ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್‌ನ ಮೊದಲ ದಿನ, ಯಶಸ್ವಿ ಜೈಸ್ವಾಲ್ ಅವರ ಅಜೇಯ ಶತಕ (173*) ಮತ್ತು ಸಾಯಿ ಸುದರ್ಶನ್ ಅವರ ಅರ್ಧಶತಕದ (87) ನೆರವಿನಿಂದ ಭಾರತ 2 ವಿಕೆಟ್ ನಷ್ಟಕ್ಕೆ 318 ರನ್ ಗಳಿಸಿ ಬೃಹತ್ ಮೊತ್ತ ಕಲೆಹಾಕಿದೆ.  

ನವದೆಹಲಿ: ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಎರಡನೇ ಹಾಗೂ ಕೊನೆಯ ಟೆಸ್ಟ್‌ ಪಂದ್ಯದಲ್ಲಿ ಶುಭ್‌ಮನ್ ಗಿಲ್ ನೇತೃತೃತ್ವದ ಟೀಂ ಇಂಡಿಯಾ, ಮೊದಲ ದಿನವೇ ಬೃಹತ್ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅಜೇಯ ಶತಕ ಹಾಗೂ ಸಾಯಿ ಸುದರ್ಶನ್ ಅವರ ಆಕರ್ಷಕ ಅರ್ಧಶತಕಗಳ ನೆರವಿನಿಂದ ಟೀಂ ಇಂಡಿಯಾ ಮೊದಲ ದಿನದಾಟದಂತ್ಯಕ್ಕೆ ಕೇವಲ ಎರಡು ವಿಕೆಟ್ ಕಳೆದುಕೊಂಡು 318 ರನ್ ಬಾರಿಸಿದೆ.

ಇಲ್ಲಿನ ಅರುಣ್‌ ಜೇಟ್ಲಿ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತು. ಮೊದಲ ವಿಕೆಟ್‌ಗೆ ಕೆ ಎಲ್ ರಾಹುಲ್ ಹಾಗೂ ಯಶಸ್ವಿ ಜೈಸ್ವಾಲ್ 58 ರನ್‌ಗಳ ಜತೆಯಾಟವಾಡಿದರು. 5 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 38 ರನ್ ಬಾರಿಸಿ ಅರ್ಧಶತಕದತ್ತ ಮುನ್ನುಗ್ಗುತ್ತಿದ್ದ ಕೆ ಎಲ್ ರಾಹುಲ್, ದೊಡ್ಡ ಹೊಡೆತಕ್ಕೆ ಯತ್ನಿಸಿ ವಾರಿಕನ್‌ ಬೌಲಿಂಗ್‌ನಲ್ಲಿ ಸ್ಟಂಪೌಟ್ ಆಗಿ ಪೆವಿಲಿಯನ್ ಸೇರಿದರು.

ಯಶಸ್ವಿ-ಜೈಸ್ವಾಲ್ ಜುಗಲ್ಬಂದಿ:

ರಾಹುಲ್ ವಿಕೆಟ್ ಪತನದ ಬಳಿಕ ಜೈಸ್ವಾಲ್‌ರನ್ನು ಕೂಡಿಕೊಂಡ ಸಾಯಿ ಸುದರ್ಶನ್ ಎರಡನೇ ವಿಕೆಟ್‌ಗೆ ಆಕರ್ಷಕ ಜತೆಯಾಟವಾಡುವ ಮೂಲಕ ವಿಂಡೀಸ್ ಬೌಲರ್‌ಗಳನ್ನು ಕಾಡಿದರು. ಈ ಜೋಡಿ ಎರಡನೇ ವಿಕೆಟ್‌ಗೆ 306 ಎಸೆತಗಳನ್ನು ಎದುರಿಸಿ ಆಕರ್ಷಕ 193 ರನ್‌ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತವನ್ನು ಇನ್ನೂರರ ಗಡಿ ದಾಟಿಸಿದರು.

Scroll to load tweet…

ವಿಂಡೀಸ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಯಶಸ್ವಿ ಜೈಸ್ವಾಲ್, ಕೇವಲ 145 ಎಸೆತಗಳನ್ನು ಎದುರಿಸಿ ವೃತ್ತಿಜೀವನದ ಏಳನೇ ಟೆಸ್ಟ್ ಶತಕ ಸಿಡಿಸಿ ಸಂಭ್ರಮಿಸಿದರು. ಅಂದಹಾಗೆ ಜೈಸ್ವಾಲ್ ಇದುವರೆಗೂ ಟೆಸ್ಟ್‌ ಕ್ರಿಕೆಟ್‌ನಲ್ಲಿ ಬಾರಿಸಿದ ಏಳು ಶತಕಗಳು ಬೇರೆ ಬೇರೆ ಸ್ಟೇಡಿಯಂನಲ್ಲಿ ಬಾರಿಸಿದ್ದು ಎನ್ನುವುದು ವಿಶೇಷ. ಶತಕದ ಬಳಿಕವೂ ತಾಳ್ಮೆ ಕಳೆದುಕೊಳ್ಳದೇ ದಿಟ್ಟ ಬ್ಯಾಟಿಂಗ್ ನಡೆಸಿದ ಜೈಸ್ವಾಲ್, 253 ಎಸೆತಗಳನ್ನು ಎದುರಿಸಿ 22 ಬೌಂಡರಿ ಸಹಿತ 173 ರನ್ ಬಾರಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಜೈಸ್ವಾಲ್ ಉತ್ತಮ ಸಾಥ್ ನೀಡಿದ ಸಾಯಿ ಸುದರ್ಶನ್

ಇನ್ನು ಯಶಸ್ವಿ ಜೈಸ್ವಾಲ್‌ಗೆ ಉತ್ತಮ ಸಾಥ್ ನೀಡಿದ ಯಶಸ್ವಿ ಜೈಸ್ವಾಲ್, 165 ಎಸೆತಗಳನ್ನು ಎದುರಿಸಿ 12 ಬೌಂಡರಿ ಸಹಿತ 87 ರನ್ ಗಳಿಸಿ ವಾರಿಕನ್‌ಗೆ ವಿಕೆಟ್ ಒಪ್ಪಿಸಿದರು. ಸಾಯಿ ಸುದರ್ಶನ್ ವಿಕೆಟ್ ಪತನದ ಬಳಿಕ ಕ್ರೀಸ್‌ಗಿಳಿದ ನಾಯಕ ಶುಭ್‌ಮನ್ ಗಿಲ್ ಮೂರನೇ ವಿಕೆಟ್‌ಗೆ ಜೈಸ್ವಾಲ್ ಜತೆಗೂಡಿ ಮುರಿಯದ 67 ರನ್‌ಗಳ ಜತೆಯಾಟವಾಡಿದ್ದಾರೆ. ಗಿಲ್ 68 ಎಸೆತಗಳನ್ನು ಎದುರಿಸಿ 3 ಬೌಂಡರಿ ಸಹಿತ ಅಜೇಯ 20 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.