ಚಾಮರಾಜನಗರದಲ್ಲಿ ಮನಿ ಡಬ್ಲಿಂಗ್ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಂದ 3 ಲಕ್ಷ ರೂಪಾಯಿ ವಂಚಿಸಲಾಗಿದೆ. ಆಘಾತಕಾರಿಯಾಗಿ, ಈ ವಂಚನೆಯಲ್ಲಿ ಪೊಲೀಸರೇ ಶಾಮೀಲಾಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಒಟ್ಟು ಏಳು ಮಂದಿಯ ವಿರುದ್ಧ ದೂರು ದಾಖಲಾಗಿದೆ.

ಚಾಮರಾಜನಗರ (ಜುಲೈ.27): ಮನಿ ಡಬ್ಲಿಂಗ್ ಮಾಡಿಕೊಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ವಂಚಿಸಿದ ಘಟನೆಯೊಂದು ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದ್ದು, ಆಘಾತಕಾರಿಯೆಂದರೆ ಈ ವಂಚನೆಗೆ ಪೊಲೀಸರೇ ಸಾಥ್ ನೀಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ತಮಿಳುನಾಡು ಮೂಲದ ಸಚ್ಚಿದಾನಂದಮೂರ್ತಿ ಎಂಬವರು ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಎಫ್‌ಐಆರ್ ಪ್ರಕಾರ, ಅನ್ಸಾರಿ ಎಂಬಾತನು ಮನಿ ಡಬ್ಲಿಂಗ್ ಮಾಡಿಕೊಡುವುದಾಗಿ ಸಚ್ಚಿದಾನಂದಮೂರ್ತಿಯವರಿಗೆ ನಂಬಿಸಿದ್ದಾನೆ. ಈ ಮಾತಿನ ಮೇಲೆ ಭರವಸೆಯಿಟ್ಟು ಸಚ್ಚಿದಾನಂದಮೂರ್ತಿ 3 ಲಕ್ಷ ರೂಪಾಯಿಗಳನ್ನು ಅವರು ಹೇಳಿದ್ದ ಖಾಸಗಿ ಹೋಟೆಲ್‌ನ ರೂಂಗೆ ತಂದಿದ್ದಾರೆ. ಮೂರು ಲಕ್ಷ ರೂಪಾಯಿಗಳನ್ನು ಕೊಡುತ್ತಿದ್ದ ವೇಳೆ ದಿಢೀರ್ ಪೊಲೀಸರು ದಾಳಿ ನಡೆಸಿದ್ದಾರೆ. ಈ ದಾಳಿಯ ವೇಳೆ ಪೊಲೀಸರು 3 ಲಕ್ಷ ರೂಪಾಯಿಗಳನ್ನು ಕಿತ್ತುಕೊಂಡು, ಮತ್ತೆ ಒಂದು ಲಕ್ಷ ರೂಪಾಯಿ ಕೊಡುವಂತೆ ಸಚ್ಚಿದಾನಂದಮೂರ್ತಿಯವರಿಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಇದೇ ವೇಳೆ, ಸೈಯದ್ ಇಮ್ರಾನ್ ಎಂಬಾತನ ಖಾತೆಗೆ 70 ಸಾವಿರ ರೂಪಾಯಿಗಳನ್ನು ಗೂಗಲ್ ಪೇ ಮೂಲಕ ವರ್ಗಾಯಿಸುವಂತೆ ಪೊಲೀಸರು ಒತ್ತಾಯಿಸಿದ್ದಾರೆ. ಪಿಎಸ್‌ಐ ಸೇರಿದಂತೆ ಮೂವರು ಪೊಲೀಸರು ಈ ವಂಚನೆಯಲ್ಲಿ ಆರೋಪಿಗಳೊಂದಿಗೆ ಸೇರಿಕೊಂಡು ಪೂರ್ವನಿಯೋಜಿತವಾಗಿ ಕೃತ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಒಟ್ಟು ಏಳು ಮಂದಿಯ ವಿರುದ್ಧ ದೂರು ದಾಖಲಾಗಿದೆ.

ಈ ಘಟನೆಯಿಂದಾಗಿ ಚಾಮರಾಜನಗರದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಪೊಲೀಸರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ ಕೇಳಿಬಂದಿದೆ. ಮನಿ ಡಬ್ಲಿಂಗ್, ವಂಚನೆ ವಿರುದ್ಧ ಕ್ರಮ ಜರುಗಿಸಬೇಕಾದ ಪೊಲೀಸರೇ ವಂಚಕರೊಂದಿಗೆ ಸೇರಿಕೊಂಡ ಅಮಾಯಕ ಜನರ ಹಣ ದೋಚುತ್ತಿರುವುದು ಇಡೀ ಪೊಲೀಸ್ ಇಲಾಖೆ ಕಳಂಕವಾಗಿದೆ.