ಕೃತಕ ಬುದ್ಧಿಮತ್ತೆ (ಎಐ) ಕಾರಣಕ್ಕೆ ವಿದೇಶದಲ್ಲಿ ಉದ್ಯೋಗ ಕಳೆದುಕೊಂಡು ಖಿನ್ನತೆಯಲ್ಲಿದ್ದ ಪತಿ ನೇಣು ಬಿಗಿದು ಆತ್ಮ೧ಹತ್ಯೆ ಮಾಡಿಕೊಂಡಿದ್ದಾರೆ. ಈ ಆಘಾತದಿಂದ ಪತ್ನಿ ಕೂಡ ಅಪಾರ್ಟ್‌ಮೆಂಟ್‌ನ 17ನೇ ಮಹಡಿಯಿಂದ ಜಿಗಿದು ಸಾವಿಗೆ ಶರಣಾದ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು (ಏ.1): ವಿದೇಶದಲ್ಲಿ ಕೃತಕ ಬುದ್ಧಿಮತ್ತೆಯ (ಎಐ) ಕಾರಣಕ್ಕಾಗಿ ಉದ್ಯೋಗ ಕಳೆದುಕೊಂಡಿದ್ದ ಪತಿ ನೇಣಿ ಬಿಗಿದು ಆತ್ಮ೧ಹತ್ಯೆ ಮಾಡಿಕೊಂಡರೆ, ಪತಿಯ ಅಗಲಿಕೆಯ ನೋವಿನಿಂದ ಪತ್ನಿ ಕೂಡ ಅಪಾರ್ಟ್‌ಮೆಂಟ್‌ನ 17ನೇ ಮಹಡಿಯಿಂದ ಜಿಗಿದು ಸಾವಿಗೆ ಶರಣಾಗಿರುವ ದಾರುಣ ಘಟನೆ ನಗರದಲ್ಲಿ ನಡೆದಿದೆ.
ನಗರದ ಥಣಿಸಂದ್ರದ ಭಾರತಿ ಸಿಟಿ ಆವರಣದ ನಿಕ್ಕೋ ಹೋಮ್ಸ್ ಅಪಾರ್ಟ್‌ಮೆಂಟ್ ನಿವಾಸಿಗಳಾದ ಭಾನುಚಂದ್ರ ರೆಡ್ಡಿ (32), ಪತ್ನಿ ಬೀಬಿ ಶಾಜಿಯಾ ಸಿರಾಜ್ (31) ಮೃತರು.
ತೆಲಂಗಾಣ ಮೂಲದ ಭಾನುರೆಡ್ಡಿಗೆ ಮೂರು ವರ್ಷಗಳ ಹಿಂದೆ ಅಮೆರಿಕದಲ್ಲಿ ವಾರ್ಷಿಕ ₹1 ಕೋಟಿ ಪ್ಯಾಕೇಜ್ ಇರುವ ಉದ್ಯೋಗ ಸಿಕ್ಕಿತ್ತು. ಆದರೆ, ಇತ್ತೀಚೆಗೆ ಎಐನಿಂದಾಗಿ ಕೆಲಸ ಕಳೆದುಕೊಂಡಿದ್ದ ರೆಡ್ಡಿ ಖನ್ನತೆಗೊಳಗಾಗಿದ್ದರು. ಆ ಬಳಿಕ ಪತ್ನಿ ಜೊತೆ ಭಾರತಕ್ಕೆ ವಾಪಸಾಗಿ ಬೆಂಗಳೂರಲ್ಲಿ ನೆಲೆಸಿದ್ದರು.
ಖಿನ್ನತೆಗೆ ತುತ್ತಾಗಿದ್ದ ರೆಡ್ಡಿಗೆ ಅನೇಕ ಆರೋಗ್ಯ ಸಮಸ್ಯೆ ಎದುರಾಗಿತ್ತು. ತನ್ನಿಂದ ಪತ್ನಿಗೆ ತೊಂದರೆಯಾಗುತ್ತಿದೆ ಎಂದು ಭಾವಿಸಿ ಆತ್ಮ೧ಹತ್ಯೆಗೂ ಯತ್ನಿಸಿದ್ದರು. ಆಗ ಪತ್ನಿಯೇ ಧೈರ್ಯ ತುಂಬಿದ್ದರು. ವಾರದ ಹಿಂದೆ ಶಾಜಿಯಾ ತವರಿಗೆ ತೆರಳಿದ್ದು ಮನೆಯಲ್ಲಿ ಏಕಾಂಗಿಯಾಗಿದ್ದ ರೆಡ್ಡಿ, ಫ್ಲ್ಯಾಟ್‌ನಲ್ಲೇ ನೇಣಿಗೆ ಶರಣಾಗಿದ್ದಾರೆ. ಸೋಮವಾರ ರಾತ್ರಿ ಪತ್ನಿ ಬೆಂಗಳೂರಿಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಇದರಿಂದ ನೊಂದ ಆಕೆ ಅಪಾರ್ಟ್‌ಮೆಂಟ್‌ನ 17ನೇ ಮಹಡಿಯಿಂದ ಜಿಗಿದು ಆತ್ಮ೧ಹತ್ಯೆಗೆ ಶರಣಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.


