ದೆಹಲಿಯಲ್ಲಿ ಚಲಿಸುತ್ತಿದ್ದ ಖಾಸಗಿ ಸ್ಲೀಪರ್ ಬಸ್‌ನಲ್ಲಿ 16 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಚಾಲಕ ಮತ್ತು ನಿರ್ವಾಹಕ ಸಾಮೂಹಿಕ ಅ*ಚಾರ ಎಸಗಿದ್ದಾರೆ. ಸುಮಾರು 47 ಕಿಲೋಮೀಟರ್ ದೂರದ ಪ್ರಯಾಣದಲ್ಲಿ ಈ ಘೋರ ಕೃತ್ಯ ನಡೆದಿದ್ದು, ದೆಹಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ನವದೆಹಲಿ (ಆ.31): 14 ವರ್ಷಗಳ ಹಿಂದೆ ಇಡೀ ದೇಶವೇ ತಲೆತಗ್ಗಿಸುವಂಥ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವರದಿಯಾಗಿತ್ತು. ನಿರ್ಭಯಾ ಕೇಸ್ ಬಳಿಕ ಮಹಿಳೆಯರ ಸುರಕ್ಷತೆ ದೃಷ್ಟಿಯಲ್ಲಿ ಸಾಕಷ್ಟು ಕಾನೂನು ತರಲಾಗಿದ್ದರೂ, ಅದ್ಯಾವುದೂ ಕಾಮಿಗಳನ್ನು ಕಟ್ಟಿಹಾಕಲು ಸಾಧ್ಯವಾಗುತ್ತಿಲ್ಲ ಅನ್ನೋದು ಸ್ಪಷ್ಟವಾಗಿದೆ. ನಿರ್ಭಯಾ ರೀತಿಯ ಮತ್ತೊಂದು ಕೇಸ್ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ನಡೆದಿದ್ದು, ಅತ್ಯಂತ ತಡವಾಗಿ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶ ಮೂಲದ 16 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳ ಮೇಲೆ ಚಲಿಸುತ್ತಿದ್ದ ಖಾಸಗಿ ಸ್ಲೀಪರ್ ಬಸ್‌ನಲ್ಲಿ ಭೀಕರವಾಗಿ ಸಾಮೂಹಿಕ ಅ*ಚಾರ ಎಸಗಲಾಗಿದೆ. ಸುಮಾರು 47 ಕಿಲೋಮೀಟರ್ ದೂರ ಚಲಿಸಿದ ಬಸ್‌ನಲ್ಲೇ ಈ ರಾಕ್ಷ ನಡೆದಿದ್ದು, ಕೃತ್ಯ ಎಸಗಿದ ಬಸ್ ಚಾಲಕ ಮತ್ತು ನಿರ್ವಾಹಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯ 11ನೇ ತರಗತಿ ವಿದ್ಯಾರ್ಥಿನಿಯಾಗಿರುವ ಸಂತ್ರಸ್ತೆ, ಕುಟುಂಬದವರೊಂದಿಗೆ ಉಂಟಾದ ಸಣ್ಣ ಮನಸ್ತಾಪದಿಂದಾಗಿ ಯಾರಿಗೂ ಹೇಳದೆ ಆಗಸ್ಟ್ 4 ರ ರಾತ್ರಿ ಮನೆಯಿಂದ ಹೊರಟಿದ್ದಳು. ನೋಯ್ಡಾದಲ್ಲಿರುವ ತನ್ನ ಸೋದರಸಂಬಂಧಿ ಮನೆಗೆ ತೆರಳಲು ನಿರ್ಧರಿಸಿದ್ದ ಆಕೆ, ಭಾರೀ ಮಳೆ ಮತ್ತು ಕತ್ತಲಿದ್ದ ಕಾರಣ ಗೊಂದಲಕ್ಕೊಳಗಾಗಿ ನೋಯ್ಡಾದ 'ಪರಿ ಚೌಕ್' (Pari Chowk) ಬಳಿ ತಪ್ಪಾಗಿ ಬಸ್‌ನಿಂದ ಇಳಿದುಕೊಂಡಿದ್ದಳು.
ಸಹಾಯಕ್ಕಾಗಿ ಕಾಯುತ್ತಿದ್ದ ಆಕೆಗೆ ಅದೇ ಮಾರ್ಗವಾಗಿ ಬಂದ ಖಾಲಿ ಸ್ಲೀಪರ್ ಬಸ್ ಕಾಣಿಸಿದೆ. ಮಳೆಯಿಂದ ಬಚಾವಾಗಲು ಆಕೆ ಬಸ್‌ಗೆ ಕೈ ತೋರಿಸಿ ನಿಲ್ಲಿಸಿದ್ದಾಳೆ. ಈ ವೇಳೆ ಬಸ್ ಚಾಲಕ ಮತ್ತು ನಿರ್ವಾಹಕ, ಈ ಬಸ್ ನೋಯ್ಡಾ ಸೆಕ್ಟರ್-63 ಕಡೆಗೆ ತೆರಳುತ್ತದೆ ಎಂದು ನಂಬಿಸಿ ಆಕೆಯನ್ನು ಬಸ್‌ಗೆ ಹತ್ತಿಸಿಕೊಂಡಿದ್ದಾರೆ.
47 ಕಿ.ಮೀ ಪಯಣದಲ್ಲಿ ಸಾಗಿದ ನರಕಯಾತನೆ
ಬಸ್ ಹೊರಡುತ್ತಿದ್ದಂತೆ ಕಾಮುಕ ನಿರ್ವಾಹಕ ಆಕೆಯೊಂದಿಗೆ ಅಶ್ಲೀಲವಾಗಿ ವರ್ತಿಸಲು ಪ್ರಾರಂಭಿಸಿದ್ದಾನೆ. ಸಂತ್ರಸ್ತೆ ತೀವ್ರ ವಿರೋಧ ವ್ಯಕ್ತಪಡಿಸಿದರೂ ಲೆಕ್ಕಿಸದ ಚಾಲಕ ಕುಲದೀಪ್ ಮತ್ತು ನಿರ್ವಾಹಕ ಸಂದೀಪ್, ಬಸ್‌ನಲ್ಲೇ ಆಕೆಯ ಮೇಲೆ ದೌರ್ಜನ್ಯ ಎಸಗಿದ್ದಾರೆ. ಕಿರುಚಾಡಿದರೆ ಕೊಲ್ಲುವುದಾಗಿ ಬೆದರಿಕೆಯನ್ನೂ ಹಾಕಿದ್ದಾರೆ.
ಈ ಸ್ಲೀಪರ್ ಬಸ್‌ಗೆ ಪರದೆಗಳನ್ನು (Curtains) ಅಳವಡಿಸಲಾಗಿದ್ದರಿಂದ, ಒಳಗಡೆ ನಡೆಯುತ್ತಿದ್ದ ಕೃತ್ಯ ಹೊರಗಿನವರಿಗೆ ಅಥವಾ ದಾರಿಹೋಕರಿಗೆ ಕಾಣಿಸುತ್ತಿರಲಿಲ್ಲ. ಈ ಪರದೆಗಳ ಮರೆಯಲ್ಲಿ ರೇ* ಎಸಗಿದ ಆರೋಪಿಗಳು, ಪರಿ ಚೌಕ್‌ನಿಂದ ಕಾಶ್ಮೀರಿ ಗೇಟ್‌ವರೆಗಿನ ಸುಮಾರು 47 ಕಿಲೋಮೀಟರ್ ಪ್ರಯಾಣದಾದ್ಯಂತ ಈ ಕೃತ್ಯವನ್ನು ಮುಂದುವರಿಸಿದ್ದಾರೆ. ಬಳಿಕ ತಡರಾತ್ರಿ ಕಾಶ್ಮೀರಿ ಗೇಟ್ ಬಸ್ ಟರ್ಮಿನಲ್ ಬಳಿಯ ರಿಂಗ್ ರೋಡ್‌ನಲ್ಲಿ ಸಂತ್ರಸ್ತೆಯನ್ನು ಬಸ್‌ನಿಂದ ಕೆಳಗೆ ತಳ್ಳಿ ಪರಾರಿಯಾಗಿದ್ದಾರೆ.
ಪೊಲೀಸರ ಕಾರ್ಯಾಚರಣೆ-ಆರೋಪಿಗಳ ಬಂಧನ
ಘಟನೆಯಿಂದ ತೀವ್ರ ಭಯಭೀತಳಾಗಿದ್ದ ವಿದ್ಯಾರ್ಥಿನಿ ತಕ್ಷಣವೇ ಕಾಶ್ಮೀರಿ ಗೇಟ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ಕಾರ್ಯಾಚರಣೆಗೆ ಇಳಿದು, ತಿಮಾರ್‌ಪುರದ ಬಸ್ ಪಾರ್ಕಿಂಗ್ ಲಾಟ್‌ನಲ್ಲಿ ಅಡಗಿ ಕುಳಿತಿದ್ದ ಆರೋಪಿಗಳಾದ ಚಾಲಕ ಕುಲದೀಪ್ ಮತ್ತು ನಿರ್ವಾಹಕ ಸಂದೀಪ್‌ನನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಸ್ಲೀಪರ್ ಬಸ್ ಅನ್ನು ಜಪ್ತಿ ಮಾಡಲಾಗಿದ್ದು, ವಿಧಿವಿಜ್ಞಾನ (Forensic) ಪರೀಕ್ಷೆಗೆ ಒಳಪಡಿಸಲಾಗಿದೆ.
ಪೊಲೀಸ್ ತನಿಖೆಯ ಪ್ರಕಾರ, ಬಸ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಆರೋಪಿಗಳು ಅದನ್ನು ಸುರಾಜ್‌ಪುರದ ಗ್ಯಾರೇಜ್‌ಗೆ ರಿಪೇರಿಗೆ ತೆಗೆದುಕೊಂಡು ಹೋಗಿದ್ದರು. ರಿಪೇರಿ ಮುಗಿಸಿಕೊಂಡು ಖಾಲಿ ಬಸ್ ಅನ್ನು ತಿಮಾರ್‌ಪುರಕ್ಕೆ ಚಲಾಯಿಸಿಕೊಂಡು ಬರುತ್ತಿದ್ದಾಗ, ಪರಿ ಚೌಕ್ ಬಳಿ ಒಂಟಿಯಾಗಿ ನಿಂತಿದ್ದ ವಿದ್ಯಾರ್ಥಿನಿ ಇವರ ಕಣ್ಣಿಗೆ ಬಿದ್ದಿದ್ದಳು. ಆಕೆಯ ಕಷ್ಟದ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಈ ಭೀಕರ ಕೃತ್ಯ ಎಸಗಿದ್ದಾರೆ. ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ.


