ಎಸ್‌ಬಿಐ ನೇತೃತ್ವದ ಬ್ಯಾಂಕ್‌ ಒಕ್ಕೂಟಕ್ಕೆ 899.35 ಕೋಟಿ ರು. ವಂಚಿಸಿದ ಆರೋಪದ ಮೇಲೆ ದೀಪಕ್‌ ಕೇಬಲ್ಸ್‌ ಇಂಡಿಯಾ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಕೆ.ವೆಂಕಟೇಶ್ವರ ರಾವ್‌ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಬಂಧಿಸಿದೆ. 

ಇ.ಡಿ. ಬೇಟೆ - ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಸೆರೆ । 10 ದಿನ ಇ.ಡಿ.ಕಸ್ಟಡಿಗೆ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಂಗಳೂರು (ಜೂ.5): ಎಸ್‌ಬಿಐ(SBI) ನೇತೃತ್ವದ ಒಕ್ಕೂಟದ ಬ್ಯಾಂಕ್‌ಗಳಿಗೆ 899.35 ಕೋಟಿ ರು.ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ದೀಪಕ್‌ ಕೇಬಲ್ಸ್‌ ಇಂಡಿಯಾ ಲಿಮಿಟೆಡ್‌(Deepak Cables India Limited)ನ ವ್ಯವಸ್ಥಾಪಕ ನಿರ್ದೇಶಕ ಕೆ.ವೆಂಕಟೇಶ್ವರ ರಾವ್‌(K Venkateshwar Rao) ಅವರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (PMLA) ಜಾರಿ ನಿರ್ದೇಶನಾಲಯ(ED) ಬಂಧಿಸಿದೆ.

ಬಂಧನದ ಬಳಿಕ ಇ.ಡಿ.ಅಧಿಕಾರಿಗಳು ಕೆ.ವೆಂಕಟೇಶ್ವರ ರಾವ್‌ ಅವರನ್ನು ನಗರದ ಇ.ಡಿ.ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ವೇಳೆ, ಹೆಚ್ಚಿನ ವಿಚಾರಣೆ ಸಂಬಂಧ ಆರೋಪಿಯನ್ನು ವಶಕ್ಕೆ ನೀಡುವಂತೆ ಇ.ಡಿ.ಅಧಿಕಾರಿಗಳು ಮಾಡಿದ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ, ಆರೋಪಿಯನ್ನು 10 ದಿನಗಳ ಕಾಲ ಇ.ಡಿ.ವಶಕ್ಕೆ ನೀಡಿತು.

ಎಸ್‌ಬಿಐ ನೇತೃತ್ವದ ಒಕ್ಕೂಟದ ಬ್ಯಾಂಕ್‌ಗಳಿಂದ 899.35 ಕೋಟಿ ರು.ಸಾಲ ಪಡೆದು ಬಳಿಕ ಆ ಹಣವನ್ನು ಅಕ್ರಮವಾಗಿ ಬೇರೆ ಕಡೆಗೆ ವರ್ಗಾಯಿಸಿಕೊಂಡು ವಂಚಿಸಿದ ಆರೋಪದಡಿ ರಾವ್‌ ಹಾಗೂ ಇತರರ ವಿರುದ್ಧ ಸಿಬಿಐ ಎಫ್‌ಐಆರ್‌ ದಾಖಲಿಸಿತ್ತು. ಇದರ ಆಧಾರದ ಮೇಲೆ ಇ.ಡಿ.ತನಿಖೆ ಆರಂಭಿಸಿತ್ತು.

ನಕಲಿ ದಾಖಲೆ ಸಲ್ಲಿಸಿ ಸಾಲ:

ಆರೋಪಿಗಳು ಸಾಲ ಪಡೆಯುವಾಗ ನಕಲಿ ಕಾರ್ಪೊರೇಟ್‌ ಗ್ಯಾರಂಟಿಗಳನ್ನು ನೀಡಲು ಹಲವು ಸಂಸ್ಥೆಗಳನ್ನು ಬಳಸಿಕೊಂಡಿದ್ದಾರೆ. ಬ್ಯಾಂಕ್‌ಗಳಿಂದ ಹೆಚ್ಚಿನ ಸಾಲ ಪಡೆಯುವ ಉದ್ದೇಶದಿಂದ ನಕಲಿ ವಹಿವಾಟು ನಡೆಸಿದ್ದಾರೆ. ಅಸ್ತಿತ್ವದಲ್ಲಿರುವ ಸಾಲಗಳನ್ನು ಮುಚ್ಚಿಟ್ಟು ನಕಲಿ ದಾಖಲೆಗಳನ್ನು ಸೃಷ್ಟಿಸಿ ಹೆಚ್ಚಿನ ಸಾಲ ಪಡೆದಿದ್ದಾರೆ. ಆರೋಪಿ ಕೆ.ವೆಂಕಟೇಶ್ವರ ರಾವ್‌ ನಿಯಂತ್ರಣದಲ್ಲಿರುವ ಹಲವು ಸಂಸ್ಥೆಗಳಿಗೆ ಈ ಸಾಲವನ್ನು ಅಕ್ರಮವಾಗಿ ವರ್ಗಾಯಿಸಿರುವುದು ಇ.ಡಿ. ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.

ಈ ಹಿನ್ನೆಲೆಯಲ್ಲಿ ಇ.ಡಿ.ಅಧಿಕಾರಿಗಳು ಮೇ 21 ಮತ್ತು 29ರಂದು ದೀಪಕ್‌ ಕೇಬಲ್ಸ್‌ ಇಂಡಿಯಾ ಲಿಮಿಟೆಡ್‌ ಕಂಪನಿ, ನಿರ್ದೇಶಕರ ನಿವಾಸ, ಕಚೇರಿ ಸೇರಿದಂತೆ ಸಂಬಂಧಿತ ಸ್ಥಳಗಳ ಮೇಲೆ ದಾಳಿ ನಡೆಸಿದ್ದರು. ದಾಳಿ ವೇಳೆ 1.27 ಕೋಟಿ ರು.ಮೌಲ್ಯದ ಚಿನ್ನಾಭರಣ ಹಾಗೂ ನಗದು ಜಪ್ತಿ ಮಾಡಿದ್ದರು. ಅಲ್ಲದೆ, ಕಂಪನಿಯ ವಿವಿಧ ಬ್ಯಾಂಕ್‌ ಖಾತೆಗಳಲ್ಲಿದ್ದ 18 ಕೋಟಿ ರು.ಸ್ಥಗಿತಗೊಳಿಸಿದ್ದರು. ಇದೀಗ ಆರೋಪಿ ಕೆ.ವೆಂಕಟೇಶ್ವರ ರಾವ್‌ ಅವರನ್ನು ಬಂಧಿಸಿದ್ದಾರೆ.