ದುಬೈನಲ್ಲಿ ನಡೆದ ಅಂಡರ್-19 ಏಷ್ಯಾಕಪ್ ಪಂದ್ಯದಲ್ಲಿ, 14 ವರ್ಷದ ವೈಭವ್ ಸೂರ್ಯವಂಶಿ ಯುಎಇ ವಿರುದ್ಧ ಕೇವಲ 95 ಎಸೆತಗಳಲ್ಲಿ 171 ರನ್ ಸಿಡಿಸಿ ಆರ್ಭಟಿಸಿದ್ದಾರೆ. ಅವರ ವಿಶ್ವದಾಖಲೆಯ 14 ಸಿಕ್ಸರ್‌ಗಳ ನೆರವಿನಿಂದ ಭಾರತ 234 ರನ್‌ಗಳ ಭರ್ಜರಿ ಜಯ ಸಾಧಿಸಿತು.
ದುಬೈ: 14 ವರ್ಷದ ಪ್ರತಿಭಾವಂತ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಮತ್ತೆ ಆರ್ಭಟಿಸಿದ್ದಾರೆ. ಅಂಡರ್-19 ಏಷ್ಯಾಕಪ್ ಏಕದಿನ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲೇ ಯುಎಇ ವಿರುದ್ಧ ವೈಭವ್ ಕೇವಲ 95 ಎಸೆತಕ್ಕೆ 171 ರನ್ ಸಿಡಿಸಿದ್ದು, ಭಾರತಕ್ಕೆ 234 ರನ್‌ಗಳ ಗೆಲುವು ತಂದುಕೊಟ್ಟಿದ್ದಾರೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 6 ವಿಕೆಟ್‌ಗೆ 433 ರನ್ ಕಲೆಹಾಕಿತು. ಇದು ಅಂಡರ್-19ನಲ್ಲಿ ಭಾರತದ ಗರಿಷ್ಠ ಸ್ಕೋರ್. 56 ಎಸೆತಗಳಲ್ಲೇ ಶತಕ ಪೂರೈಸಿದ ವೈಭವ್ ಆ ಬಳಿಕವೂ ಅಬ್ಬರಿಸಿದರು. ಆದರೆ ದ್ವಿಶತಕದಿಂದ ವಂಚಿತರಾದರು. ಅವರ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ, 14 ಸಿಕ್ಸರ್‌ಗಳಿದ್ದವು. ಇದರೊಂದಿಗೆ ಅಂಡರ್-19 ಏಕದಿನ ಇನ್ನಿಂಗ್ಸ್‌ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ವಿಶ್ವ ದಾಖಲೆ ನಿರ್ಮಿಸಿದರು. 2008ರಲ್ಲಿ ನಮೀಬಿಯಾ ವಿರುದ್ಧ ಆಸ್ಟ್ರೇಲಿಯಾದ ಮಿಚೆಲ್ ಹಿಲ್ 12 ಸಿಕ್ಸರ್ ಸಿಡಿಸಿದ್ದು ಈವರೆಗೂ ದಾಖಲಾಯಾಗಿತ್ತು. ವೈಭವ್ ಹೊರತಾಗಿ ಆ್ಯರೊನ್ ಜಾರ್ಜ್ 69, ವಿಹಾನ್ ಮಲ್ಹೋತ್ರ 69 ರನ್ ಸಿಡಿಸಿದರು.
ಬೃಹತ್ ಗುರಿ ಬೆನ್ನತ್ತಿದ ಯುಎಇಯನ್ನು ಭಾರತೀಯ ಬೌಲರ್‌ಗಳು ಸುಲಭದಲ್ಲಿ ನಿಯಂತ್ರಿಸಿದರು. ಯುಎಇ 7 ವಿಕೆಟ್ ನಷ್ಟದಲ್ಲಿ 199 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಪೃಥ್ವಿ ಮಧು 50, ಉದ್ದಿಶ್ ಸೂರಿ ಔಟಾಗದೆ 78 ರನ್ ಸಿಡಿಸಿದರು.
ಸ್ಕೋರ್: ಭಾರತ 50 ಓವರಲ್ಲಿ 433/6 (ವೈಭವ್ 171, ವಿಹಾನ್ 69, ಜಾರ್ಜ್ 69, ಯುಗ್ ಶರ್ಮಾ 2-75), ಯುಎಇ 50 ಓವರಲ್ಲಿ 199/7 (ಉದ್ದಿಶ್ 78, ಪೃಥ್ವಿ 50, ದೀಪೇಶ್ 2-21)
ಪಂದ್ಯಶ್ರೇಷ್ಠ: ವೈಭವ್ ಸೂರ್ಯವಂಶಿ
171 ರನ್: ಭಾರತದ ಪರ ಎರಡನೇ ಗರಿಷ್ಠ
ವೈಭವ್ ಗಳಿಸಿದ 171 ರನ್, ಅಂಡರ್-19 ಏಕದಿನದಲ್ಲಿ ಭಾರತ ಪರ ದಾಖಲಾದ 2ನೇ ಗರಿಷ್ಠ ರನ್. ಒಟ್ಟಾರೆ ವಿಶ್ವದ 9ನೇ ಗರಿಷ್ಠ. 2002ರಲ್ಲಿ ಇಂಗ್ಲೆಂಡ್ ವಿರುದ್ಧ ಅಂಬಟಿ ರಾಯುಡು ಗಳಿಸಿದ ಅಜೇಯ 177 ರನ್ ಭಾರತದ ಪರ ಗರಿಷ್ಠ. ಕಳೆದ ಜುಲೈನಲ್ಲಿ ಜಿಂಬಾಬ್ವೆ ವಿರುದ್ಧ ದ.ಆಫ್ರಿಕಾ ಜೊರಿಚ್ ವ್ಯಾನ್ ಶಾಲ್ಕ್‌ವಿಕ್ ಗಳಿಸಿದ 215 ರನ್ ವಿಶ್ವದಲ್ಲೇ ಗರಿಷ್ಠ.
ಪಾಕ್‌ಗೆ 297 ರನ್ ಜಯ
ಟೂರ್ನಿಯಲ್ಲಿ ಪಾಕಿಸ್ತಾನ ಕೂಡಾ ಭರ್ಜರಿ ಶುಭಾರಂಭ ಮಾಡಿತು. ಮಲೇಷ್ಯಾ ವಿರುದ್ಧ 297 ರನ್‌ಗಳಿಂದ ಜಯಗಳಿಸಿತು. ಮೊದಲು ಬ್ಯಾಟ್ ಮಾಡಿದ ಪಾಕ್ 3 ವಿಕೆಟ್‌ಗೆ 345 ರನ್ ಗಳಿಸಿತು. ಸಮೀರ್ ಮಿನ್ಹಾಸ್ ಔಟಾಗದೆ 177, ಅಹ್ಮದ್ ಹುಸೈನ್ 132 ರನ್ ಸಿಡಿಸಿದರು. ಬೃಹತ್ ಗುರಿ ಬೆನ್ನತ್ತಿದ ಮಲೇಷ್ಯಾ 19.4 ಓವರ್‌ಗಳಲ್ಲಿ 48 ರನ್‌ಗೆ ಆಲೌಟಾಯಿತು.

