ಭಟ್ಕಳದ ಶಂಕಿತ ಉಗ್ರ ಗೋವಾ ಮೂಲಕ ದಿಲ್ಲಿಗೆ
* ಜಫ್ರಿ ಜವ್ಹಾರ್ ದಾಮುದಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಎನ್‌ಐಎ
* ಈತನ ಕುರಿತು ಎನ್‌ಐಎ ತಂಡಕ್ಕೆ ಲಭಿಸಿದ ಬಲವಾದ ಸಾಕ್ಷ್ಯ
* ಶಂಕಿತ ಉಗ್ರನನ್ನ ದೆಹಲಿಗೆ ಕರೆದುಕೊಂಡು ಹೋದ NIA
ಭಟ್ಕಳ(ಆ.08): ಸಿರಿಯಾ ಮೂಲದ ಐಸಿಸ್ ಹಾಗೂ ಉಗ್ರ ಸಂಘಟನೆಗಳ ಜತೆ ನಂಟಿರುವ ಶಂಕೆ ಮೇರೆಗೆ ಶುಕ್ರವಾರ ಭಟ್ಕಳದಲ್ಲಿ ಬಂಧಿತನಾಗಿರುವ ಜಫ್ರಿ ಜವ್ಹಾರ್ ದಾಮುದಿಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಶನಿವಾರ ಹೊನ್ನಾವರ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.
ಹೆಚ್ಚಿನ ವಿಚಾರಣೆಗಾಗಿ ಆತನನ್ನು ಅಧಿಕಾರಿಗಳು ಮತ್ತೆ ತಮ್ಮ ವಶಕ್ಕೆ ಪಡೆದು, ದೆಹಲಿಗೆ ಕರೆದುಕೊಂಡು ಹೋಗಿದ್ದಾರೆ. ಎನ್‌ಐಎ ಎಸ್‌ಪಿ ದಿನೇಶ್ ಗುಪ್ತ ನೇತೃತ್ವದ ತಂಡದಿಂದ ಬಂಧಿತ ಆರೋಪಿಯನ್ನು ಭದ್ರತೆಯ ದೃಷ್ಟಿಯಿಂದ ರಾತ್ರಿ ಹೊನ್ನಾವರದ ಮಂಕಿ ಪೊಲೀಸ್ ಠಾಣೆಯ ಕೊಠಡಿಯಲ್ಲಿರಿಸಿ ವಿಚಾರಣೆ ನಡೆಸಲಾಗಿದೆ ಎನ್ನಲಾಗಿದೆ. ಈತನ ಕುರಿತು ಎನ್‌ಐಎ ತಂಡಕ್ಕೆ ಬಲವಾದ ಸಾಕ್ಷ್ಯ ಲಭಿಸಿದೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಶನಿವಾರವೇ ಗೋವಾ ಮೂಲಕ ದೆಹಲಿಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.
ಉಗ್ರ ನಂಟು; NIAಯಿಂದ ಭಟ್ಕಳದಲ್ಲಿ ಮೂವರು ವಶಕ್ಕೆ
ಎನ್‌ಐಎ ತಂಡ ಶಂಕೆಯ ಮೇರೆಗೆ ಜಫ್ರಿ ದಾಮುದಿಯ ಜತೆಗೆ ಮತ್ತೆ ಕೆಲವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದು, ಶುಕ್ರವಾರ ರಾತ್ರಿಯೇ ಅವರನ್ನು ಬಿಡುಗಡೆ ಮಾಡಿರುವುದು ತಿಳಿದು ಬಂದಿದೆ.