ಗುವಾಹಟಿಯಲ್ಲಿ ಪತ್ನಿಯೊಬ್ಬಳು ಗಂಡನನ್ನು ಕೊಲೆ ಮಾಡಿ ಮನೆಯಲ್ಲೇ ಹೂತಿಟ್ಟ ಘಟನೆ ಬೆಳಕಿಗೆ ಬಂದಿದೆ.
ಗುವಾಹಟಿ: ಮಹಿಳೆಯೊಬ್ಬಳು ಗಂಡನನ್ನು ಕೊಲೆ ಮಾಡಿ ಹೂತು ಹಾಕಿದ್ದು, ಬಳಿಕ ಗಂಡನ ಬಗ್ಗೆ ಕೇಳಿದವರಿಗೆಲ್ಲಾ ಆತ ಕೇರಳಕ್ಕೆ ಕೆಲಸಕ್ಕೆ ಹೋಗಿದ್ದಾನೆ ಎಂದು ಹೇಳಿಕೊಂಡು ಬಂದಿದ್ದಾಳೆ. ಕಡೆಗೂ ಈಕೆಯ ನಡೆಯ ಬಗ್ಗೆ ಅನುಮಾನ ಬಂದು ನೆರೆಹೊರೆಯವರು ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಆಕೆಯನ್ನು ಬಂಧಿಸಿ ಕಂಬಿ ಹಿಂದೆ ಕೂರಿಸಿದ್ದಾರೆ.
ಅಸ್ಸಾಂನ ಗುವಾಹಟಿಯಲ್ಲಿ (Assam's Guwahati) ಈ ಪಾತಕ ಕೃತ್ಯ ನಡೆದಿದೆ. ಗಂಡನನ್ನೇ ಕೊಲೆ ಮಾಡಿದ ಮಹಿಳೆಯನ್ನು ರಹೀಮಾ ಖತುನ್ ಎಂದು ಗುರುತಿಸಲಾಗಿದೆ. ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ಗಂಡನೊಂದಿಗೆ ಗಲಾಟೆ ಮಾಡಿಕೊಂಡಿದ್ದ ಮಹಿಳೆ ಬಳಿಕ ಆತನನ್ನು ಕೊಲೆ ಮಾಡಿದ್ದಾಳೆ. 40 ವರ್ಷ ಸಬಿಯಲ್ ರೆಹ್ಮಾನ್ ಕೊಲೆಯಾದವ.
ಜೂನ್ 26 ರಂದು ಗುವಾಹಟಿಯ ಪಾಂಡು ಪ್ರದೇಶದ ಜೋಯ್ಮತಿ ನಗರದಲ್ಲಿ ಈ ಘಟನೆ ನಡೆದಿದೆ. ಗುಜುರಿ ವ್ಯಾಪಾರಿಯಾಗಿ ಕೆಲಸ ಮಾಡುತ್ತಿದ್ದ ಸಬಿಯಲ್ ರೆಹ್ಮಾನ್‌ನನ್ನು ಆತನ ಪತ್ನಿ ಕೊಲೆ ಮಾಡಿ ಮನೆಯೊಳಗೆಯೇ 5 ಅಡಿ ಆಳದ ಹೊಂಡ ತೆಗೆದು ಹೂತು ಹಾಕಿದ್ದಾಳೆ.
15 ವರ್ಷಗಳ ಹಿಂದೆ ಮದುವೆಯಾಗಿದ್ದ ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ. ತನ್ನ ಕೃತ್ಯವನ್ನು ಮರೆಮಾಚುವುದಕ್ಕಾಗಿ ಈಕೆ ತನ್ನ ಗಂಡನ ಬಗ್ಗೆ ಕೇಳಿದ ಪರಿಚಯಸ್ಥರಲ್ಲಿ ಆತ ಕೆಲಸದ ನಿಮಿತ್ತ ಕೇರಳಕ್ಕೆ ಹೋಗಿದ್ದಾನೆ ಎಂದು ಹೇಳಿದ್ದಾಳೆ. ಆದರೆ ಆಕೆ ನಂತರದಲ್ಲಿ ಒಬ್ಬೊಬ್ಬರೊಂದಿಗೆ ಒಂದೊಂದು ಕತೆ ಹೇಳಿದ್ದು, ಇದರಿಂದ ಅನುಮಾನಗೊಂಡ ಆಕೆಯ ಪತಿಯ ಸೋದರ ಜುಲೈ 12ರಂದು ಪೊಲೀಸರಿಗೆ ದೂರು ನೀಡಿದ್ದಾನೆ. ಇದಾದ ನಂತರವೇ ಪ್ರಕರಣ ಬೆಳಕಿಗೆ ಬಂದಿದೆ.
ಮರುದಿನ, ಜುಲೈ 13 ರಂದು, ರಹೀಮಾ ಖಾತುನ್ ಗುವಾಹಟಿಯ ಜಲುಕ್ಬರಿ ಪೊಲೀಸ್ ಠಾಣೆಗೆ ಶರಣಾಗಿದ್ದು, ವೈವಾಹಿಕ ಕಲಹದ ಸಂದರ್ಭದಲ್ಲಿ ನಾನೇ ಆತನನ್ನು ಕೊಲೆ ಮಾಡಿ ಮನೆಯಲ್ಲಿ ಹೂತುಹಾಕಿದ್ದಾಗಿ ಆಕೆ ಒಪ್ಪಿಕೊಂಡಿದ್ದಾಳೆ. ಪೊಲೀಸ್ ಠಾಣೆಯಲ್ಲಿ ನಡೆದ ಆರಂಭಿಕ ವಿಚಾರಣೆಯಲ್ಲಿ, ಜೂನ್ 26 ರಂದು ರಾತ್ರಿ ಅವರ ನಡುವೆ ನಡೆದ ಭಾರಿ ಜಗಳದ ನಂತರ ತನ್ನ ಪತಿಯನ್ನು ಕೊಂದಿದ್ದಾಗಿ ಆಕೆ ಹೇಳಿದ್ದಾಳೆ.
ಇಬ್ಬರೂ ಪರಸ್ಪರ ಹೊಡೆದಾಡಿದ್ದು, ಆ ರಾತ್ರಿ ಈ ಜಗಳ ನಡೆದಾಗ ಪತಿ ಕುಡಿದಿದ್ದ, ಹೊಡೆದಾಟದ ವೇಳೆ ಗಂಭೀರ ಗಾಯಗೊಂಡಿದ್ದ ಪತಿ ಬಳಿಕ ಸಾವಿಗೀಡಾಗಿದ್ದಾನೆ. ಬಳಿಕ ಅವಳು ಗಾಬರಿಯಾಗಿದ್ದು, ಕೊಲೆ ಮುಚ್ಚಿ ಹಾಕಲು ಸುಮಾರು ಐದು ಅಡಿಗಳಷ್ಟು ಆಳದ ಗುಂಡಿಯನ್ನು ಮನೆಯೊಳಗೆ ಅಗೆದು ಅಗೆದು ಶವವನ್ನು ಮುಚ್ಚಿದ್ದಾಳೆ ಎಂದು ಗುವಾಹಟಿ (ಪಶ್ಚಿಮ) ಉಪ ಪೊಲೀಸ್ ಆಯುಕ್ತ ಪದ್ಮನವ್ ಬರುವಾ ಹೇಳಿದ್ದಾರೆ.
ರಹೀಮಾ ಖಾತುನ್ ಅವರ ತಪ್ಪೊಪ್ಪಿಗೆಯ ನಂತರ, ಪೊಲೀಸರು ರೆಹಮಾನ್ ಅವರ ಶವವನ್ನು ಹೊರತೆಗೆದು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದಾರೆ. ಅಪರಾಧದಲ್ಲಿ ಆರೋಪಿಗೆ ಬೇರೆ ಯಾರಾದರೂ ಸಹಾಯ ಮಾಡಿದ್ದಾರಾ ಎಂದು ತಿಳಿಯಲು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆಂದು ತಿಳಿದಾಗ, ಆಕೆ ಭಯಭೀತಳಾಗಿ ಗುವಾಹಟಿಗೆ ಹಿಂತಿರುಗಿ ಜಲುಕ್ಬರಿ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾಳೆ. ನಾವು ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡೆವು, ವಿಧಿವಿಜ್ಞಾನ ತಂಡವನ್ನು ಕರೆದೊಯ್ದು, ಪತಿಯ ಕೊಳೆತ ಶವವನ್ನು ಹೊರತೆಗೆದೆವು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಒಬ್ಬ ಮಹಿಳೆ ಮಾತ್ರ ಶವವನ್ನು ಅಗೆಯಲು ಇಷ್ಟು ದೊಡ್ಡ ಹೊಂಡ ತೆಗೆಯಲು ಸಾಧ್ಯವಿಲ್ಲ ಹೀಗಾಗಿ ಈ ಪ್ರಕರಣದಲ್ಲಿ ಇನ್ನೂ ಕೆಲವರು ಭಾಗಿಯಾಗಿದ್ದಾರೆಂದು ನಾವು ಶಂಕಿಸುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.
