ಸಿನಿಮೀಯ ಸ್ಟೈಲಲ್ಲಿ ಮೊಬೈಲ್ ಕಳ್ಳರ ಬೆನ್ನಟ್ಟಿ ಹಿಡಿದ ಯುವಕರು
ರಾಷ್ಟ್ರ ರಾಜಧಾನಿಯಲ್ಲಿ ಸಿನಿಮೀಯ ಘಟನೆಯೊಂದು ನಡೆದಿದೆ. ಮೊಬೈಲ್ ಫೋನ್ ಕಿತ್ತುಕೊಂಡು ಆಟೋರಿಕ್ಷಾದಲ್ಲಿ ಪರಾರಿಯಾಗುತ್ತಿದ್ದ ಮೊಬೈಲ್ ಕಳ್ಳರನ್ನು ಹಿಡಿಯುವಲ್ಲಿ ಇಬ್ಬರು ಸೇನಾ ಆಕಾಂಕ್ಷಿ ಯುವಕರು ಯಶಸ್ವಿಯಾಗಿದ್ದಾರೆ.
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಸಿನಿಮೀಯ ಘಟನೆಯೊಂದು ನಡೆದಿದೆ. ಮೊಬೈಲ್ ಫೋನ್ ಕಿತ್ತುಕೊಂಡು ಆಟೋರಿಕ್ಷಾದಲ್ಲಿ ಪರಾರಿಯಾಗುತ್ತಿದ್ದ ಮೊಬೈಲ್ ಕಳ್ಳರನ್ನು ಹಿಡಿಯುವಲ್ಲಿ ಇಬ್ಬರು ಸೇನಾ ಆಕಾಂಕ್ಷಿ ಯುವಕರು ಯಶಸ್ವಿಯಾಗಿದ್ದಾರೆ. ಮೊಹ್ಸಿನ್ (Mohsin) ಮತ್ತು ಅವನ ಸ್ನೇಹಿತ ಶೆಹಜಾದ್ (Shehzad) ಎಂಬುವವರೇ ಈ ಸಾಹಸ ಮೆರೆದ ಸೇನಾ ಆಕಾಂಕ್ಷಿಗಳು. ಸಾಹಸ ಮೆರೆದ ಇವರಿಗೆ ತಲಾ 2,000 ರೂಪಾಯಿ ಬಹುಮಾನ ಹಾಗೂ ಪ್ರಮಾಣಪತ್ರವನ್ನು ದೆಹಲಿ ಪೊಲೀಸರು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್ 1 ರಂದು ಈ ಘಟನೆ ನಡೆದಿದೆ. ಮೊಹ್ಸಿನ್ ಮತ್ತು ಶೆಹಜಾದ್ ಉತ್ತರ ಪ್ರದೇಶದ(Uttar Pradesh) ಹಾಪುರ್‌ನಲ್ಲಿರುವ ತಮ್ಮ ಮನೆಯಿಂದ ಹಿಂದಿರುಗುತ್ತಿದ್ದಾಗ ವಾಜಿರಾಬಾದ್‌ನ ಸಂಗಮ್ ವಿಹಾರ್‌ನಲ್ಲಿ (Sangam Vihar) ಈ ಘಟನೆ ನಡೆದಿದೆ. ಬೆಳಗ್ಗೆ 6.25ರ ಸುಮಾರಿಗೆ ನಾನು ಮತ್ತು ಶೆಹಜಾದ್ ಗುಜ್ಜರ್ ಚೌಕ್‌ನಿಂದ ವಜೀರಾಬಾದ್ ಮದರ್ ಡೈರಿಯ ಕಡೆಗೆ ನಡೆದುಕೊಂಡು ಹೋಗುತ್ತಿದ್ದೆವು. ಈ ವೇಳೆ ಆಟೋರಿಕ್ಷಾವೊಂದು ಹಠಾತ್ತನೆ ಬಂದು ನಮ್ಮ ಬಳಿ ನಿಂತಿತು. ಆಟೋರಿಕ್ಷಾದಿಂದ ಇಳಿದ ವ್ಯಕ್ತಿಯೊಬ್ಬ ಫೋನ್‌ನಲ್ಲಿ ಮಾತನಾಡುತ್ತಿದ್ದ ನನ್ನ ಹಿಂದಿನಿಂದ ಬಂದು ಕತ್ತು ಹಿಸುಕಿ ಮೊಬೈಲ್ ಕಸಿದು ಅದೇ ಆಟೋರಿಕ್ಷಾದಲ್ಲಿ ಪರಾರಿಯಾಗಿದ್ದಾನೆ ಎಂದು ಮೊಹ್ಸಿನ್ ದೂರಿನಲ್ಲಿ ತಿಳಿಸಿದ್ದಾರೆ.
ಇಬ್ಬರು ಮೊಬೈಲ್ ಕಳ್ಳರನ್ನು ಬೆನ್ನಟ್ಟಿ ಹಿಡಿದ ಪೊಲೀಸರು
ಅಷ್ಟರಲ್ಲಿ ಮೊಹ್ಸಿನ್ ಹಿಂದೆ ಹೋಗುತ್ತಿದ್ದ ಶೆಹಜಾದ್ ಎಂಬಾತ ಆಟೋರಿಕ್ಷಾವನ್ನು ಹಿಂಬಾಲಿಸಿ ಚಲಿಸುತ್ತಿದ್ದ ವಾಹನದೊಳಗೆ ಪ್ರವೇಶಿಸಿದ್ದಾನೆ. ನಂತರ ವಾಹನ ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ವೇಳೆ ಎರಡು ಕಡೆಯವರ ನಡುವೆ ಮಾತಿನ ಚಕಮಕಿ ನಡೆದಿದ್ದು, ದೂರುದಾರ ಹಾಗೂ ಆತನ ಸ್ನೇಹಿತನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮೊಹ್ಸಿನ್ ಮತ್ತು ಶೆಹಜಾದ್ ಅವರು ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ, ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆರೋಪಿಗಳನ್ನು ಆಟೋರಿಕ್ಷಾ ಚಾಲಕ ಸಲ್ಮಾನ್ (22) ಮತ್ತು ಮೊಬೈಲ್ ಕಿತ್ತುಕೊಂಡಿದ್ದ ಸದ್ದಾಂ (22) ಎಂದು ಗುರುತಿಸಲಾಗಿದೆ. ಇವರಿಬ್ಬರೂ ಇಲ್ಲಿನ ಸೀಲಂಪುರ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಮೊಹ್ಸಿನ್ ಮತ್ತು ಶೆಹಜಾದ್ ಅವರಿಗೆ ಸೋಮವಾರ ಅವರ ಧೈರ್ಯದ ಕಾರ್ಯಕ್ಕಾಗಿ ಪ್ರಶಂಸಾ ಪತ್ರದೊಂದಿಗೆ ತಲಾ 2,000 ರೂ ಬಹುಮಾನ ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
Bengaluru Crime: ವೃದ್ಧ ದಂಪತಿ ಮೇಲೆ ಹಲ್ಲೆಗೈದು ಚಿನ್ನ ದೋಚಲೆತ್ನ: ಬೆನ್ನಟ್ಟಿ ಹಿಡಿದ ಜನರು
ಈ ಬಗ್ಗೆ ಮಾತನಾಡಿದ ಉಪ ಪೊಲೀಸ್ ಕಮಿಷನರ್ (ಉತ್ತರ ವಿಭಾಗ) ಸಾಗರ್ ಸಿಂಗ್ ಕಲ್ಸಿ (Sagar Singh Kalsi), ಆರೋಪಿಗಳ ವಿರುದ್ಧ ವಜೀರಾಬಾದ್ ಪೊಲೀಸ್ ಠಾಣೆಯಲ್ಲಿ (Wazirabad police station) ಭಾರತೀಯ ದಂಡ ಸಂಹಿತೆಯ ಸೆಕ್ಷನ್ 392 (ದರೋಡೆ), 394 (ದರೋಡೆ ಮಾಡುವಲ್ಲಿ ಸ್ವಯಂಪ್ರೇರಣೆಯಿಂದ ಗಾಯವನ್ನುಂಟುಮಾಡುವುದು), 411 (ಕದ್ದ ಆಸ್ತಿಯನ್ನು ಅಪ್ರಾಮಾಣಿಕವಾಗಿ ಸ್ವೀಕರಿಸುವುದು) ಮತ್ತು ಸೆಕ್ಷನ್ 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದರು.
ಆರೋಪಿಗಳು ಸಾಮಾನ್ಯವಾಗಿ ಮುಂಜಾನೆಯೇ ಪ್ರತ್ಯೇಕ ಸ್ಥಳಗಳಲ್ಲಿ ಜನರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದರು. ಇವರಿಂದ ಅಪರಾಧ ಕೃತ್ಯಕ್ಕೆ ಬಳಸಿದ್ದ ಆಟೊರಿಕ್ಷಾ ಹಾಗೂ ಮೂರು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಮೊಬೈಲ್ ಫೋನ್‌ಗಳು ಸಹ ಕಳ್ಳತನದಿಂದ ಗಳಿಸಿದ್ದೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಅವರು ಹೇಳಿದರು.