ಟೀಂ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ ಕಠಿಣ ಪರಿಶ್ರಮಕ್ಕೆ ಹೆಸರುವಾಸಿಯಾಗಿದ್ದರೂ, ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್, ತಂಡದ ಅತ್ಯಂತ ಶ್ರಮಜೀವಿ ಆಟಗಾರ ಶುಭ್‌ಮನ್ ಗಿಲ್ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.  

ಬೆಂಗಳೂರು: ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಕ್ರಿಕೆಟ್‌ನಲ್ಲಿ ಯಶಸ್ಸು ಸಾಧಿಸಲು ಕಠಿಣ ಪರಿಶ್ರಮ ಹಾಗೂ ಬದ್ದತೆಯ ಕುರಿತಂತೆ ಹೊಸದೊಂದು ಬೆಂಚ್‌ ಮಾರ್ಕ್ ಸೆಟ್ ಮಾಡಿದ್ದಾರೆ. 2008ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ವಿರಾಟ್ ಕೊಹ್ಲಿ, ಫಿಟ್ನೆಸ್‌ಗೆ ಹೆಚ್ಚಿನ ಒತ್ತು ನೀಡಿದ್ದು, ಕಳೆದೊಂದುವರೆ ದಶಕದಿಂದ ಹಲವು ದಿಗ್ಗಜರ ರೆಕಾರ್ಡ್ ಬ್ರೇಕ್ ಮಾಡಿ, ತನ್ನದೇ ಆದ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಹ್ಲಿ ಫಿಟ್ನೆಸ್ ಮಂತ್ರ

ಕಳೆದ 17 ವರ್ಷಗಳಿಂದ ಕ್ರಿಕೆಟ್ ಆಡುತ್ತಿದ್ದರೂ ವಿರಾಟ್ ಕೊಹ್ಲಿಗೆ ಆಟದ ಮೇಲಿನ ಒಲವು ಕಡಿಮೆಯಾಗಿಲ್ಲ. ಟೆಸ್ಟ್ ಹಾಗೂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರೂ, ಪ್ರತಿ ಪಂದ್ಯದಲ್ಲೂ ರನ್ ಗಳಿಸುವ ಹಸಿವು ಮಾತ್ರ ಕಡಿಮೆಯಾಗಿಲ್ಲ. 37 ವರ್ಷ ವಯಸ್ಸಿನಲ್ಲೂ ಯುವ ಕ್ರಿಕೆಟಿಗರು ನಾಚುವಂತೆ ಮೈದಾನದಲ್ಲಿ ವಿರಾಟ್ ಕೊಹ್ಲಿ ಆಕ್ಟೀವ್ ಆಗಿದ್ದಾರೆ. ಇದಕ್ಕೆ ಕಾರಣ ಅವರ ಹಾರ್ಡ್‌ವರ್ಕ್.

ಆದರೆ ಟೀಂ ಇಂಡಿಯಾ ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್, ಟೀಂ ಇಂಡಿಯಾದಲ್ಲಿ ಅತ್ಯಂತ ಹಾರ್ಡ್‌ ವರ್ಕ್ ಮಾಡುವ ಆಟಗಾರ ಯಾರು ಎನ್ನುವ ಪ್ರಶ್ನೆಗೆ ವಿರಾಟ್ ಕೊಹ್ಲಿ ಬದಲಿಗೆ ಶುಭ್‌ಮನ್ ಗಿಲ್ ಎಂದು ಹೇಳಿದ್ದಾರೆ. ಇದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.

ಯಶಸ್ವಿ ಜೈಸ್ವಾಲ್ ಅಚ್ಚರಿ ಹೇಳಿಕೆ

"ಇತ್ತೀಚಿಗಿನ ವರ್ಷಗಳಲ್ಲಿ ನಾನು ಶುಭ್‌ಮನ್ ಗಿಲ್ ಅವರನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಅವರು ತುಂಬಾ ಹಾರ್ಡ್‌ ವರ್ಕ್ ಮಾಡುತ್ತಾರೆ. ಇದರ ಜತೆಗೆ ಹಾರ್ಡ್‌ ವರ್ಕ್ ವಿಚಾರದಲ್ಲಿ ಅವರು ನಿರಂತರತೆ ಕಾಯ್ದುಕೊಳ್ಳುತ್ತಾ ಬಂದಿದ್ದಾರೆ. ಅವರು ಫಿಟ್ನೆಸ್, ಡಯಟ್, ಸ್ಕಿಲ್ ಹಾಗೂ ಟ್ರೈನಿಂಗ್‌ ಕಡೆಗೆ ಹೆಚ್ಚು ಒತ್ತು ನೀಡುತ್ತಾರೆ. ಅದಂತೂ ನಂಬಲಸಾಧ್ಯ. ನಾನು ಅವರು ಆಡುವುದನ್ನು ನೋಡಲು ಎಂಜಾಯ್ ಮಾಡುತ್ತೇನೆ. ಅವರೊಬ್ಬ ಅದ್ಭುತ ಮನುಷ್ಯ ಎಂದು ಆಜ್‌ ತಕ್‌ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಜೈಸ್ವಾಲ್ ಹೇಳಿದ್ದಾರೆ.

'ಅವರು ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯಲ್ಲಿ ಅತ್ಯಂತ ಅದ್ಭುತವಾಗಿ ಹಾಗೆಯೇ ಜವಾಬ್ದಾರಿಯುತವಾಗಿ ಆಡಿದರು. ಅವರು ಮುಂದೆಯೂ ಇದೇ ರೀತಿಯ ಪ್ರದರ್ಶನ ನೀಡಲಿದ್ದಾರೆ ಎನ್ನುವ ವಿಶ್ವಾಸವಿದೆ' ಎಂದು ಜೈಸ್ವಾಲ್ ಹೇಳಿದ್ದಾರೆ.

ಯಶಸ್ವಿ ಜೈಸ್ವಾಲ್ ಭಾರತ ಟೆಸ್ಟ್ ತಂಡದ ಆರಂಭಿಕನಾಗಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಆದರೆ ಭಾರತ ಏಕದಿನ ಹಾಗೂ ಟಿ20 ತಂಡದಲ್ಲಿ ಸ್ಥಾನ ಪಡೆಯಲು ಇನ್ನೂ ಒದ್ದಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಶುಭ್‌ಮನ್ ಗಿಲ್ ಅನುಪಸ್ಥಿತಿಯಲ್ಲಿ ಭಾರತ ಏಕದಿನ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದ ಜೈಸ್ವಾಲ್, ಹರಿಣಗಳ ಎದುರಿನ ಮೂರನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದರು.