ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಯಶಸ್ವಿ ಜೈಸ್ವಾಲ್ 175 ರನ್‌ಗಳಿಗೆ ರನೌಟ್ ಆಗಿ ದ್ವಿಶತಕ ವಂಚಿತರಾದರು. ಈ ರನೌಟ್‌ಗೆ ಶುಭ್‌ಮನ್ ಗಿಲ್ ಕಾರಣವೆಂದು ಮೈದಾನದಲ್ಲೇ ಅಸಮಾಧಾನ ಹೊರಹಾಕಿದರು.
ದೆಹಲಿ: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್‌ನಲ್ಲಿ ಯಶಸ್ವಿ ಜೈಸ್ವಾಲ್ ದ್ವಿಶತಕ ಬಾರಿಸುತ್ತಾರೆ ಎಂದು ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಎರಡನೇ ದಿನದ ಆರಂಭದಲ್ಲೇ ಭಾರತೀಯ ಓಪನರ್ ರನೌಟ್ ಆಗಿ ಪೆವಿಲಿಯನ್‌ಗೆ ಮರಳಿದರು. ಮೊದಲ ದಿನದ ಸ್ಕೋರ್‌ಗೆ ಕೇವಲ ಎರಡು ರನ್ ಸೇರಿಸಿ, ಎರಡನೇ ದಿನದ ಎರಡನೇ ಓವರ್‌ನಲ್ಲಿ 175 ರನ್ ಗಳಿಸಿದ್ದ ಜೈಸ್ವಾಲ್ ಔಟಾದರು. ಮಿಡ್-ಆಫ್‌ನಲ್ಲಿದ್ದ ಫೀಲ್ಡರ್ ಕೈಗೆ ಚೆಂಡನ್ನು ಹೊಡೆದು ವೇಗದ ಸಿಂಗಲ್‌ಗೆ ಪ್ರಯತ್ನಿಸಿ ಜೈಸ್ವಾಲ್ ರನೌಟ್ ಆದರು. ಇನ್ನು ರನೌಟ್ ಆದರೂ ಜೈಸ್ವಾಲ್ ಮೈದಾನ ತೊರೆಯಲು ನಿರಾಕರಿಸಿದರು. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಯಶಸ್ವಿ ಜೈಸ್ವಾಲ್ ರನೌಟ್
ಜೈಸ್ವಾಲ್ ಮಿಡ್-ಆಫ್‌ಗೆ ಚೆಂಡನ್ನು ಬಾರಿಸಿ ರನ್‌ಗೆ ಕರೆ ನೀಡಿದಾಗ, ನಾನ್-ಸ್ಟ್ರೈಕರ್ ತುದಿಯಲ್ಲಿದ್ದ ಗಿಲ್ ಎರಡು ಹೆಜ್ಜೆ ಮುಂದೆ ಬಂದು ನಂತರ ಹಿಂತಿರುಗಿದರು. ಅಷ್ಟರಲ್ಲಿ ಜೈಸ್ವಾಲ್ ಓಡಿ ಪಿಚ್‌ನ ಮಧ್ಯಭಾಗವನ್ನು ತಲುಪಿದ್ದರು. ಚೆಂಡನ್ನು ಹಿಡಿದ ತೇಜ್‌ನರೇನ್ ಚಂದ್ರಪಾಲ್ ವಿಕೆಟ್ ಕೀಪರ್‌ಗೆ ಎಸೆದರು. ಜೈಸ್ವಾಲ್ ಹಿಂತಿರುಗಿ ಕ್ರೀಸ್‌ಗೆ ಪ್ರವೇಶಿಸುವ ಮುನ್ನವೇ ವಿಕೆಟ್ ಕೀಪರ್ ಟೆವಿನ್ ಇಮ್ಲಾಚ್ ಬೇಲ್ಸ್ ಎಗರಿಸಿದ್ದರು.
ರನೌಟ್ ಆದ ನಿರಾಸೆಯನ್ನು ಮೈದಾನದಲ್ಲಿ ಹೊರಹಾಕಿದ ನಂತರವೇ ಜೈಸ್ವಾಲ್ ಕ್ರೀಸ್ ತೊರೆದರು. 'ಅದು ನನ್ನ ಕಾಲ್ ಆಗಿತ್ತು' ಎಂದು ಜೈಸ್ವಾಲ್ ಗಿಲ್‌ಗೆ ಜೋರಾಗಿ ಕೂಗಿ ಹೇಳುತ್ತಿರುವುದು ಮತ್ತು ಗಿಲ್ ಅದಕ್ಕೆ ವಿವರಣೆ ನೀಡುತ್ತಿರುವುದು ಕಂಡುಬಂತು. ಚೆಂಡು ಹಿಡಿಯುವ ಮುನ್ನ ವಿಕೆಟ್ ಕೀಪರ್ ಗ್ಲೌಸ್ ಸ್ಟಂಪ್‌ಗೆ ತಾಗಿತ್ತೇ ಎಂಬ ಅನುಮಾನದಲ್ಲಿ ಜೈಸ್ವಾಲ್ ಸ್ವಲ್ಪ ಹೊತ್ತು ಕ್ರೀಸ್‌ನಲ್ಲೇ ನಿಂತರು. ಆದರೆ ವಿಡಿಯೋ ಪರಿಶೀಲನೆಯಲ್ಲಿ ಅದು ರನೌಟ್ ಎಂದು ಸ್ಪಷ್ಟವಾಯಿತು. ಇದರಿಂದಾಗಿ ಅಂಪೈರ್ ಜೈಸ್ವಾಲ್‌ಗೆ ಕ್ರೀಸ್ ಬಿಡುವಂತೆ ಸೂಚಿಸಿದರು. ಜೈಸ್ವಾಲ್ ನಿರಾಸೆಯಿಂದ ತಲೆಯ ಮೇಲೆ ಕೈಯಿಟ್ಟುಕೊಂಡು ಕ್ರೀಸ್‌ನಿಂದ ಹೊರನಡೆದರು.
ಭಾರತ-ವೆಸ್ಟ್ ಇಂಡಿಸ್ ಎರಡನೇ ಟೆಸ್ಟ್ ಹೈಲೈಟ್ಸ್
ಇನ್ನು ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಬಗ್ಗೆ ಹೇಳುವುದಾದರೇ, ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ, ಯಶಸ್ವಿ ಜೈಸ್ವಾಲ್(175) ಹಾಗೂ ಶುಭ್‌ಮನ್ ಗಿಲ್(129*) ಆಕರ್ಷಕ ಶತಕ ಹಾಗೂ ಸಾಯಿ ಸುದರ್ಶನ್(87) ಸಮಯೋಚಿತ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಕಳೆದುಕೊಂಡು 518 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.
ಇದಾದ ಬಳಿಕ ಮೊದಲ ಇನ್ನಿಂಗ್ಸ್ ಆರಂಭಿಸಿರುವ ವೆಸ್ಟ್ ಇಂಡೀಸ್ ತಂಡವು ಎರಡನೇ ದಿನದಾಟದಂತ್ಯಕ್ಕೆ 140 ರನ್ ಗಳಿಸುವಷ್ಟರಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಗಿದೆ. ರವೀಂದ್ರ ಜಡೇಜಾ 3 ಹಾಗೂ ಕುಲ್ದೀಪ್ ಯಾದವ್ ಒಂದು ವಿಕೆಟ್ ಕಬಳಿಸಿದರು.
