂದೆಯ ಹಲ್ಲೆಯಿಂದಾಗಿ ಈಗ ಮಗಳ ಕತ್ತಿಗೆ ಐದು ಹೊಲಿಗೆ ಹಾಕಲಾಗಿದೆ. ತಾಯಿ ಹಾಗೂ ಮಗಳು ಇಬ್ಬರಿಗೂ ಕಂಡಿವಲಿಯ ಶತಾಬ್ಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಯ ವಿರುದ್ಧ ಈಗ ಕೊಲೆಯತ್ನ ಹಾಗೂ ಕೌಟುಂಬಿಕ ಹಿಂಸಾಚಾರ ಪ್ರಕರಣ ದಾಖಲಾಗಿದೆ.