- Home
- Sports
- Cricket
- ವಿಜಯ್ ಹಜಾರೆ ಟ್ರೋಫಿ: ಒಂದೂವರೆ ದಶಕದ ಬಳಿಕ ಡೆಲ್ಲಿ ಪರ ವಿರಾಟ್ ಕೊಹ್ಲಿ ಮೈದಾನಕ್ಕೆ! ಬೆಂಗಳೂರಲ್ಲಿ ನಡೆಯುತ್ತೆ ಮ್ಯಾಚ್
ವಿಜಯ್ ಹಜಾರೆ ಟ್ರೋಫಿ: ಒಂದೂವರೆ ದಶಕದ ಬಳಿಕ ಡೆಲ್ಲಿ ಪರ ವಿರಾಟ್ ಕೊಹ್ಲಿ ಮೈದಾನಕ್ಕೆ! ಬೆಂಗಳೂರಲ್ಲಿ ನಡೆಯುತ್ತೆ ಮ್ಯಾಚ್
ನವದೆಹಲಿ: ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ ಮುಂಬರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಡೆಲ್ಲಿ ಪರ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಇದು ಕೊಹ್ಲಿ ಫ್ಯಾನ್ಸ್‌ಗೆ ಸಿಹಿಸುದ್ದಿಯಾಗಿದೆ. ಈ ಕುರಿತಾದ ಅಪ್ಡೇಟ್ಸ್ ಇಲ್ಲಿದೆ ನೋಡಿ.

ಡೆಲ್ಲಿ ಪರ ಪಂತ್-ಕೊಹ್ಲಿ ಕಣಕ್ಕೆ
ಡಿಸೆಂಬರ್ 24ರಿಂದ ಆರಂಭಗೊಳ್ಳಲಿರುವ ವಿಜಯ್ ಹಜಾರೆ ರಾಷ್ಟ್ರೀಯ ಏಕದಿನ ಟೂರ್ನಿಗೆ ಗುರುವಾರ ಡೆಲ್ಲಿಯ ಸಂಭಾವ್ಯ ಆಟಗಾರರ ಪಟ್ಟಿ ಪ್ರಕಟಿಸಲಾಗಿದೆ. ತಂಡದಲ್ಲಿ ತಾರಾ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಹಾಗೂ ರಿಷಭ್ ಪಂತ್ ಕೂಡಾ ಇದ್ದಾರೆ.
ಡೆಲ್ಲಿ ಪರ ಕಣಕ್ಕಿಳಿಯಲು ರೆಡಿಯಾದ ಕೊಹ್ಲಿ
ವಿಜಯ್ ಹಜಾರೆಯಲ್ಲಿ ಆಡುವ ಬಗ್ಗೆ ಕೊಹ್ಲಿ ಇತ್ತೀಚೆಗಷ್ಟೇ ಡೆಲ್ಲಿ ಕ್ರಿಕೆಟ್ ಸಂಸ್ಥೆಗೆ ಮಾಹಿತಿ ನೀಡಿದ್ದರು. ಹೀಗಾಗಿ ಅವರನ್ನು ಸಂಭಾವ್ಯ ಆಟಗಾರರ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಟೆಸ್ಟ್ ಹಾಗೂ ಟಿ20ಗೆ ವಿದಾಯ ಹೇಳಿರುವ ವಿರಾಟ್-ರೋಹಿತ್ ಜೋಡಿ
ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಈಗಾಗಲೇ ಭಾರತ ಟೆಸ್ಟ್ ಹಾಗೂ ಟಿ20 ಮಾದರಿಗೆ ವಿದಾಯ ಘೋಷಿಸಿದ್ದು, ಏಕದಿನ ಕ್ರಿಕೆಟ್‌ನಲ್ಲಿ ಮಾತ್ರ ಟೀಂ ಇಂಡಿಯಾವನ್ನು ಪ್ರತಿನಿಧಿಸುತ್ತಿದ್ದಾರೆ.
ಬಿಸಿಸಿಐ ಮಾರ್ಗಸೂಚಿಗೆ ತಲೆಬಾಗಿದ ಕೊಹ್ಲಿ?
ಬಿಸಿಸಿಐ ಮಾರ್ಗಸೂಚಿ ಪ್ರಕಾರ, ಆಟಗಾರರು ಫಿಟ್ ಆಗಿದ್ದರೇ ಹಾಗೂ ಬೇರೆ ಯಾವುದೇ ಟೂರ್ನಿಯಿಲ್ಲದಿದ್ದರೇ, ದೇಶಿ ಕ್ರಿಕೆಟ್‌ನಲ್ಲಿ ಆಡಬೇಕು ಎಂದು ಆಟಗಾರರಿಗೆ ತಿಳಿಸಿದೆ. ಹೀಗಾಗಿ ಕೊಹ್ಲಿ, ಇದೀಗ ವಿಜಯ್ ಹಜಾರೆ ಟೂರ್ನಿ ಆಡಲು ರೆಡಿಯಾಗಿದ್ದಾರೆ ಎನ್ನಲಾಗುತ್ತಿದೆ.
15 ವರ್ಷಗಳ ಬಳಿಕ ಡೆಲ್ಲಿ ಪರ ವಿಜಯ್ ಹಜಾರೆ ಟೂರ್ನಿ ಆಡಲಿರುವ ಕೊಹ್ಲಿ
ಒಂದು ವೇಳೆ ಕೊಹ್ಲಿ ಈ ಬಾರಿ ಡೆಲ್ಲಿ ಪರ ಆಡಿದರೆ, ಅದು ಕಳೆದ 15 ವರ್ಷಗಳಲ್ಲೇ ಕೊಹ್ಲಿಯ ಮೊದಲ ವಿಜಯ್ ಹಜಾರೆ ಪಂದ್ಯವಾಗಿರಲಿದೆ. ಅವರು 2010ರಲ್ಲಿ ಸರ್ವಿಸಸ್ ವಿರುದ್ಧ ಕೊನೆ ಬಾರಿ ವಿಜಯ್ ಹಜಾರೆ ಟೂರ್ನಿಯಲ್ಲಿ ಕಣಕ್ಕಿಳಿದಿದ್ದರು. ಈ ವರ್ಷ ಡೆಲ್ಲಿ ಪರ ರಣಜಿ ಪಂದ್ಯ ಆಡಿದ್ದರು.
ಡೆಲ್ಲಿ ಪಂದ್ಯಗಳಿಗೆ ಬೆಂಗಳೂರು ಆತಿಥ್ಯ
ಡೆಲ್ಲಿ ತಂಡ ಈ ಬಾರಿ ತನ್ನ ಎಲ್ಲಾ 7 ಪಂದ್ಯಗಳನ್ನು ಬೆಂಗಳೂರಿನಲ್ಲಿ ಆಡಲಿವೆ. ಇದರಲ್ಲಿ 2 ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ, ಉಳಿದ 5 ಪಂದ್ಯಗಳು ಆಲೂರಿನಲ್ಲಿ ನಿಗದಿಯಾಗಿವೆ.
ವಿಜಯ್ ಹಜಾರೆ ಟ್ರೋಫಿ ಡಿಸೆಂಬರ್ 24ರಿಂದ ಆರಂಭ
ವಿಜಯ್ ಹಜಾರೆ ಟೂರ್ನಿಯು ಡಿಸೆಂಬರ್ 24ರಿಂದ ಆರಂಭವಾಗಲಿದ್ದು, ಡೆಲ್ಲಿ ತಂಡವು ಆಂಧ್ರ ಪ್ರದೇಶ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ.
ದಕ್ಷಿಣ ಆಫ್ರಿಕಾ ಎದುರಿನ ಸರಣಿಯಲ್ಲಿ 302 ರನ್ ಬಾರಿಸಿದ ಕೊಹ್ಲಿ
ಇತ್ತೀಚೆಗಷ್ಟೇ ನಡೆದ ದಕ್ಷಿಣ ಆಫ್ರಿಕಾ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ವಿರಾಟ್ ಕೊಹ್ಲಿ ಎರಡು ಶತಕ ಹಾಗೂ ಒಂದು ಅಜೇಯ ಅರ್ಧಶತಕ ಸಹಿತ 302 ರನ್ ಸಿಡಿಸಿ ಮಿಂಚಿದ್ದರು. ಇದರ ಜತೆಗೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.
2027ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಮೇಲೆ ಕಣ್ಣು
2027ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಮೇಲೆ ಕಣ್ಣಿಟ್ಟಿರುವ ವಿರಾಟ್ ಕೊಹ್ಲಿ, ಈ ವರ್ಷ ಅಂದರೆ 2025ರಲ್ಲಿ 13 ಏಕದಿನ ಪಂದ್ಯಗಳನ್ನಾಡಿ 651 ರನ್ ಸಿಡಿಸಿದ್ದಾರೆ. ಇದರ ಜತೆಗೆ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

