ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ ದಂಪತಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಅಮೆರಿಕಾದಲ್ಲಿ ಕೆಲಸ ಕಳೆದುಕೊಂಡು, ಅನಾರೋಗ್ಯದಿಂದ ಬಳಲುತ್ತಿದ್ದ ಪತಿ ನೇಣಿಗೆ ಶರಣಾದರೆ, ಇದನ್ನು ಕಂಡು ಆಘಾತಗೊಂಡ ಪತ್ನಿ ಅಪಾರ್ಟ್‌ಮೆಂಟ್‌ನ 17ನೇ ಮಹಡಿಯಿಂದ ಜಿಗಿದು ಪ್ರಾಣ ಬಿಟ್ಟಿದ್ದಾರೆ.

ಬೆಂಗಳೂರು (ಮಾ.31): ಐಟಿ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಮನಕಲಕುವ ಘಟನೆ ನಡೆದಿದೆ. ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿದ್ದ (ಟೆಕ್ಕಿ) ದಂಪತಿ ನೇಣಿಗೆ ಶರಣಾಗಿರುವ ದಾರುಣ ಘಟನೆ ಬೆಂಗಳೂರಿನ ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ. ಅಮೆರಿಕಾದಿಂದ ಹಿಂತಿರುಗಿದ್ದ ಪತಿ ಮೊದಲು ಆತ್ಮ*ಹತ್ಯೆ ಮಾಡಿಕೊಂಡರೆ, ಪತಿಯ ಮೃತದೇಹವನ್ನು ಕಂಡ ಪತ್ನಿ ಆಘಾತ ತಡೆಯಲಾಗದೆ ಅಪಾರ್ಟ್‌ಮೆಂಟ್‌ನ 17ನೇ ಮಹಡಿಯಿಂದ ಜಿಗಿದು ಪ್ರಾಣ ಬಿಟ್ಟಿದ್ದಾರೆ.

Add Asianetnews Kannada as a Preferred SourcegooglePreferred

ಘಟನೆಯ ವಿವರ:

ತೆಲಂಗಾಣ ಮೂಲದ ಬಾನು ಚಂದಿರ್ ರೆಡ್ಡಿ (ಬಾಬು ರೆಡ್ಡಿ) ಮತ್ತು ಶಾಜಿಯಾ ಭಾನು ಎಂಬುವವರೇ ಮೃತಪಟ್ಟ ದುರ್ದೈವಿಗಳು. ಇವರಿಬ್ಬರು ಬಾಲ್ಯದ ಸ್ನೇಹಿತರಾಗಿದ್ದು, ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾಗಿ ಸುಮಾರು 3 ರಿಂದ 8 ವರ್ಷಗಳಾಗಿದ್ದರೂ, ಇಬ್ಬರ ಧರ್ಮ ಬೇರೆ ಬೇರೆಯಾಗಿದ್ದ ಕಾರಣ ಈ ವಿಚಾರವನ್ನು ಮನೆಯವರಿಗೆ ತಿಳಿಸಿರಲಿಲ್ಲ ಎನ್ನಲಾಗಿದೆ. ಕಳೆದ ಕೆಲವು ಸಮಯದಿಂದ ಕೊತ್ತನೂರಿನ ಅಪಾರ್ಟ್‌ಮೆಂಟ್ ಒಂದರಲ್ಲಿ ಇವರು ವಾಸವಿದ್ದರು.

ಅಮೆರಿಕಾದಲ್ಲಿ ಕೆಲಸ ಕಳೆದುಕೊಂಡಿದ್ದ ಬಾನು:

ಬಾನು ಅಲಿಯಾಸ್ ಚಂದಿರ್ ರೆಡ್ಡಿ ಅವರು ಈ ಹಿಂದೆ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ, ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಪ್ರಭಾವದಿಂದಾಗಿ ಅವರು ತಮ್ಮ ಕೆಲಸ ಕಳೆದುಕೊಂಡಿದ್ದರು ಎನ್ನಲಾಗಿದೆ. ಸುಮಾರು ಒಂದೂವರೆ ವರ್ಷದ ಹಿಂದೆ ಭಾರತಕ್ಕೆ ಮರಳಿದ್ದ ಅವರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದರು. ಇದರ ಜೊತೆಗೆ ಅವರಿಗೆ ದೀರ್ಘಕಾಲದ ಅನಾರೋಗ್ಯ ಸಮಸ್ಯೆಯೂ ಇತ್ತು. ಈ ಎಲ್ಲಾ ಕಾರಣಗಳಿಂದ ತೀವ್ರ ಖಿನ್ನತೆಗೆ ಒಳಗಾಗಿದ್ದರು.

ಸರಣಿ ಆತ್ಮ*ಹತ್ಯೆ ನಡೆದದ್ದು ಹೇಗೆ?

ನಿನ್ನೆ ಬೆಳಗ್ಗೆ 9.30ರ ಸುಮಾರಿಗೆ ಪತ್ನಿ ಶಾಜಿಯಾ ರೂಮ್ ಬೆಲ್ ಮಾಡಿದಾಗ ಬಾನು ಚಂದಿರ್ ರೆಡ್ಡಿ ಬಾಗಿಲು ತೆರೆದಿರಲಿಲ್ಲ. ಗಾಬರಿಗೊಂಡ ಶಾಜಿಯಾ ಸೆಕ್ಯೂರಿಟಿ ಗಾರ್ಡ್‌ಗಳ ಸಹಾಯದಿಂದ ಬಾಗಿಲು ತೆರೆಸಿದ್ದಾರೆ. ಒಳಗೆ ಹೋದಾಗ ಬಾನು ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಕಣ್ಣೆದುರೇ ಪತಿಯ ಮೃತದೇಹವನ್ನು ಕಂಡು ತೀವ್ರ ಆಘಾತಕ್ಕೊಳಗಾದ ಶಾಜಿಯಾ, ತಕ್ಷಣವೇ ಅಪಾರ್ಟ್‌ಮೆಂಟ್‌ನ 17ನೇ ಮಹಡಿಗೆ ಓಡಿ ಹೋಗಿ ಅಲ್ಲಿಂದ ಕೆಳಕ್ಕೆ ಜಿಗಿದಿದ್ದಾರೆ. ಪರಿಣಾಮ ಸ್ಥಳದಲ್ಲೇ ಅವರು ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಫುಲ್ ಟೈಮ್ ಕಂಟೆಂಟ್ ಕ್ರಿಯೇಟರ್ ಆಗಲು ಗೂಗಲ್‌ನ 2 ಕೋಟಿ ವೇತನದ ಕೆಲಸ ಬಿಟ್ಟ ಬೆಂಗಳೂರು ಟೆಕ್ಕಿ

ಡೆತ್ ನೋಟ್‌ನಲ್ಲಿ ಏನಿದೆ?

ಸ್ಥಳಕ್ಕೆ ಧಾವಿಸಿದ ಕೊತ್ತನೂರು ಪೊಲೀಸರು ಪರಿಶೀಲನೆ ನಡೆಸಿದಾಗ ಒಂದು ಡೆತ್ ನೋಟ್ ಪತ್ತೆಯಾಗಿದೆ. ಅದರಲ್ಲಿ ಬಾನು ಚಂದಿರ್ ರೆಡ್ಡಿ, 'ನನ್ನ ಸಾವಿಗೆ ನಾನೇ ಕಾರಣ, ಶಾಜಿಯಾಳನ್ನು ಏನೂ ಅನ್ನಬೇಡಿ, ಆಕೆಯದು ಯಾವುದೇ ತಪ್ಪಿಲ್ಲ. ಆರೋಗ್ಯ ಕೈಕೊಟ್ಟಿದ್ದರಿಂದ ನಾನು ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ' ಎಂದು ಬರೆದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಬ್ಬರ ನಡುವೆ ಸಣ್ಣಪುಟ್ಟ ವೈಮನಸ್ಸು ಕೂಡ ಇತ್ತು ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಪೊಲೀಸ್ ಅಧಿಕಾರಿಗಳ ಹೇಳಿಕೆ:

ಘಟನೆ ಕುರಿತು ಪ್ರತಿಕ್ರಿಯಿಸಿರುವ ಡಿಸಿಪಿ ಮಿಥುನ್ ಅವರು, 'ಮೇಲ್ನೋಟಕ್ಕೆ ಆರೋಗ್ಯ ಸಮಸ್ಯೆ ಮತ್ತು ದಂಪತಿ ನಡುವಿನ ವೈಮನಸ್ಸಿನಿಂದ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಪತಿ ಬರೆದಿದ್ದಾರೆ ಎನ್ನಲಾದ ಡೆತ್ ನೋಟ್ ಸಿಕ್ಕಿದ್ದು, ಅದನ್ನು ಪರಿಶೀಲಿಸುತ್ತಿದ್ದೇವೆ. ಶಾಜಿಯಾ ಅವರು ಐಬಿಎಂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದೇವೆ' ಎಂದು ತಿಳಿಸಿದ್ದಾರೆ. ಒಳ್ಳೆಯ ಭವಿಷ್ಯ ಹೊಂದಿದ್ದ ಇಬ್ಬರು ಪ್ರತಿಭಾವಂತ ಇಂಜಿನಿಯರ್‌ಗಳು ಹೀಗೆ ಅಕಾಲಿಕವಾಗಿ ಪ್ರಾಣ ಕಳೆದುಕೊಂಡಿರುವುದು ಎರಡೂ ಕುಟುಂಬಗಳಲ್ಲಿ ಶೋಕ ಸಾಗರವನ್ನುಂಟು ಮಾಡಿದೆ.