ಆಟವಾಡುತ್ತಿದ್ದ ವೇಳೆ ಕಾಲು ಜಾರಿ ನೀರಿನ ಹೊಂಡಕ್ಕೆ ಬಿದ್ದ 9 ವರ್ಷದ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ದುರ್ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಸೈಯದ್ ಸಾಬ್ ಪಾಳ್ಯದಲ್ಲಿ ನಡೆದಿದೆ.

ತುಮಕೂರು (ಜೂ.05): ಆಟವಾಡುತ್ತಿದ್ದ ವೇಳೆ ಕಾಲು ಜಾರಿ ನೀರಿನ ಹೊಂಡಕ್ಕೆ ಬಿದ್ದ 9 ವರ್ಷದ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ದುರ್ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮತ್ತಿಘಟ್ಟ ಸಮೀಪದ ಸೈಯದ್ ಸಾಬ್ ಪಾಳ್ಯದಲ್ಲಿ ನಡೆದಿದೆ. ಮೃತ ಬಾಲಕನನ್ನು ರಾಮನ್ (9) ಎಂದು ಗುರುತಿಸಲಾಗಿದೆ. ಆತ ಮತ್ತಿಘಟ್ಟ ಸರ್ಕಾರಿ ಶಾಲೆಯಲ್ಲಿ 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂದು ಸಂಜೆ ಶಾಲೆ ಮುಗಿಸಿಕೊಂಡು ಮನೆಗೆ ಬಂದಿದ್ದ ರಾಮನ್, ಬ್ಯಾಗ್ ಇಟ್ಟು ಸ್ನೇಹಿತರೊಂದಿಗೆ ಆಟವಾಡಲು ತೆರಳಿದ್ದ. ಈ ವೇಳೆ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಸಮೀಪದ ನೀರಿನ ಹೊಂಡಕ್ಕೆ ಬಿದ್ದಿದ್ದಾನೆ. ರಾಮನ್ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು ಜೊತೆಯಲ್ಲಿದ್ದ ಸ್ನೇಹಿತರು ತಕ್ಷಣ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಗ್ರಾಮಸ್ಥರು ಧಾವಿಸಿ ಬಾಲಕನನ್ನು ನೀರಿನಿಂದ ಹೊರತೆಗೆದಿದ್ದಾರೆ.

ಪ್ರಕರಣ ದಾಖಲು

ಆ ವೇಳೆ ಬಾಲಕನಲ್ಲಿ ಉಸಿರಾಟ ಇತ್ತಾದರೂ, ಹೆಚ್ಚಿನ ಚಿಕಿತ್ಸೆಗೆ ತಿಪಟೂರು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾನೆ. ಘಟನಾ ಸ್ಥಳಕ್ಕೆ ಚಿಕ್ಕನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಬಾಲಕನ ಅಕಾಲಿಕ ನಿಧನದಿಂದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.