ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಫೋಟೋವೊಂದನ್ನು ಶುಭಮನ್ ಗಿಲ್ ಹಂಚಿಕೊಂಡಿದ್ದು, ಇದು ವಿವಾದಕ್ಕೆ ಕಾರಣವಾಗಿದೆ. ಈ ಫೋಟೋದಲ್ಲಿ 'ಸರಣಿ ಶ್ರೇಷ್ಠ' ಪ್ರಶಸ್ತಿ ವಿಜೇತ ಸಂಜು ಸ್ಯಾಮ್ಸನ್ ಸ್ಪಷ್ಟವಾಗಿ ಕಾಣಿಸದ ಕಾರಣ ಅಭಿಮಾನಿಗಳು ಗಿಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.  

ಮುಂಬೈ: ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಫೋಟೋವೊಂದನ್ನು ಹಂಚಿಕೊಂಡಿದ್ದಕ್ಕೆ ಟೀಂ ಇಂಡಿಯಾದ ಟೆಸ್ಟ್ ಮತ್ತು ಏಕದಿನ ನಾಯಕ ಶುಭಮನ್ ಗಿಲ್, ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನಾಯಕ ಸೂರ್ಯಕುಮಾರ್ ಯಾದವ್ ಅವರು ತಂಡದ ಸದಸ್ಯರೊಂದಿಗೆ ಕಪ್ ಎತ್ತಿ ಸಂಭ್ರಮಿಸುತ್ತಿರುವ ಫೋಟೋವನ್ನು ಗಿಲ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಆದರೆ ಈ ಫೋಟೋದಲ್ಲಿ ಸಂಜು ಸ್ಯಾಮ್ಸನ್ ಮತ್ತು ರಿಂಕು ಸಿಂಗ್ ಹಿಂದಿದ್ದು, ಅವರ ಮುಖಗಳು ಸ್ಪಷ್ಟವಾಗಿ ಕಾಣುತ್ತಿಲ್ಲ. ತಂಡದ ಎಲ್ಲಾ ಆಟಗಾರರ ಮುಖ ಸ್ಪಷ್ಟವಾಗಿ ಕಾಣುವ ಎಷ್ಟೋ ಫೋಟೋಗಳಿದ್ದರೂ, ಗಿಲ್ ಇದೇ ಫೋಟೋವನ್ನು ಯಾಕೆ ಆಯ್ಕೆ ಮಾಡಿಕೊಂಡರು ಅನ್ನೋದೇ ಅಭಿಮಾನಿಗಳ ಪ್ರಶ್ನೆಯಾಗಿದೆ.

ಗಿಲ್ ಬದಲಿಗೆ ವಿಶ್ವಕಪ್ ತಂಡ ಕೂಡಿಕೊಂಡಿದ್ದ ಸಂಜು

ಟಿ20 ವಿಶ್ವಕಪ್‌ಗೂ ಸ್ವಲ್ಪ ದಿನಗಳ ಹಿಂದೆ ಗಿಲ್, ಟಿ20 ತಂಡದ ಓಪನರ್ ಮತ್ತು ಉಪನಾಯಕರಾಗಿದ್ದರು. ಕಳೆದ ವರ್ಷದಿಂದ ಗಿಲ್ ಓಪನರ್ ಆಗಿ ಆಡಲು ಶುರುಮಾಡಿದ್ದರಿಂದ, ಸಂಜು ಸ್ಯಾಮ್ಸನ್‌ಗೆ ತಂಡದಲ್ಲಿ ಸ್ಥಾನ ಸಿಗುವುದು ಕಷ್ಟವಾಗಿತ್ತು. ಶುಭ್‌ಮನ್ ಗಿಲ್ ಓಪನರ್ ಆದ ಕಾರಣ, ಏಷ್ಯಾಕಪ್‌ನಂತಹ ಟೂರ್ನಿಗಳಲ್ಲಿ ಸಂಜು ಮಧ್ಯಮ ಕ್ರಮಾಂಕಕ್ಕೆ ಇಳಿಯಬೇಕಾಯ್ತು. ನಂತರ ಪ್ಲೇಯಿಂಗ್ ಇಲೆವೆನ್‌ನಿಂದಲೂ ಸ್ಥಾನ ಕಳೆದುಕೊಂಡರು. ಆದರೆ, ಓಪನರ್ ಆಗಿ ಗಿಲ್ ಮಿಂಚಲು ವಿಫಲರಾದರು. ಹೀಗಾಗಿ, ಟಿ20 ವಿಶ್ವಕಪ್‌ಗೂ ಮುನ್ನ ಗಿಲ್ ಅವರನ್ನು ಉಪನಾಯಕನ ಸ್ಥಾನದಿಂದ ಕೆಳಗಿಳಿಸಿ, ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಮತ್ತು ಟಿ20 ವಿಶ್ವಕಪ್‌ನಲ್ಲಿ ಸಂಜುಗೆ ಮತ್ತೆ ಓಪನರ್ ಆಗಿ ಅವಕಾಶ ನೀಡಲಾಯಿತು.

ಆದರೆ ನ್ಯೂಜಿಲೆಂಡ್ ಎದುರಿನ ಸರಣಿಯಲ್ಲಿ ಆರಂಭಿಕನಾಗಿ ತಂಡ ಕೂಡಿಕೊಂಡ ಸಂಜು ಸ್ಯಾಮ್ಸನ್ ರನ್ ಗಳಿಸಲು ವಿಫಲವಾಗಿದ್ದರು. ಹೀಗಾಗಿ ಟಿ20 ವಿಶ್ವಕಪ್ ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ಬೆಂಚ್ ಕಾಯಬೇಕಾಗಿ ಬಂತು. ವಿಶ್ವಕಪ್‌ನ ಗ್ರೂಪ್ ಹಂತದಲ್ಲಿ ಸಂಜು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಕಳೆದುಕೊಂಡರೂ, ಸೂಪರ್ 8 ಹಂತದಿಂದ ಮತ್ತೆ ತಂಡಕ್ಕೆ ಬಂದರು. ಸತತ ಮೂರು ಅರ್ಧಶತಕಗಳನ್ನು ಬಾರಿಸಿ ಭಾರತದ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಷ್ಟೇ ಅಲ್ಲ, 'ಸರಣಿ ಶ್ರೇಷ್ಠ' ಪ್ರಶಸ್ತಿಯನ್ನೂ ಗೆದ್ದುಕೊಂಡರು.

View post on Instagram

ಗಿಲ್‌ ಮೇಲೆ ಆಕ್ರೋಶ ಹೊರಹಾಕಿದ ಸಂಜು ಸ್ಯಾಮ್ಸನ್ ಫ್ಯಾನ್ಸ್

ಗಿಲ್ ಬೇಕಂತಲೇ ಈ ರೀತಿ ಮಾಡಿಲ್ಲದಿರಬಹುದು. ಆದರೆ, 'ಸರಣಿ ಶ್ರೇಷ್ಠ' ಆಟಗಾರನಾದ ಸಂಜು ಇರುವ ಬೇರೆ ಸ್ಪಷ್ಟವಾದ ಫೋಟೋಗಳಿದ್ದರೂ ಇದನ್ನೇ ಯಾಕೆ ಹಾಕಿದರು ಎಂದು ಫ್ಯಾನ್ಸ್ ಗರಂ ಆಗಿದ್ದಾರೆ. ಇನ್ನು ಕೆಲವರು ಗಿಲ್ ಪರ ಬ್ಯಾಟ್ ಬೀಸಿದ್ದು, 'ಗಿಲ್ ಅದನ್ನು ಗಮನಿಸಿರಲಿಕ್ಕಿಲ್ಲ, ಸಂಜು ಆ ಫೋಟೋದಲ್ಲಿ ಹಿಂದೆಯಾದರೂ ಇದ್ದಾರಲ್ಲ' ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಗಿಲ್ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಸಂಜು ಕಾಣದಿರುವುದನ್ನು ಪ್ರಶ್ನಿಸಿದ ಅಭಿಮಾನಿಯೊಬ್ಬರ ಕಾಮೆಂಟ್‌ಗೆ ಸುಮಾರು 3000 ಲೈಕ್‌ಗಳು ಬಂದಿವೆ.

Scroll to load tweet…

Scroll to load tweet…

ಟಿ20 ಕ್ರಿಕೆಟ್‌ಗೆ ಸಂಜು ಇನ್, ಗಿಲ್ ಔಟ್!

ಟಿ20 ವಿಶ್ವಕಪ್ ಟೂರ್ನಿಗೂ ಮೊದಲು ಭವಿಷ್ಯದ ಟಿ20 ನಾಯಕನಾಗಿ ಬಿಂಬಿಸಿಕೊಂಡಿದ್ದ ಶುಭ್‌ಮನ್ ಗಿಲ್‌ಗೆ ಹೆಚ್ಚಿನ ಅವಕಾಶ ನೀಡಲಾಗಿತ್ತು. ಫಾರ್ಮ್‌ನಲ್ಲಿದ್ದ ಸಂಜು ಅವರನ್ನು ಬಿಟ್ಟು ಏಷ್ಯಾಕಪ್ ಟೂರ್ನಿಯಲ್ಲೂ ಗಿಲ್‌ಗೆ ಉಪನಾಯಕ ಪಟ್ಟ ಕಟ್ಟಿ ಆರಂಭಿಕನಾಗಿ ಕಣಕ್ಕಿಳಿಸಲಾಗಿತ್ತು. ಆದರೆ ಗಿಲ್ ಟಿ20 ಮಾದರಿಯಲ್ಲಿ ಸಿಕ್ಕ ಅವಕಾಶ ಬಳಸಿಕೊಳ್ಳಲಿಲ್ಲ. ಹೀಗಾಗಿ ಗಿಲ್‌ಗೆ ಗೇಟ್‌ಪಾಸ್ ನೀಡಿ ಸಂಜುಗೆ ಮಣೆ ಹಾಕಲಾಗಿತು. ಟಿ20 ವಿಶ್ವಕಪ್ ಟೂರ್ನಿಯ ಮಹತ್ವದ ಕೊನೆಯ ಮೂರು ಪಂದ್ಯಗಳಲ್ಲೂ ಸ್ಪೋಟಕ ಅರ್ಧಶತಕ ಸಿಡಿಸುವ ಮೂಲಕ ಸಂಜು ಇದೀಗ ತಮ್ಮ ಆರಂಭಿಕ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು.