ಸಹಪಾಠಿಗಳು, ಸ್ನೇಹಿತರ ಜೊತೆ ಮೋಜಿಗೆ ಅಥವಾ ಒತ್ತಾಯಕ್ಕೆ ಮಣಿದು ಗಾಂಜಾ ಸೇದುವ ಶಾಲಾ-ಕಾಲೇಜು ವಿದ್ಯಾರ್ಥಿಗಳು ನಂತರ ಮಾದಕವಸ್ತು ವ್ಯಸನಿಗಳಾಗುತ್ತಿದ್ದಾರೆ. ಹದಿಹರೆಯದಲ್ಲಿ ಮೊದ ಮೊದಲು ಮಾದಕ ವಸ್ತುವಿನ ಅನುಭವ ಪಡೆದಾಗ ಆಗುವ ಅಮಲು, ಖುಷಿ ಬರ ಬರುತ್ತಾ ಬೇಕೇ ಬೇಕು ಎನ್ನುವ ಹಂತಕ್ಕೆ ತಲುಪುತ್ತದೆ.
ಮಂಜುನಾಥ್ ನಾಗಲೀಕರ್
ಬೆಂಗಳೂರು : ಸಹಪಾಠಿಗಳು, ಸ್ನೇಹಿತರ ಜೊತೆ ಮೋಜಿಗೆ ಅಥವಾ ಒತ್ತಾಯಕ್ಕೆ (ಪೀರ್ ಪ್ರೆಷರ್) ಮಣಿದು ಗಾಂಜಾ ಸೇದುವ ಶಾಲಾ-ಕಾಲೇಜು ವಿದ್ಯಾರ್ಥಿಗಳು ನಂತರ ಮಾದಕವಸ್ತು ವ್ಯಸನಿಗಳಾಗುತ್ತಿದ್ದಾರೆ.
ಹದಿಹರೆಯದಲ್ಲಿ ಮೊದ ಮೊದಲು ಮಾದಕ ವಸ್ತುವಿನ ಅನುಭವ ಪಡೆದಾಗ ಆಗುವ ಅಮಲು, ಖುಷಿ ಬರ ಬರುತ್ತಾ ಬೇಕೇ ಬೇಕು ಎನ್ನುವ ಹಂತಕ್ಕೆ ತಲುಪುತ್ತದೆ. ಹಣವಂತರು, ಶ್ರೀಮಂತರ ಮಕ್ಕಳಿಗೆ ಸೀಮಿತವಾಗಿದ್ದ ಮಾದಕವಸ್ತು ಅಮಲಿನ ಹವ್ಯಾಸ ಇತ್ತೀಚೆಗೆ ಎಲ್ಲ ವರ್ಗದ ಮಕ್ಕಳನ್ನು ಸುತ್ತಿಕೊಳ್ಳುತ್ತಿದೆ. ಮಾನಸಿಕ, ದೈಹಿಕ ಮತ್ತು ಶೈಕ್ಷಣಿಕ ಬೆಳವಣಿಗೆಗೆ ಅಡ್ಡಿಯಾಗುತ್ತಿದೆ. ದೊಡ್ಡ ಸಾಮಾಜಿಕ ಪಿಡುಗು ಆಗಿ ಪರಿವರ್ತನೆಯಾಗಿದೆ.
ಮಾದಕ ವಸ್ತುಗಳಿಗೆ ಮಕ್ಕಳು ದಾಸರಾಗಲು ಅತ್ಯಂತ ಸರಳವಾಗಿ ಸಿಗುವ ಸಿಗರೇಟು ಮತ್ತು ತಂಬಾಕು ಉತ್ಪನ್ನಗಳು ಬಹುದೊಡ್ಡ ಕೊಡುಗೆ ನೀಡುತ್ತಿವೆ. ರಾಜ್ಯದಲ್ಲಿ ಬಿಡಿಯಾಗಿ ಸಿಗರೇಟು ಮಾರಾಟ ನಿಷೇಧಿಸಲಾಗಿದೆ. ಆದರೂ, ಎಲ್ಲೆಡೆ ಅವ್ಯಾಹತವಾಗಿ ಮಾರಾಟ ಮಾಡಲಾಗುತ್ತದೆ. ಇನ್ನು ಶಾಲಾ-ಕಾಲೇಜುಗಳ ಆವರಣದಿಂದ 100 ಮೀಟರ್ ಒಳಗೆ ಸಿಗರೇಟು ಮಾರಾಟ ಮಾಡುವಂತಿಲ್ಲ. ಆದರೂ, ಅನೇಕ ಕಡೆ ಬಿಡಿ ಸಿಗರೇಟು ಅವ್ಯಾಹತವಾಗಿ ಮಾರಾಟವಾಗುತ್ತಿದೆ. ಮಕ್ಕಳು ಮಾದಕ ವ್ಯಸನಕ್ಕೆ ದಾಸರಾಗುವ ಮೊದಲ ಮೆಟ್ಟಿಲು ಈ ‘ಬಿಡಿ ಸಿಗರೇಟು’ ಎನ್ನುತ್ತಾರೆ ಶಿಕ್ಷಣ ಕ್ಷೇತ್ರದ ಪ್ರಮುಖರು.
ಸುಲಭವಾಗಿ ಸಿಗುತ್ತದೆ ಗಾಂಜಾ:
ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಗಾಂಜಾ ಬಳಕೆ ಹೆಚ್ಚಾಗಿದೆ. ಕೆಲ ವರ್ಷಗಳ ಹಿಂದೆ ಸೊಪ್ಪಿನ ರೂಪದಲ್ಲಿ ಗಾಂಜಾ ಸಿಗುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಜೆಲ್ಲಿ, ಚಾಕೋಲೆಟ್, ಬಿಸ್ಕತ್, ಕ್ಯಾಂಡಿ ಮುಂತಾದ ರೂಪದಲ್ಲಿ ಸಿಗುತ್ತಿದೆ. ವಿದೇಶಗಳಿಂದ ಬೆಂಗಳೂರಿಗೆ ಕಳ್ಳ ಸಾಗಣೆಯಾಗುವ ಈ ಅಮಲು ಪದಾರ್ಥಗಳು, ನೈಜ ಚಾಕೋಲೆಟ್, ಕ್ಯಾಂಡಿಯಂತೆ ಮಕ್ಕಳಿಗೆ ಸುಲಭವಾಗಿ ಸಿಗುತ್ತಿವೆ. ಮಾದಕವಸ್ತುಗಳ ನಿಯಂತ್ರಣ ಬಗ್ಗೆ ಶಿಕ್ಷಣ ಇಲಾಖೆ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೂ ಮನವಿ ಸಲ್ಲಿಸಲಾಗಿದೆ ಎಂದು ಖಾಸಗಿ ಶಾಲೆಗಳ ಸಂಘಟನೆಯಾಗಿರುವ ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಹೇಳಿದರು.
ಅಪ್ರಾಪ್ತ ಗಾಂಜಾ ವ್ಯಸನಿಗಳೇ ಪೆಡ್ಲರ್‌ಗಳು!:
ಮೋಜಿಗೆ, ಸ್ನೇಹಿತರ ಒತ್ತಾಯಕ್ಕೆ ಗಾಂಜಾ, ಮಾದಕವಸ್ತು ಸೇವಿಸುವ ವಿದ್ಯಾರ್ಥಿಗಳನ್ನೇ ಹೆದರಿಸಿ, ಬೆದರಿಸಿ, ಹಣದ ಅಮಿಷವೊಡ್ಡಿ ಡ್ರಗ್ಸ್ ಪೆಡ್ಲರ್‌ಗಳನ್ನಾಗಿ ಪರಿವರ್ತಿಸಲಾಗುತ್ತದೆ. ಮಾದಕವಸ್ತುಗಳ ಮಾರಾಟಗಾರರು 12 ವರ್ಷದ ಬಾಲಕನಿಗೆ ಬೆದರಿಸಿ ಡ್ರಗ್ ಪೆಡ್ಲರ್ ಆಗಿ ಪರಿವರ್ತಿಸಿದ್ದರು. ಹೀಗೆ, ಡ್ರಗ್ಸ್ ಜಾಲಕ್ಕೆ ಸಿಲುಕುವ ಮಕ್ಕಳು ತಮ್ಮ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ತಿಳಿಸಿದರು.
ಮಕ್ಕಳಿಗೆ ಹೇಗೆ ಸಿಗುತ್ತದೆ ಮಾದಕವಸ್ತು?:
ಗಾಂಜಾ ಸೇದುವ ವಿದ್ಯಾರ್ಥಿಗಳ ಗುಂಪಿಗೆ ಪರಿಚಯ ಇರುವ ಪೆಡ್ಲರ್‌ಗಳು ವಿಶ್ವಾಸದ ಮೇಲೆ ಮಾರಾಟ ಮಾಡುತ್ತಾರೆ. ಪೊಲೀಸರಿಗೆ ಅಥವಾ ಮಾಹಿತಿದಾರರಿಗೆ ಯಾವುದೇ ಮಾಹಿತಿ ಸೋರಿಕೆಯಾಗದಂತೆ ದಂಧೆ ನಡೆಯುತ್ತದೆ. ಇನ್ನು ವಿದ್ಯಾರ್ಥಿಗಳ ಗುಂಪು 20 ರು, 50 ರು, 100 ರು. ಜಮೆ ಮಾಡಿಕೊಂಡು ಒಂದು ದೊಡ್ಡ ಮೊತ್ತ ಮಾಡಿಕೊಂಡು ಮಾದಕವಸ್ತು ಖರೀದಿಸುತ್ತಾರೆ. ಮೊದಲು ಗಾಂಜಾ ಖರೀದಿಸಿ, ನಂತರ ಇನ್ನಿತರ ಮಾದಕವಸ್ತು ಖರೀದಿಸಲು ಆರಂಭಿಸುತ್ತಾರೆ.
ಬಿಡಿ ಸಿಗರೇಟು ಮಾರಾಟ ಮೇಲೆ ನಿಯಂತ್ರಣ ಬೇಕು:
ಶಾಲಾ-ಕಾಲೇಜು ವಿದ್ಯಾರ್ಥಿಗಳು ಮಾದಕವಸ್ತು ಬಲೆಗೆ ಜಾರುವ ಮೊದಲು ಸಿಗರೇಟು, ತಂಬಾಕು ಸೇವನೆ ಹವ್ಯಾಸಕ್ಕೆ ಬೀಳುತ್ತಾರೆ. ಶಾಲಾ-ಕಾಲೇಜುಗಳ ಬಳಿ ನಿಷೇಧಿಸಿದ್ದರೂ ಅವ್ಯಾಹತವಾಗಿ ಬಿಡಿಯಾಗಿ ಸಿಗರೇಟು ಮಾರಾಟ ನಿಯಂತ್ರಿಸಬೇಕಿದೆ. ಬಿಡಿಯಾಗಿ ಮಾರಾಟ ಮಾಡುವವರ ವಿರುದ್ಧ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಬೇಕು. ತಂಬಾಕು ಉತ್ಪನ್ನಗಳ ಕಾಯ್ದೆ ಪರಿಣಾಮಕಾರಿ ಜಾರಿಯಾದರೆ ಮಕ್ಕಳನ್ನು ಮಾದಕ ವ್ಯಸನಗಳಿಂದ ದೂರ ಮಾಡಬಹುದು.
ಸಾಮೂಹಿಕ ಜವಾಬ್ದಾರಿ ಅಗತ್ಯ:
ಇತ್ತೀಚಿನ ದಿನಗಳಲ್ಲಿ ಮಕ್ಕಳು ಮಾದಕವಸ್ತುಗಳಿಗೆ ಬಲಿಯಾಗುತ್ತಿರುವುದು ಆತಂಕಕಾರಿ. ಇದನ್ನು ನಿಯಂತ್ರಿಸಲು ಮಕ್ಕಳಪಾಲಕರು, ಶಿಕ್ಷಣ ಸಂಸ್ಥೆಗಳು, ಪೊಲೀಸ್ ಇಲಾಖೆ ಮತ್ತು ಸರ್ಕಾರ ಸೇರಿ ಸಾಮೂಹಿಕ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ್ ಎಸ್. ಕೊಸುಂಬೆ ಹೇಳಿದರು.
ಮಕ್ಕಳ ದೈನಂದಿನ ಚಟುವಟಿಕೆಗಳ ಮೇಲೆ ಪಾಲಕರು ನಿಗಾ ಇಡಬೇಕು. ದುಶ್ಚಟಗಳ ಅಪಾಯಗಳ ಕುರಿತು ಸೂಕ್ತ ರೀತಿಯಲ್ಲಿ ತಿಳಿವಳಿಕೆ ನೀಡಬೇಕು. ಅದೇ ರೀತಿ ಶಾಲಾ-ಕಾಲೇಜುಗಳಲ್ಲೂ ನಿಯಮಿತವಾಗಿ ಜಾಗೃತಿ ಮೂಡಿಸಬೇಕು. ಚಟಗಳಿಗೆ ದಾಸರಾಗಿ ದಾರಿ ತಪ್ಪುತ್ತಿರುವ ಮಕ್ಕಳನ್ನು ಅವರ ವರ್ತನೆಯಿಂದಲೇ ಪಾಲಕರು ಮತ್ತು ಶಿಕ್ಷಕರು ಗುರುತಿಸಲು ಸಾಧ್ಯವಿದೆ.
ಕರ್ನಾಟಕದ ಶಾಲಾ-ಕಾಲೇಜುಗಳ ಮಕ್ಕಳು, ಅದರಲ್ಲೂ ಬೆಂಗಳೂರಿನ ಮಕ್ಕಳು ಮಾದಕವಸ್ತುಗಳಿಗೆ ಬಲಿಯಾಗುತ್ತಿದ್ದಾರೆ ಎನ್ನುವುದು ಅನೇಕ ವರದಿಯಲ್ಲಿ ಕಂಡು ಬಂದಿದೆ. ಮಕ್ಕಳ ಭವಿಷ್ಯ ಹಾಳು ಮಾಡುವ ಡ್ರಗ್ಸ್ ದಂಧೆಕೋರರ ವಿರುದ್ಧ ಪೊಲೀಸ್ ಇಲಾಖೆ ಸಾಧ್ಯವಾದಷ್ಟು ಕಠಿಣ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಕೇಂದ್ರದ ಆಯೋಗದೊಂದಿಗೂ ಚರ್ಚೆ ನಡೆದಿದೆ ಎಂದು ಶಶಿಧರ್ ಹೇಳಿದರು.
ಗಾಂಜಾ ಸೇರಿ ಇನ್ನಿತರ ಮಾದಕ ವಸ್ತುಗಳು ಎಲ್ಲಿಂದ ಬರುತ್ತವೆ? ಮಕ್ಕಳಿಗೆ ಹೇಗೆ ತಲುಪುತ್ತವೆ? ಎನ್ನುವ ಮಾಹಿತಿ ಪೊಲೀಸರಿಗೆ ಇದ್ದೇ ಇದೆ. ಕಾನೂನು ಪರಿಣಾಮಕಾರಿಯಾಗಿ ಜಾರಿಯಾಗಬೇಕು. ಪೊಲೀಸರು ಯಾವುದೇ ಒತ್ತಡಕ್ಕೆ ಒಳಗಾಗದೆ ಕೆಲಸ ಮಾಡಿದರೆ ವಿದ್ಯಾರ್ಥಿಗಳನ್ನು ಮತ್ತು ಅವರ ಭವಿಷ್ಯ ರಕ್ಷಿಸಬಹುದು.
-ಶಶಿಕುಮಾರ್, ಕಾರ್ಯದರ್ಶಿ, ಕ್ಯಾಮ್ಸ್


