ಸೋಲದೇವನಹಳ್ಳಿಯ ಚಿಕ್ಕಬಾಣಾವರದ ಬಾರ್ ಬಳಿ ನಡೆದ ಕ್ಷುಲ್ಲಕ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. 27 ವರ್ಷದ ರೌಡಿಶೀಟರ್ ಪ್ರತಾಪ್‌ನನ್ನು ಹತ್ಯೆ ಮಾಡಲಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಬೆಂಗಳೂರು (ಆ.9): ರಾಜಧಾನಿ ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಬಾಣಾವರದ ಬಾರ್ ಬಳಿ ನಡೆದ ಕ್ಷುಲ್ಲಕ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. 27 ವರ್ಷದ ರೌಡಿಶೀಟರ್ ಪ್ರತಾಪ್ ಎಂಬಾತನನ್ನು ಹತ್ಯೆ ಮಾಡಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಅಕ್ಷಯ್ @ ಕುಮಾರಿ, ತೇಜಸ್ ಮತ್ತು ಲಿಕಿತ್ ಎಂದು ಗುರುತಿಸಲಾಗಿದೆ. ಈ ಮೂವರು ಕೆಬ್ಬೆಪಾಳ್ಯ ನಿವಾಸಿಗಳಾಗಿದ್ದಾರೆ.
ಘಟನೆ ನಡೆದಿದ್ದು ಹೇಗೆ?: ನಿನ್ನೆ ತಡರಾತ್ರಿ 12 ಗಂಟೆ ಸುಮಾರಿಗೆ ಗುರು ಕೃಪಾ ಬಾರ್ ಮುಚ್ಚಿದ್ದ ಕಾರಣ ಬಾರ್ ಬಳಿ ಪ್ರತಾಪ್ ಮತ್ತು ಮೂವರು ಆರೋಪಿಗಳು ಅಪರಿಚಿತರಾಗಿ ಭೇಟಿಯಾಗಿದ್ದಾರೆ. ಈ ವೇಳೆ, 'ಬಾರ್ ಕ್ಲೋಸ್ ಆಗಿದೆ, ಹೋಗಿ' ಎಂದು ಪ್ರತಾಪ್ ಹೇಳಿದ್ದಾನೆ. ಇದರಿಂದ ಮಾತಿಗೆ ಮಾತು ಬೆಳೆದು ಚಕಮಕಿ ನಡೆದಿದೆ.
ಆರೋಪಿಗಳು ಅಲ್ಲಿಂದ ತೆರಳಿದ ನಂತರ ಮನೆಗೆ ಹೋಗಿ ಡ್ರ್ಯಾಗರ್ ತಂದಿದ್ದಾರೆ. ಬಾರ್‌ನಿಂದ ಮನೆಯ ಕಡೆ ನಡೆದುಕೊಂಡು ಹೋಗುತ್ತಿದ್ದ ಪ್ರತಾಪ್‌ನನ್ನು ಹಿಂಬಾಲಿಸಿ ಬೈಕ್‌ನಲ್ಲಿ ಬಂದ ಆರೋಪಿಗಳು ಡ್ರ್ಯಾಗರ್‌ನಿಂದ ಇರಿದಿದ್ದಾರೆ. ಬೈಕ್‌ನಲ್ಲಿ ವೇಗವಾಗಿ ಬಂದು ಇರಿದ ಕಾರಣ ಡ್ರ್ಯಾಗರ್ ಪ್ರತಾಪ್‌ನ ಹೊಟ್ಟೆ ಸೀಳಿದೆ. ಸ್ಥಳದಲ್ಲೇ ಕುಸಿದು ಬಿದ್ದ ಪ್ರತಾಪ್ ಸಾವನ್ನಪ್ಪಿದ್ದಾನೆ.
ಈ ಪ್ರಕರಣದ ಕುರಿತು ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
