ಸುವರ್ಣಾವತಿ ಹೊಳೆ ದಡದಲ್ಲಿ ಪತ್ತೆಯಾದ ಸೋನಾಕ್ಷಿ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಆಕೆಯ ಪ್ರಿಯಕರ ಮಾದೇಶನೇ ಹಂತಕ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಮತ್ತೊಬ್ಬನ ಜೊತೆ ಸಂಪರ್ಕ ಬೆಳೆಸಿದ್ದಕ್ಕೆ ಸಿಟ್ಟಿನಿಂದ ಈ ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ.

ಕೊಳ್ಳೇಗಾಲ (ಜೂ.21): ಸುವರ್ಣಾವತಿ ಹೊಳೆ ದಡದಲ್ಲಿ ದೊರೆತಿದ್ದ ಸೋನಾಕ್ಷಿ ಎಂಬ ಮಹಿಳೆಯ ಬ್ರೂಟಲ್ ಕೊಲೆ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದೆ. ಆಕೆಯ ಪ್ರಿಯಕರ ಮಾದೇಶನಿಂದಲೇ ಈ ಭೀಕರ ಹತ್ಯೆ ನಡೆದಿರುವುದು ಬೆಳಕಿಗೆ ಬಂದಿದೆ.

ಗಂಡ-ಮಕ್ಕಳನ್ನು ಬಿಟ್ಟು ಪ್ರಿಯಕರನ ಸಹವಾಸ ಮಾಡಿ ಬೀದಿ ಹೆಣವಾದಳು ಸೋನಾಕ್ಷಿ, ಮದುವೆಯಾಗಿದ್ರೂ ಮಕ್ಕಳಿದ್ರೂ ಮಾದೇಶನ ಜೊತೆಗೆ ಪ್ರೇಮ ಸಂಬಂಧ ಹೊಂದಿದ್ದ ಸೋನಾಕ್ಷಿ ಬಳಿಕ ಮತ್ತೊರ್ವನ ಜೊತೆ ಸಂಪರ್ಕ ಬೆಳೆಸಿದ್ದಳು ಎನ್ನಲಾಗಿದೆ. ಈ ವಿಚಾರವನ್ನು ಮಾದೇಶ, ಸೋನಾಕ್ಷಿಯ ಕುಟುಂಬಸ್ಥರಿಗೆ ತಿಳಿಸಿದ್ದನು. ಇದರಿಂದ ಇಬ್ಬರ ನಡುವೆ ಜಗಳ ಉಂಟಾಗಿತ್ತು.

ನಾಲ್ಕು ದಿನಗಳ ಹಿಂದೆ ಮಾದೇಶ, ಸೋನಾಕ್ಷಿಯನ್ನು ಮನೆಗೆ ಕರೆಸಿಕೊಂಡಿದ್ದ. ವಾಗ್ವಾದ ತಾರಕಕ್ಕೇರಿದಾಗ, ಕೋಪಗೊಂಡ ಮಾದೇಶ ಸೋನಾಕ್ಷಿಯ ತಲೆಗೆ ಹೊಡೆದಿದ್ದಾನೆ. ಒಂದೇ ಏಟಿಗೆ ಸೋನಾಕ್ಷಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ನಂತರ, ಪಾತಕಿ ಮಾದೇಶ ಆಕೆಯ ಮೃತದೇಹವನ್ನು ಸುವರ್ಣಾವತಿ ಹೊಳೆ ದಡಕ್ಕೆ ತಂದು ಹೂತಿದ್ದಾನೆ.

ಕೊಳ್ಳೇಗಾಲ ಪಟ್ಟಣ ಠಾಣೆ ಪೊಲೀಸರು ಆರೋಪಿ ಮಾದೇಶನನ್ನು ಬಂಧಿಸಿ, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಈ ಘಟನೆ ಚಾಮರಾಜನಗರ ಜಿಲ್ಲೆಯ ಹಳೆ ಹಂಪಾಪುರದಲ್ಲಿ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.