Asianet Suvarna News Asianet Suvarna News

ಬೆಂಗಳೂರು: ಪಾರ್ಟಿ ಮಾಡ್ತಾನೆಂದು ಅಣ್ಣನ ಸ್ನೇಹಿತನನ್ನು ಹತ್ಯೆಗೈದ ಆಟೋ ಚಾಲಕ

ಈ ಸಂಬಂಧ ದೂರು ದಾಖಲಿಸಿಕೊಂಡು ಆರೋಪಿ ನಾರಾಯಣ್‌ ನಾಯಕ್‌ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

43 Year Old Man Killed in Bengaluru grg
Author
First Published Sep 26, 2023, 5:49 AM IST

ಬೆಂಗಳೂರು(ಸೆ.26): ರಾತ್ರಿ ಅಣ್ಣನ ಮನೆಯಲ್ಲಿ ಮಲಗುತ್ತಿದ್ದ ಅಣ್ಣನ ಸ್ನೇಹಿತನ ಜೊತೆ ಜಗಳ ಮಾಡಿದ ತಮ್ಮ, ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದು ಹತ್ಯೆ ಮಾಡಿರುವ ಘಟನೆ ಸುಬ್ರಹ್ಮಣ್ಯಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ದೊಡ್ಡಕಲ್ಲಸಂದ್ರ ಮೂಲದ ಗಣೇಶ್‌ (43) ಹತ್ಯೆಯಾದ ವ್ಯಕ್ತಿ. ಸೋಮವಾರ ಮುಂಜಾನೆ 1 ಗಂಟೆ ಸುಮಾರಿಗೆ ಶಾರದಾನಗರದಲ್ಲಿ ಈ ಘಟನೆ ನಡೆದಿದೆ. ಘಟನೆ ಸಂಬಂಧ ಪೊಲೀಸರು ಆರೋಪಿ ನಾರಾಯಣ ನಾಯಕ್‌ (50) ಎಂಬಾತನನ್ನು ಬಂಧಿಸಿದ್ದಾರೆ.

ಹತ್ಯೆಯಾದ ಗಣೇಶ್‌ ಮತ್ತು ಆರೋಪಿ ಅಣ್ಣ ಮಲ್ಲೇಶ್‌ ನಾಯಕ್‌ ಸ್ನೇಹಿತರಾಗಿದ್ದಾರೆ. ಹೋಂ ನರ್ಸಿಂಗ್‌ ಕೇರ್‌ನಲ್ಲಿ ಕೆಲಸ ಮಾಡುವ ಗಣೇಶ್‌ ಕಳೆದ ಆರು ತಿಂಗಳಿಂದ ಕೌಟುಂಬಿಕ ಕಲಹದಿಂದ ಪತ್ನಿ ಹಾಗೂ ಮಕ್ಕಳಿಂದ ದೂರವಾಗಿದ್ದ. ಮದ್ಯ ವ್ಯಸನಿಯಾಗಿದ್ದ ಗಣೇಶ್‌ ತನ್ನ ಸ್ನೇಹಿತ ಮಲ್ಲೇಶ್‌ ನಾಯಕ್‌ನ ಮನೆಯಲ್ಲಿ ರಾತ್ರಿ ಮಲಗುತ್ತಿದ್ದ. ದಾಂಪತ್ಯದಲ್ಲಿ ಕಲಹದಿಂದ ಮಲ್ಲೇಶ್‌ ನಾಯಕ್‌ ಸಹ ಪತ್ನಿ ಮತ್ತು ಮಕ್ಕಳು ಪ್ರತ್ಯೇಕವಾಗಿ ನೆಲೆಸಿದ್ದರು. ಹೀಗಾಗಿ ಮಲ್ಲೇಶ್‌ ಮತ್ತು ಗಣೇಶ್‌ ಮನೆಯಲ್ಲಿ ಮದ್ಯದ ಪಾರ್ಟಿ ಮಾಡಿಕೊಂಡು ಅಲ್ಲೇ ಮಲಗುತ್ತಿದ್ದರು.

ರಾಯಚೂರು: ಪತ್ನಿ ಕೊಲೆ ಮಾಡಿ ಪತಿ ಆತ್ಮಹತ್ಯೆ, ಪಾಲಕರನ್ನು ಕಳೆದುಕೊಂಡ ಇಬ್ಬರು ಮಕ್ಕಳು ಅನಾಥ

ಮದ್ಯದ ಅಮಲಿನಲ್ಲಿ ಹತ್ಯೆ

ಆರೋಪಿ ನಾರಾಯಣ ನಾಯಕ್‌ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದು, ತಾತಗುಣಿಯಲ್ಲಿ ಕುಟುಂಬದೊಂದಿಗೆ ನೆಲೆಸಿದ್ದಾನೆ. ಶಾರಾದಾನಗರದಲ್ಲಿ ಸ್ವಂತ ಮನೆಯಿದ್ದು, ಆಗಾಗ ಆ ಮನೆಯಲ್ಲಿ ರಾತ್ರಿ ವೇಳೆ ಮಲಗುತ್ತಿದ್ದ. ಅಣ್ಣ ಮನೆಯಲ್ಲಿ ಮದ್ಯದ ಪಾರ್ಟಿ ಮಾಡಿಕೊಂಡು ಇರುತ್ತಿದ್ದ ಗಣೇಶ್‌ಗೆ ಮನೆಗೆ ಬಾರದಂತೆ ಹಲವು ಬಾರಿ ಎಚ್ಚರಿಕೆ ನೀಡಿದ್ದ.

ಭಾನುವಾರ ರಾತ್ರಿ ಗಣೇಶ್‌ ಮದ್ಯ ಸೇವಿಸಿ ಮಲ್ಲೇಶ್‌ನಾಯಕ್‌ ಮನೆಯಲ್ಲಿ ಮಲಗಿದ್ದ. ಮಲ್ಲೇಶ್‌ ಬೇರೊಂದು ಮನೆಯಲ್ಲಿ ಮಲಗಿದ್ದ. ಮದ್ಯ ಸೇವಿಸಿಕೊಂಡು ಮನೆಗೆ ಬಂದಿದ್ದ ನಾರಾಯಣ ನಾಯಕ್‌, ಮಲ್ಲೇಶ್‌ ಜತೆಗೆ ಜಗಳ ತೆಗೆದಿದ್ದಾನೆ. ಈ ವೇಳೆ ಇಬ್ಬರು ನಡುವೆ ಗಲಾಟೆ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ನಾರಾಯಣ ನಾಯಕ್‌ ಕಬ್ಬಿಣದ ರಾಡ್‌ನಿಂದ ಗಣೇಶ್‌ ತಲೆಗೆ ಹಲ್ಲೆ ಮಾಡಿ ಪರಾರಿಯಾಗಿದ್ದ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಗಣೇಶ್‌ ತೀವ್ರ ರಕ್ತಸ್ರಾವಾಗಿ ಸ್ಥಳದಲ್ಲೇ ಮೃತಟ್ಟಿದ್ದಾನೆ. ಈ ಸಂಬಂಧ ದೂರು ದಾಖಲಿಸಿಕೊಂಡು ಆರೋಪಿ ನಾರಾಯಣ್‌ ನಾಯಕ್‌ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios