ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್‌ನಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. 1-0 ಮುನ್ನಡೆಯೊಂದಿಗೆ ಸರಣಿ ಕ್ಲೀನ್ ಸ್ವೀಪ್ ಮಾಡುವ ಗುರಿ ಹೊಂದಿರುವ ಟೀಂ ಇಂಡಿಯಾ, 1987ರಿಂದ ದೆಹಲಿಯಲ್ಲಿ ಸೋಲರಿಯದ ತನ್ನ ದಾಖಲೆಯನ್ನು ಮುಂದುವರಿಸುವ ವಿಶ್ವಾಸದಲ್ಲಿದೆ.

ನವದೆಹಲಿ: ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಎರಡನೇ ಹಾಗೂ ಕೊನೆಯ ಟೆಸ್ಟ್‌ನಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿದೆ. ನಿರೀಕ್ಷೆಯಂತೆಯೇ ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಸರಣಿಯಲ್ಲಿ 1-0 ಮುನ್ನಡೆಯಲ್ಲಿರುವ ಭಾರತ ಸರಣಿ ಕ್ಲೀನ್ ಸ್ವೀಪ್ ಮಾಡುವ ವಿಶ್ವಾಸದಲ್ಲಿದೆ.

ಅಹಮದಾಬಾದ್ ಟೆಸ್ಟ್‌ನಲ್ಲಿ ಕೇವಲ ಎರಡೂವರೆ ದಿನಗಳಲ್ಲೇ ವೆಸ್ಟ್‌ಇಂಡೀಸ್‌ನ ಬಗ್ಗುಬಡಿದಿದ್ದ ಭಾರತ ತಂಡ, ಪ್ರವಾಸಿ ತಂಡದ ವಿರುದ್ದ ಇಂದು 2ನೇ ಟೆಸ್ಟ್‌ನಲ್ಲಿ ಕಣಕ್ಕಿಳಿದಿದೆ. ಭಾರತ ಸುಲಭ ಗೆಲುವಿನ ಮೂಲಕ ಸರಣಿ ಕೈವಶಪಡಿಸಿಕೊಳ್ಳುವ ವಿಶ್ವಾಸದಲ್ಲಿದೆ.

ಮತ್ತೊಂದು ಗೆಲುವಿನ ವಿಶ್ವಾಸದಲ್ಲಿ ಭಾರತ

ಮೊದಲ ಟೆಸ್ಟ್‌ನಲ್ಲಿ ವಿಂಡೀಸ್‌ನ ದೌರ್ಬಲ್ಯ ಜಗಜ್ಜಾಹೀರಾಗಿದ್ದು, ತಂಡ ಎಲ್ಲಾ ವಿಭಾಗದಲ್ಲೂ ವೈಫಲ್ಯ ಕಾಣುತ್ತಿದೆ. ಭಾರತ ಎಂದಿನಂತೆ ತವರಿನಲ್ಲಿ ತನ್ನ ಪ್ರಾಬಲ್ಯ ಮುಂದುವರಿಸಿದೆ. ಆದರೆ ತಂಡದಲ್ಲಿ ಸಮಸ್ಯಯೇ ಇಲ್ಲ ಎಂದಲ್ಲ. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿರುವ ಸಾಯಿ ಸುದರ್ಶನ್ ಈವರೆಗೂ 7 ಇನ್ನಿಂಗ್ಸ್‌ಗಳಲ್ಲಿ ಒಮ್ಮೆ ಮಾತ್ರ ಅರ್ಧಶತಕ ಬಾರಿಸಿದ್ದು, ದೊಡ್ಡ ಇನ್ನಿಂಗ್ಸ್ ಕಟ್ಟಬೇಕಾದ ಅಗತ್ಯವಿದೆ. ಕನ್ನಡಿಗ ಕೆ.ಎಲ್.ರಾಹುಲ್ ಉತ್ತಮ ಲಯ ದಲ್ಲಿದ್ದರೂ, ಶತಕದ ಬೆನ್ನಲ್ಲೇ ಸುಲಭದಲ್ಲಿ ವಿಕೆಟ್ ಒಪ್ಪಿಸುತ್ತಿದ್ದಾರೆ. ಆಲ್ರೌಂಡರ್ ನಿತೀಶ್ ಕುಮಾರ್ ತಂಡದಲ್ಲಿ ಸ್ಥಾನ ಗಟ್ಟಿಗೊಳಿಸಬೇಕಿದ್ದರೆ, ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲೂ ಮಿಂಚಬೇಕಿದೆ. ಯಶಸ್ವಿ ಜೈಸ್ವಾಲ್ ಕೂಡಾ ಅಬ್ಬರಿಸಬೇಕಾದ ಅಗತ್ಯವಿದೆ.

ಸರಣಿ ಸಮಬಲ ಗುರಿ: ಮತ್ತೊಂದೆಡೆ ವಿಂಡೀಸ್ ಕಳಪೆ ಆಟವಾಡುತ್ತಿದ್ದರೂ, ಬ್ಯಾಟಿಂಗ್ ಸ್ನೇಹಿ ಪಿಚ್‌ನಲ್ಲಿ ಸುಧಾರಿತ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ. ಉತ್ತಮ ಬ್ಯಾಟರ್ ಗಳಿದ್ದರೂ ಭಾರತೀಯ ಬೌಲರ್‌ಗಳ ಮುಂದೆ ಪರದಾಡುತ್ತಿರುವುದು ತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ.

1987ರಿಂದ ಡೆಲ್ಲಿಯಲ್ಲಿ ಸೋತೇ ಇಲ್ಲ ಭಾರತ!

ಭಾರತ ತಂಡ 1987ರಿಂದ ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಯಾವುದೇ ಟೆಸ್ಟ್ ಪಂದ್ಯ ಸೋತಿಲ್ಲ. ಗಮನಾರ್ಹ ಸಂಗತಿ ಏನೆಂದರೆ, 1987ರಲ್ಲಿ ವಿಂಡೀಸ್ ವಿರುದ್ಧವೇ ಭಾರತಕ್ಕೆ ಸೋಲು ಎದುರಾಗಿತ್ತು. ಆ ಬಳಿಕ ಇಲ್ಲಿ ಭಾರತ 12ರಲ್ಲಿ ಗೆದ್ದಿದ್ದರೆ, 12 ಪಂದ್ಯ ಡ್ರಾಗೊಂಡಿದೆ. ಒಟ್ಟಾರೆ ನವದೆಹಲಿಯಲ್ಲಿ ಭಾರತ 35 ಟೆಸ್ಟ್ ಆಡಿದ್ದು, 14ರಲ್ಲಿ ಗೆದ್ದಿದ್ದರೆ, 6ರಲ್ಲಿ ಸೋತಿದೆ. 15 ಪಂದ್ಯ ಡ್ರಾ ಆಗಿವೆ.

ಪಂದ್ಯ ಆರಂಭ: ಬೆಳಗ್ಗೆ 9.30ಕ್ಕೆ

ಪ್ರಸಾರ: ಸ್ಟಾರ್‌ಸ್ಟೋರ್ಟ್ಸ್, ಜಿಯೋಹಾಟ್‌ ಸ್ಟಾರ್