ಇಂಗ್ಲೆಂಡ್‌ನ 'ದಿ ಹಂಡ್ರೆಡ್' ಟೂರ್ನಿಗೆ ಸನ್‌ರೈಸರ್ಸ್ ಲೀಡ್ಸ್ ತಂಡ ಪಾಕ್ ಸ್ಪಿನ್ನರ್ ಅಬ್ರಾರ್ ಅಹ್ಮದ್‌ನನ್ನು ಖರೀದಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಸಿಸಿಐ, ಇದು ವಿದೇಶಿ ಲೀಗ್ ಆಗಿರುವುದರಿಂದ ತಾವು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದಿದೆ.

ನವದೆಹಲಿ: ಇಂಗ್ಲೆಂಡ್‌ನಲ್ಲಿ ನಡೆಯುವ 'ದಿ ಹಂಡ್ರೆಡ್' ಕ್ರಿಕೆಟ್ ಟೂರ್ನಿಗಾಗಿ ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್ ಅಹ್ಮದ್‌ನನ್ನು ಸನ್‌ರೈಸರ್ಸ್ ಲೀಡ್ಸ್ ತಂಡಕ್ಕೆ ಸೇರಿಸಿಕೊಂಡಿರುವ ವಿವಾದದ ಬಗ್ಗೆ ಬಿಸಿಸಿಐ ಕೊನೆಗೂ ತುಟಿ ಬಿಚ್ಚಿದೆ. ಸನ್‌ರೈಸರ್ಸ್ ಲೀಡ್ಸ್ ತಂಡದ ನಿರ್ಧಾರದಲ್ಲಿ ಬಿಸಿಸಿಐ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ, ಈ ಬಗ್ಗೆ ಫ್ರಾಂಚೈಸಿಯೇ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಸುದ್ದಿ ಸಂಸ್ಥೆ ANIಗೆ ತಿಳಿಸಿದ್ದಾರೆ.

ಜನರ ಆಕ್ರೋಶದ ಬೆನ್ನಲ್ಲೇ ಕೊನೆಗೂ ಮೌನ ಮುರಿದ ಬಿಸಿಸಿಐ

ಭಾರತೀಯ ಮಾಲೀಕತ್ವದ ತಂಡವೊಂದು ಪಾಕ್ ಆಟಗಾರನನ್ನು ಖರೀದಿಸಿದ್ದಕ್ಕೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಬಿಸಿಸಿಐ ಈ ಸ್ಪಷ್ಟನೆ ನೀಡಿದೆ. "ಈ ವಿಷಯಕ್ಕೂ ಐಪಿಎಲ್‌ಗೂ ಯಾವುದೇ ಸಂಬಂಧವಿಲ್ಲ. ಇದೊಂದು ವಿದೇಶಿ ಲೀಗ್, ಹಾಗಾಗಿ ಇದು ಬಿಸಿಸಿಐ ವ್ಯಾಪ್ತಿಗೆ ಬರುವುದಿಲ್ಲ. ಈ ವಿಚಾರದಲ್ಲಿ ನಾವು ಏನೂ ಮಾಡಲು ಸಾಧ್ಯವಿಲ್ಲ. ಫ್ರಾಂಚೈಸಿಯೇ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು" ಎಂದು ರಾಜೀವ್ ಶುಕ್ಲಾ ಹೇಳಿದ್ದಾರೆ.

Scroll to load tweet…

ಟಿ20 ರ‍್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನದಲ್ಲಿರುವ ಅಬ್ರಾರ್ ಅಹ್ಮದ್‌ನನ್ನು ಕಾವ್ಯಾ ಮಾರನ್ ಮಾಲೀಕತ್ವದ ಸನ್‌ರೈಸರ್ಸ್ ಲೀಡ್ಸ್ ತಂಡ ಸುಮಾರು 2.35 ಕೋಟಿ ರೂಪಾಯಿಗೆ (£190,000) ಖರೀದಿಸಿತ್ತು. ಆದಿಲ್ ರಶೀದ್ ಸಿಗದ ಕಾರಣ, 'ಮಿಸ್ಟರಿ ಸ್ಪಿನ್ನರ್' ಆಗಿರುವ ಅಬ್ರಾರ್‌ನನ್ನು ಆಯ್ಕೆ ಮಾಡಿಕೊಂಡಿದ್ದೇವೆ ಎಂದು ತಂಡದ ಕೋಚ್ ಡೇನಿಯಲ್ ವೆಟ್ಟೋರಿ ಹರಾಜಿನ ನಂತರ ಹೇಳಿದ್ದರು. ಆದರೆ, ಈ ನಡೆ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು.

ಈ ಹಿಂದೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ಹಿನ್ನೆಲೆಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಮುಸ್ತಾಫಿಜುರ್ ರಹಮಾನ್ ಅವರನ್ನು ಖರೀದಿಸಿದಾಗಲೂ ಇದೇ ರೀತಿ ವಿರೋಧ ವ್ಯಕ್ತವಾಗಿತ್ತು. ಆಗ ಬಿಸಿಸಿಐ ಮಧ್ಯಪ್ರವೇಶಿಸಿತ್ತು ಮತ್ತು ಕೆಕೆಆರ್ ಆ ಆಟಗಾರನನ್ನು ಕೈಬಿಟ್ಟಿತ್ತು. ಇದನ್ನು ವಿರೋಧಿಸಿ ಬಾಂಗ್ಲಾದೇಶ 2026ರ ವಿಶ್ವಕಪ್‌ನಿಂದ ಹಿಂದೆ ಸರಿದಿತ್ತು. ಅದರ ಬದಲು ಸ್ಕಾಟ್ಲೆಂಡ್ ಆ ಟೂರ್ನಿಯಲ್ಲಿ ಆಡಿತ್ತು.

ಅಬ್ರಾರ್‌ನನ್ನು ತಂಡಕ್ಕೆ ಸೇರಿಸಿಕೊಂಡ ಬೆನ್ನಲ್ಲೇ, ಸನ್‌ರೈಸರ್ಸ್ ಲೀಡ್ಸ್ ತಂಡದ ಅಧಿಕೃತ 'ಎಕ್ಸ್' ಖಾತೆಯನ್ನು ಅಮಾನತುಗೊಳಿಸಲಾಗಿತ್ತು. ವಿರೋಧ ಹೆಚ್ಚಾಗುತ್ತಿರುವ ಕಾರಣ, ಫ್ರಾಂಚೈಸಿ ಆ ಆಟಗಾರನನ್ನು ತಂಡದಿಂದ ಕೈಬಿಡಲಿದೆಯೇ ಎಂದು ಎಲ್ಲರೂ ಕಾದು ನೋಡುತ್ತಿದ್ದಾರೆ.

ದಿ ಹಂಡ್ರೆಡ್ ಟೂರ್ನಿಯ ಬಗ್ಗೆ:

ದಿ ಹಂಡ್ರೆಡ್ ಟೂರ್ನಿಯು ಇಂಗ್ಲೆಂಡ್‌ನಲ್ಲಿ ನಡೆಯುವ ಚುಟುಕು ಕ್ರಿಕೆಟ್ ಟೂರ್ನಿಯಾಗಿದೆ. ಹೆಸರೇ ಹೇಳುವಂತೆ ಇದು ಕೇವಲ 100 ಎಸೆತಗಳನ್ನೊಳಗೊಂಡ ಟೂರ್ನಿಯಾಗಿದೆ. ಈ ಟೂರ್ನಿಯಲ್ಲಿ ಎಂಟು ಫ್ರಾಂಚೈಸಿಗಳು ಪಾಲ್ಗೊಳ್ಳುತ್ತಿವೆ. ಈ ಬಾರಿಯ ಹಂಡ್ರೆಡ್ ಲೀಗ್ ಟೂರ್ನಿಯು ಮುಂಬರುವ ಜುಲೈ 21ರಿಂದ ಆರಂಭವಾಗಲಿದೆ. ಇನ್ನು ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯ ಮಾಲಕಿಯಾಗಿರುವ ಕಾವ್ಯಾ ಮಾರನ್ ಅವರು ಹಂಡ್ರೆಡ್ ಲೀಗ್‌ನಲ್ಲಿ ಸನ್‌ರೈಸರ್ಸ್ ಲೀಡ್ಸ್ ಎನ್ನುವ ತಂಡದ ಮಾಲೀಕತ್ವವನ್ನು ಹೊಂದಿದ್ದಾರೆ.