ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್‌ನಲ್ಲಿ ಅಜೇಯ ಶತಕ ಬಾರಿಸಿದ ಯಶಸ್ವಿ ಜೈಸ್ವಾಲ್, ಶತಕಗಳನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ಡಾನ್ ಬ್ರಾಡ್ಮನ್‌ರನ್ನೂ ಮೀರಿಸಿದ್ದಾರೆ. ಈ ಮೂಲಕ ಅವರು ವಿರಾಟ್ ಕೊಹ್ಲಿ ದಾಖಲೆಯನ್ನು ಸರಿಗಟ್ಟಿದ್ದಾರೆ.

ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್‌ನ ಮೊದಲ ದಿನ ಅಜೇಯ ಶತಕದೊಂದಿಗೆ ಕ್ರೀಸ್‌ನಲ್ಲಿರುವ ಟೀಂ ಇಂಡಿಯಾ ಓಪನ್ನರ್ ಯಶಸ್ವಿ ಜೈಸ್ವಾಲ್ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ತಮ್ಮ ವೃತ್ತಿಜೀವನದ ಏಳನೇ ಶತಕವನ್ನು ಬಾರಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿರುವ ಜೈಸ್ವಾಲ್, ತಮ್ಮ ವೃತ್ತಿಜೀವನದ ಮೂರನೇ ದ್ವಿಶತಕದತ್ತ ಕಣ್ಣಿಟ್ಟಿದ್ದಾರೆ. ವೃತ್ತಿಜೀವನದಲ್ಲಿ ಇದುವರೆಗೆ ಗಳಿಸಿದ ಏಳು ಟೆಸ್ಟ್ ಶತಕಗಳಲ್ಲಿ ಐದನ್ನು 150ಕ್ಕೂ ಹೆಚ್ಚು ರನ್‌ಗಳಾಗಿ ಪರಿವರ್ತಿಸಿದ್ದು ಜೈಸ್ವಾಲ್ ಅವರ ಸಾಧನೆಯಾಗಿದೆ.

ಅಂದರೆ, ಗಳಿಸಿದ ಶತಕಗಳಲ್ಲಿ 71.4 ಪ್ರತಿಶತವನ್ನು 'ಡ್ಯಾಡಿ ಹಂಡ್ರೆಡ್' ಆಗಿ ಪರಿವರ್ತಿಸಲು ಜೈಸ್ವಾಲ್‌ಗೆ ಸಾಧ್ಯವಾಗಿದೆ. ಜೈಸ್ವಾಲ್ ಶತಕ ಬಾರಿಸಿದರೆ ಅದು ಕೇವಲ ಶತಕವಾಗಿ ಉಳಿಯುವುದಿಲ್ಲ ಎಂದರ್ಥ. ಶತಕಗಳನ್ನು ದೊಡ್ಡ ಶತಕಗಳನ್ನಾಗಿ ಪರಿವರ್ತಿಸುವುದರಲ್ಲಿ ಕ್ರಿಕೆಟ್ ದಂತಕಥೆ ಸಾಕ್ಷಾತ್ ಡಾನ್ ಬ್ರಾಡ್ಮನ್ ಕೂಡ ಸದ್ಯಕ್ಕೆ ಜೈಸ್ವಾಲ್‌ಗಿಂತ ಹಿಂದಿದ್ದಾರೆ. 29 ಶತಕಗಳನ್ನು ಗಳಿಸಿದ ಬ್ರಾಡ್ಮನ್, ಅದರಲ್ಲಿ 18 ಅನ್ನು 150ಕ್ಕೂ ಹೆಚ್ಚು ರನ್‌ಗಳಾಗಿ ಪರಿವರ್ತಿಸಿದ್ದು, ಅವರ ಪರಿವರ್ತನೆ ದರ 62.10 ಪ್ರತಿಶತ ಆಗಿದೆ.

Scroll to load tweet…

ಡ್ಯಾಡಿ ಹಂಡ್ರೆಡ್ ಬಾರಿಸೋದ್ರಲ್ಲಿ ಜೈಸ್ವಾಲ್ ಮುಂದು

ಆದರೆ, ಇದುವರೆಗೆ ಏಳು ಶತಕಗಳನ್ನು ಗಳಿಸಿರುವ ಜೈಸ್ವಾಲ್, ಅದರಲ್ಲಿ ಐದನ್ನು 150ಕ್ಕೂ ಹೆಚ್ಚು ರನ್‌ಗಳಾಗಿ ಪರಿವರ್ತಿಸಿ, ಪರಿವರ್ತನೆ ದರದಲ್ಲಿ (71.40%) ಬ್ರಾಡ್ಮನ್‌ರನ್ನು ಹಿಂದಿಕ್ಕಿದ್ದಾರೆ. ಶತಕಗಳನ್ನು ದೊಡ್ಡ ಶತಕಗಳನ್ನಾಗಿ ಪರಿವರ್ತಿಸುವುದರಲ್ಲಿ ವೀರೇಂದ್ರ ಸೆಹ್ವಾಗ್ ಮೂರನೇ ಸ್ಥಾನದಲ್ಲಿದ್ದಾರೆ. ಸೆಹ್ವಾಗ್ ಗಳಿಸಿದ 23 ಟೆಸ್ಟ್ ಶತಕಗಳಲ್ಲಿ 60.90 ಪ್ರತಿಶತ 150ಕ್ಕೂ ಹೆಚ್ಚು ರನ್ ಗಳಿಸಿದವುಗಳಾಗಿವೆ. ವಿಂಡೀಸ್ ದಂತಕಥೆ ಬ್ರಿಯಾನ್ ಲಾರಾ (55.90%), ಶ್ರೀಲಂಕಾದ ದಂತಕಥೆ ಕುಮಾರ್ ಸಂಗಕ್ಕಾರ (50%), ಮತ್ತು ಭಾರತೀಯ ಬ್ಯಾಟಿಂಗ್ ದಂತಕಥೆ ಸಚಿನ್ ತೆಂಡೂಲ್ಕರ್ (39.20%) ಈ ಪಟ್ಟಿಯಲ್ಲಿ ನಂತರದ ಸ್ಥಾನಗಳಲ್ಲಿದ್ದಾರೆ. ಸಚಿನ್ ಗಳಿಸಿದ 51 ಟೆಸ್ಟ್ ಶತಕಗಳಲ್ಲಿ 20 ಶತಕಗಳು 150ಕ್ಕೂ ಹೆಚ್ಚು ರನ್‌ಗಳನ್ನು ಒಳಗೊಂಡಿದ್ದರೂ, ಶತಕಗಳನ್ನು ದೊಡ್ಡ ಶತಕಗಳನ್ನಾಗಿ ಪರಿವರ್ತಿಸುವುದರಲ್ಲಿ ಸಚಿನ್ ಕೂಡ ಜೈಸ್ವಾಲ್‌ಗಿಂತ ಹಿಂದಿದ್ದಾರೆ ಎಂದು ಅಂಕಿಅಂಶಗಳು ಹೇಳುತ್ತವೆ.

ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಯಶಸ್ವಿ ಜೈಸ್ವಾಲ್

ಯಶಸ್ವಿ ಜೈಸ್ವಾಲ್ ಭಾರತದಲ್ಲಿ ಟೆಸ್ಟ್‌ನ ಮೊದಲ ದಿನವೇ ಎರಡು ಬಾರಿ 150+ ರನ್ ಗಳಿಸಿದ್ದು, ಕ್ರಿಕೆಟ್ ಲೆಜೆಂಡ್ ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ್ದಾರೆ. ವಿರಾಟ್ ಕೊಹ್ಲಿ ಕೂಡಾ ಭಾರತದಲ್ಲಿ ನಡೆದ ಟೆಸ್ಟ್‌ನ ಮೊದಲ ದಿನವೇ ಎರಡು ಬಾರಿ 150+ ರನ್ ಬಾರಿಸಿದ ಸಾಧನೆ ಮಾಡಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೂರು ಸಾವಿರ ರನ್ ಗಡಿದಾಟಿದ

ಯಶಸ್ವಿ ಜೈಸ್ವಾಲ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೂರು ಸಾವಿರ ರನ್ ಪೂರ್ಣಗೊಳಿಸಿದ್ದಾರೆ. 26 ಟೆಸ್ಟ್‌ನಲ್ಲಿ 2262 ರನ್, 22 ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 723 ರನ್ ಹಾಗೂ ಒಂದು ಅಂತಾರಾಷ್ಟ್ರೀಯ ಪಂದ್ಯದಲ್ಲಿ 15 ರನ್ ಗಳಿಸಿದ್ದಾರೆ. ಒಟ್ಟಾರೆ 71 ಅಂತಾರಾಷ್ಟ್ರೀಯ ಇನ್ನಿಂಗ್ಸ್‌ಗಳನ್ನಾಡಿ ಮೂರು ಸಾವಿರ ರನ್ ಗಡಿ ದಾಟಿದ್ದಾರೆ.