ಫ್ರೀ ಫೈರ್ ಗೇಮ್ ಚಟಕ್ಕೆ ಬಿದ್ದಿದ್ದ ಬಾಲಕನನ್ನು ಆತನ ಮಾವನೇ ಕೊಲೆಗೈದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹಣಕ್ಕಾಗಿ ಪೀಡಿಸುತ್ತಿದ್ದ ಬಾಲಕನ ಕಿರುಕುಳ ತಾಳಲಾರದೆ ಮಾವ ಈ ಕೃತ್ಯ ಎಸಗಿ ಬಳಿಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಬೆಂಗಳೂರು (ಆ.08): ಮೊಬೈಲ್ ಗೇಮ್ ಚಟಕ್ಕೆ ಬಿದ್ದು ಹಣಕ್ಕಾಗಿ ಹಲ್ಲೆ ನಡೆಸುತ್ತಿದ್ದ ಸೋದರಳಿಯನಿಂದ ಬೇಸತ್ತ ಮಾವನೊಬ್ಬ ಆತನನ್ನು ಕೊಲೆ ಮಾಡಿ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆ ನಡೆದು ಒಂದು ವಾರದ ಬಳಿಕ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ.
ಕೊಲೆಯಾದ ಬಾಲಕನನ್ನು ಕುಂಬಾರಹಳ್ಳಿಯ ವಿನಾಯಕ ಲೇಔಟ್ ನಿವಾಸಿ ಅಮೋಘ ಕೀರ್ತಿ (14) ಎಂದು ಗುರುತಿಸಲಾಗಿದೆ. ಈ ಕೃತ್ಯ ಎಸಗಿದ ಆರೋಪಿ ಆತನ ಮಾವ ನಾಗಪ್ರಸಾದ್ (50). ಅಮೋಘ ಕೀರ್ತಿ, ತನ್ನ ತಾಯಿ ಶಿಲ್ಪಾ ಅವರ ಸಹೋದರ ನಾಗಪ್ರಸಾದ್ ಅವರೊಂದಿಗೆ ಕಳೆದ 8 ತಿಂಗಳಿಂದ ವಾಸವಾಗಿದ್ದನು.
ಈ ಸಮಯದಲ್ಲಿ, ಬಾಲಕ ಫ್ರೀ ಫೈರ್ ಮೊಬೈಲ್ ಗೇಮ್‌ಗೆ ದಾಸನಾಗಿದ್ದ. ಗೇಮ್ ಆಡಲು ಪದೇ ಪದೇ ಹಣಕ್ಕಾಗಿ ಮಾವ ನಾಗಪ್ರಸಾದ್ ಅವರಿಗೆ ಪೀಡಿಸುತ್ತಿದ್ದ. ಹಣ ನೀಡಲು ನಿರಾಕರಿಸಿದಾಗ ಆತನ ಮೇಲೆ ಹಲ್ಲೆ ಕೂಡ ನಡೆಸಿದ್ದ ಎಂದು ತಿಳಿದುಬಂದಿದೆ. ಇದರಿಂದ ಬೇಸತ್ತಿದ್ದ ನಾಗಪ್ರಸಾದ್, ಈ ಕಿರುಕುಳಕ್ಕೆ ಅಂತ್ಯ ಹಾಡಲು ನಿರ್ಧರಿಸಿದ್ದನು.
ಸೋಮವಾರ ಬೆಳಗಿನ ಜಾವ ಸುಮಾರು 4.30ರ ಸುಮಾರಿಗೆ ಅಮೋಘ ಕೀರ್ತಿ ನಿದ್ರೆಯಲ್ಲಿದ್ದಾಗ ನಾಗಪ್ರಸಾದ್ ಆತನ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ನಂತರ, ಆತ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದನು. ಆದರೆ, ಆತನ ಬಳಿ ಹಣವಿಲ್ಲದ ಕಾರಣ ಮೆಜೆಸ್ಟಿಕ್‌ನಲ್ಲಿ ಮೂರು ದಿನ ಅಲೆದಾಡಿದ್ದಾನೆ. ಕೊನೆಗೆ ತಪ್ಪಿತಸ್ಥ ಮನೋಭಾವದಿಂದ ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಕೊಲೆಯಾದ ಬಾಲಕನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿ ಎಫ್‌ಐಆರ್ ದಾಖಲಿಸಿಕೊಂಡು ಆರೋಪಿ ನಾಗಪ್ರಸಾದ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಿದ್ದಾರೆ. ಮೊಬೈಲ್ ಗೇಮ್‌ನ ದುಷ್ಪರಿಣಾಮದಿಂದ ಸೃಷ್ಟಿಯಾದ ಈ ದುರಂತವು ಸಮಾಜದಲ್ಲಿ ಆತಂಕಕ್ಕೆ ಕಾರಣವಾಗಿದೆ.
