ಇಬ್ಬರು ಮೊಬೈಲ್ ಕಳ್ಳರನ್ನು ಬೆನ್ನಟ್ಟಿ ಹಿಡಿದ ಪೊಲೀಸರು
ಬೆಂಗಳೂರಿನ ಹಲಸೂರಿನ ಇಂಡಿಯಾ ಗ್ಯಾರೇಜ್ ಬಳಿ ಘಟನೆ| ಆಟೋದಲ್ಲಿ ಬಂದು ಜನರಿಂದ ಮೊಬೈಲ್ ಎಗರಿಸಲು ಯತ್ನಿಸಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದ ಖದೀಮರು| ಮತ್ತೊಂದು ಆಟೋದಲ್ಲಿ ಬೆನ್ನಹತ್ತಿ ಹೋಗಿ ಆರೋಪಿಗಳನ್ನು ಬಂಧಿಸಿದ ಪೊಲೀಸರು|
ಬೆಂಗಳೂರು(ಮಾ.18): ನಗರದ ಹಲಸೂರು ಬಳಿಯ ಇಂಡಿಯಾ ಗ್ಯಾರೇಜ್ ಜಂಕ್ಷನ್ ಸಮೀಪ ಸಾರ್ವಜನಿಕರಿಂದ ಮೊಬೈಲ್ ಕಳ್ಳತನಕ್ಕೆ ಯತ್ನಿಸಿ ಪರಾರಿಯಾಗುತ್ತಿದ್ದ ಇಬ್ಬರು ಕಿಡಿಗೇಡಿಗಳನ್ನು ಬೆನ್ನಟ್ಟಿ ಹಲಸೂರು ಸಂಚಾರ ಠಾಣೆ ಮಹಿಳಾ ಸಬ್ ಇನ್‌ಸ್ಪೆಕ್ಟರ್ ಕವಿತಾ ನೇತೃತ್ವದ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಬಂಧಿತರು ಉತ್ತರ ಪ್ರದೇಶದ ಮೂಲದವರಾಗಿದ್ದು, ಇಂಡಿಯಾ ಗ್ಯಾರೇಜ್ ಜಂಕ್ಷನ್‌ನಲ್ಲಿ ಆಟೋದಲ್ಲಿ ಬಂದು ಜನರಿಂದ ಮೊಬೈಲ್ ಎಗರಿಸಲು ಯತ್ನಿಸಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಮುಂದಿನ ತನಿಖೆಗೆ ಆರೋಪಿಗಳನ್ನು ಕಾನೂನು ಮತ್ತು ಸುವ್ಯವಸ್ಥೆಗೆ ಠಾಣೆ ಪೊಲೀಸರಿಗೊಪ್ಪಿಸಲಾಗಿದೆ ಎಂದು ಪೂರ್ವ ವಿಭಾಗದ (ಸಂಚಾರ) ಡಿಸಿಪಿ ನಾರಾಯಣ್ ತಿಳಿಸಿದ್ದಾರೆ.
ಮಹಿಳೆಯ ಒಳ ಉಡುಪು ಕದ್ದವರು ಅಂದರ್!
ಇಂಡಿಯಾ ಗ್ಯಾರೇಜ್ ಸಮೀಪ ಮಂಗಳವಾರ ಬೆಳಗ್ಗೆ 7.15ರ ಸುಮಾರಿಗೆ ಪಿಎಸ್‌ಐ ಕವಿತಾ ಹಾಗೂ ಇಬ್ಬರು ಕಾನ್‌ಸ್ಟೇಬಲ್‌ಗಳು ಕರ್ತವ್ಯ ನಿರತರಾಗಿದ್ದರು. ಅದೇ ಹೊತ್ತಿಗೆ ಆಟೋದಲ್ಲಿ ಬಂದ ಕಿಡಿಗೇಡಿಗಳು, ಇಂಡಿಯಾ ಗ್ಯಾರೇಜ್‌ನ ಎಸಿಎಸ್ ಕಾಲೇಜು ಸಮೀಪ ಸಾರ್ವಜನಿಕರಿಂದ ಮೊಬೈಲ್ ಎಗರಿಸಲು ಯತ್ನಿಸಿದ್ದರು. ಈ ವೇಳೆ ಜನರು ರಕ್ಷಣೆಗೆ ಕೂಗಿಕೊಳ್ಳುತ್ತಿದ್ದಂತೆ ಆರೋಪಿಗಳು ಕಾಲ್ಕಿತ್ತಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ತಕ್ಷಣವೇ ಕಾರ್ಯಪ್ರವೃತ್ತರಾದ ಪಿಎಸ್‌ಐ ಕವಿತಾ ಹಾಗೂ ಕಾನ್‌ಸ್ಟೇಬಲ್‌ಗಳು, ಮತ್ತೊಂದು ಆಟೋದಲ್ಲಿ ಬೆನ್ನಹತ್ತಿ ಹೋಗಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.