Mandya: ಮನೆಯಂಗಳದಲ್ಲಿ ಆಟವಾಡುತ್ತಿದ್ದ ಎರಡು ವರ್ಷದ ಮಗು ಆಕಸ್ಮಿಕವಾಗಿ ನೀರಿನ ಸಂಪಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ತಾಲೂಕಿನ ಲಕ್ಷ್ಮೀಸಾಗರದಲ್ಲಿ ನಡೆದಿದೆ. ವಿನೀಶ್ (ವಿನು) (2) ಮೃತ ಬಾಲಕ.
ಪಾಂಡವಪುರ (ಜೂ.14): ಮನೆಯಂಗಳದಲ್ಲಿ ಆಟವಾಡುತ್ತಿದ್ದ ಎರಡು ವರ್ಷದ ಮಗು ಆಕಸ್ಮಿಕವಾಗಿ ನೀರಿನ ಸಂಪಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ತಾಲೂಕಿನ ಲಕ್ಷ್ಮೀಸಾಗರದಲ್ಲಿ ನಡೆದಿದೆ. ಗ್ರಾಮದ ಸುಷ್ಮಾ ಮತ್ತು ಹರೀಶ್ ದಂಪತಿ ಪುತ್ರ ವಿನೀಶ್ (ವಿನು) (2) ಮೃತ ಬಾಲಕ.
ಮೃತ ಮಗುವಿನ ಪಾಲಕರು ಗ್ರಾಮದಲ್ಲಿ ಚಿಲ್ಲರೆ (ದಿನಸಿ) ಅಂಗಡಿ ನಡೆಸುತ್ತಿದ್ದರು. ಘಟನೆಗೂ ಮುನ್ನ ಮಗುವಿನ ತಂದೆ ಹರೀಶ್ ಕೆಲಸ ನಿಮಿತ್ತ ಮನೆಯಿಂದ ಹೊರಗೆ ಹೋಗಿದ್ದಾರೆ. ತಾಯಿ ಮನೆಗೆಲಸದಲ್ಲಿ ನಿರತರಾಗಿದ್ದರು. ಈ ವೇಳೆ ಮಗು ಮನೆಯಲ್ಲಿ ಚೆಂಡಿನೊಂದಿಗೆ ಆಟವಾಡುತ್ತಿದ್ದಾಗ ಚೆಂಡು ಆಕಸ್ಮಿಕವಾಗಿ ಸಂಪಿಗೆ ಉರುಳಿದೆ.
ಚೆಂಡನ್ನು ಹಿಂಬಾಲಿಸುತ್ತಾ ಹೋದ ಮಗು ಆಕಸ್ಮಿಕವಾಗಿ ಸಂಪಿಗೆ ಬಿದ್ದು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಮಗುವಿನ ಅಜ್ಜಿ ಮತ್ತು ತಾಯಿ ಮಗುವನ್ನು ತಂದೆ ಹೊರಗೆ ಕರೆದುಕೊಂಡು ಹೋಗಿರಬೇಕು ಎಂದು ಭಾವಿಸಿ ಸುಮ್ಮನಾಗಿದ್ದಾರೆ. ಹರೀಶ್ ಮನೆಗೆ ಹಿಂದಿರುಗಿದಾಗ ಮಗು ಕಾಣದಿರುವುದಕ್ಕೆ ಗಾಬರಿಗೊಂಡು ಹುಡುಕಾಟ ನಡೆಸಿದ್ದಾರೆ.
ಸಂಬಂಧಿಕರ ಆಕ್ರಂದನ
ಈ ವೇಳೆ ಮಗು ಸಂಪಿನಲ್ಲಿ ಕಂಡು ಬಂದಿದೆ. ತಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದೊಯ್ದರು. ಮಗು ಸಾವನ್ನಪ್ಪಿರುವುದನ್ನು ವೈದ್ಯರು ಧೃಡ ಪಡಿಸಿದ್ದಾರೆ. ಗ್ರಾಮದ ಹೊರವಲಯದ ಸ್ಮಶಾನದಲ್ಲಿ ಶವ ಸಂಸ್ಕಾರ ನಡೆಸಲಾಯಿತು. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ. ಎರಡು ವರ್ಷದ ಮಗು ಸಂಪಿಗೆ ಬಿದ್ದು ಸಾವನ್ನಪ್ಪಿದ ಸುದ್ದಿ ಹರಡುತ್ತಿದ್ದಂತೆ ಗ್ರಾಮದ ಜನರು ಮನೆ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ವಿಧಿಯ ಆಟಕ್ಕೆ ಶಪಿಸಿದರು. ಗ್ರಾಮಸ್ಥರು, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.


