ಸರಗಳ್ಳನ ಬಂಧನ: ₹2 ಲಕ್ಷ ಮೌಲ್ಯದ ಚಿನ್ನದ ಸರ ಜಪ್ತಿ
ಹಾಡಹಗಲೇ ಮಹಿಳೆಯ ಸರ ಕಿತ್ತುಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಹನುಮಂತನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹನುಮಂತನಗರದ ರಮೇಶ್(40) ಬಂಧಿತ. ಆರೋಪಿಯಿಂದ 2 ಲಕ್ಷ ರು. ಮೌಲ್ಯದ 35 ಗ್ರಾಂ ತೂಕದ ಚಿನ್ನದ ಸರ ಜಪ್ತಿ ಮಾಡಲಾಗಿದೆ.
ಬೆಂಗಳೂರು (ಮೇ.04): ಹಾಡಹಗಲೇ ಮಹಿಳೆಯ ಸರ ಕಿತ್ತುಕೊಂಡು ಪರಾರಿಯಾಗಿದ್ದ ಆರೋಪಿಯನ್ನು ಹನುಮಂತನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹನುಮಂತನಗರದ ರಮೇಶ್(40) ಬಂಧಿತ. ಆರೋಪಿಯಿಂದ 2 ಲಕ್ಷ ರು. ಮೌಲ್ಯದ 35 ಗ್ರಾಂ ತೂಕದ ಚಿನ್ನದ ಸರ ಜಪ್ತಿ ಮಾಡಲಾಗಿದೆ. ಏ.19ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಹನುಮಂತನಗರ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಹಿಂದಿನಿಂದ ಬಂದ ಅಪರಿಚಿತ ಏಕಾಏಕಿ ಆ ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಸರ ಕಿತ್ತುಕೊಂಡು ಪರಾರಿಯಾಗಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಂಡ್ಯ ಮೂಲದ ಆರೋಪಿ ರಮೇಶ್ ವೃತ್ತಿಯಲ್ಲಿ ಚಾಲಕನಾಗಿದ್ದು, ಹಲವು ವರ್ಷಗಳಿಂದ ನಗರದಲ್ಲಿ ಕುಟುಂಬದೊಂದಿಗೆ ನೆಲೆಸಿದ್ದ. ಕುಡಿತದ ದಾಸನಾಗಿದ್ದ ಈತನನ್ನು ಕೆಲಸದಿಂದ ತೆಗೆದು ಹಾಕಿದ್ದರು. ಹೀಗಾಗಿ ಕಳೆದ ಮೂರ್ನಾಲ್ಕು ತಿಂಗಳಿಂದ ಕೆಲಸ ಇಲ್ಲದೆ ಮದ್ಯ ಸೇವನೆ ಮಾಡಿಕೊಂಡು ಕಾಲಹರಣ ಮಾಡುತ್ತಿದ್ದ. ತನ್ನ ಚಟಕ್ಕೆ ಸುಲಭವಾಗಿ ಹಣ ಗಳಿಸುವ ಉದ್ದೇಶದಿಂದ ಮಹಿಳೆಯ ಸರ ಕಸಿದು ಪರಾರಿಯಾಗಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಘಟನಾ ಸ್ಥಳ ಹಾಗೂ ಸುತ್ತಮುತ್ತಲ ರಸ್ತೆಗಳ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ ಸಿಕ್ಕ ಸುಳಿವಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸರ ಕದಿಯುತ್ತಿದ್ದ ಆಟೋ ಚಾಲಕರ ಸೆರೆ: ನಗರದಲ್ಲಿ ಮನೆಗಳ್ಳತನ ಹಾಗೂ ಸರಗಳ್ಳತನ ಕೃತ್ಯಗಳಲ್ಲಿ ತೊಡಗಿದ್ದ ಮೂವರು ಆಟೋ ಚಾಲಕರು ಸೇರಿದಂತೆ ಆರು ಮಂದಿ ಕಿಡಿಗೇಡಿಗಳನ್ನು ಪ್ರತ್ಯೇಕವಾಗಿ ಪುಟ್ಟೇನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕೊರಟೆಗೆರೆ ದೊಡ್ಡಿ ಗ್ರಾಮದ ನಾಗೇಶ್ ಅಲಿಯಾಸ್ ಕುಳ್ಳ ನಾಗ, ಶಿವಲಿಂಗೇಗೌಡ ಹಾಗೂ ಕನಕನಗರದ ಪಿ.ಪ್ರತಾಪ್, ಆಟೋ ಚಾಲಕರಾದ ಉತ್ತರಹಳ್ಳಿಯ ಎಂ.ಪುನೀತ್ ಕುಮಾರ್, ಕಮಲಾನಗರದ ಆಕಾಶ್, ಮಲ್ಲಸಂದ್ರದ ಪ್ರಸನ್ನಕುಮಾರ್ ಅಲಿಯಾಸ್ ಬಿಳಿಯ, ಬಂಧಿತರು.
400 ರೇಪ್: ರಾಹುಲ್ ಗಾಂಧಿ ಹೇಳಿಕೆಗೆ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ
ಆರೋಪಿಗಳಿಂದ ₹10.82 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಹಣದಾಸೆಗೆ ಸರಗಳ್ಳತನ ಕೃತ್ಯದಲ್ಲಿ ಆರೋಪಿಗಳು ತೊಡಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಕೆಲ ದಿನಗಳ ಹಿಂದೆ ಪುಟ್ಟೇನಹಳ್ಳಿ 1ನೇ ಅಡ್ಡರಸ್ತೆ, ಬ್ರಿಗೇಡ್ ಸಿಗ್ನಲ್ ಹಾಗೂ ಜರಗನಹಳ್ಳಿಯ ಚಿಕ್ಕಸ್ವಾಮಿ ಲೇಔಟ್‌ನ ಮನೆಯಲ್ಲಿ ಕಳ್ಳತನ ಕೃತ್ಯಗಳು ನಡೆದಿದ್ದರು. ಈ ಪ್ರಕರಣಗಳ ತನಿಖೆ ನಡೆಸಿದ ಪುಟ್ಟೇನಹಳ್ಳಿ ಠಾಣೆ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಪ್ರತ್ಯೇಕವಾಗಿ ಕಾರ್ಯಾಚರಣೆಯಲ್ಲಿ ಸೆರೆ ಹಿಡಿದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದ್ದರು.