ಮಹಿಳಾ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡವು ಸತತ 9ನೇ ಬಾರಿಗೆ ಫೈನಲ್ ಪ್ರವೇಶಿಸಿದ್ದು, ಇದೀಗ 8ನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ದಾಂಬುಲಾ: 9ನೇ ಆವೃತ್ತಿಯ ಮಹಿಳಾ ಏಷ್ಯಾಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಬಾಂಗ್ಲಾದೇಶವನ್ನು 10 ವಿಕೆಟ್‌ಗಳಿಂದ ಬಗ್ಗುಬಡಿದ ಭಾರತ ಮಹಿಳಾ ಕ್ರಿಕೆಟ್ ತಂಡವು ಅನಾಯಾಸವಾಗಿ ಫೈನಲ್‌ಗೆ ಲಗ್ಗೆಯಿಟ್ಟಿದೆ. ಈ ಮೂಲಕ ಸತತ 9ನೇ ಬಾರಿಗೆ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದೆ.

ಗೆಲ್ಲಲು ಕೇವಲ 81 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಟೀಂ ಇಂಡಿಯಾ, ಸ್ಪೋಟಕ ಆರಂಭವನ್ನೇ ಪಡೆಯಿತು. ಬಾಂಗ್ಲಾ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ಭಾರತದ ಆರಂಭಿಕ ಜೋಡಿಯಾದ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂಧನಾ ಜೋಡಿ 11 ಓವರ್‌ಗಳನ್ನು ಎದುರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಎಡಗೈ ಬ್ಯಾಟರ್ ಶಫಾಲಿ ವರ್ಮಾ 39 ಎಸೆತಗಳನ್ನು ಎದುರಿಸಿ 9 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಅಜೇಯ 55 ರನ್ ಸಿಡಿಸಿದರು. ಇನ್ನು ಮತ್ತೊಂದು ತುದಿಯಲ್ಲಿ ಶಫಾಲಿ ವರ್ಮಾ ಅಜೇಯ 26 ರನ್ ಬಾರಿಸಿದರು.

Scroll to load tweet…

ಮೆಗಾ ಹರಾಜಿಗೂ ಮುನ್ನ 6 ಆಟಗಾರರ ರೀಟೈನ್‌ಗೆ ಫ್ರಾಂಚೈಸಿಗಳ ಮನವಿ: ಆರ್‌ಸಿಬಿಯಲ್ಲೇ ಉಳಿತಾರಾ ಮ್ಯಾಕ್ಸಿ, ಫಾಫ್..?

ಇನ್ನು ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶ ತಂಡವು ರೇಣುಕಾ ಸಿಂಗ್ ಹಾಗೂ ರಾಧಾ ಯಾದವ್ ದಾಳಿಗೆ ತತ್ತರಿಸಿ ಹೋಯಿತು. ಅಗ್ರಕ್ರಮಾಂಕದ ಮೂವರು ಬ್ಯಾಟರ್‌ಗಳನ್ನು ಒಂದಂಕಿ ಮೊತ್ತಕ್ಕೆ ಬಲಿ ಪಡೆಯುವಲ್ಲಿ ರೇಣುಕಾ ಸಿಂಗ್ ಯಶಸ್ವಿಯಾದರು. ಬಾಂಗ್ಲಾದೇಶ ಪರ ನಾಯಕಿ ನಿಗಾರ್ ಸುಲ್ತಾನಾ(32) ಹಾಗು ಶೋರ್ನಾ ಅಖ್ತರ್(19) ಹೊರತುಪಡಿಸಿ ಉಳಿದ್ಯಾವ ಬ್ಯಾಟರ್‌ಗಳು ಎರಡಂಕಿ ಮೊತ್ತ ದಾಖಲಿಸಲು ಸಫಲರಾಗಲಿಲ್ಲ. 

Scroll to load tweet…

ಭಾರತ ತಂಡದ ಪರ ರೇಣುಕಾ ಸಿಂಗ್‌, ರಾಧಾ ಯಾದವ್ ತಲಾ 3 ವಿಕೆಟ್ ಪಡೆದರೆ, ಪೂಜಾ ವಸ್ತ್ರಾಕರ್ ಮತ್ತು ದೀಪ್ತಿ ಶರ್ಮಾ ಒಂದೊಂದು ಬಲಿ ಪಡೆದರು.

ಭಾರತದ ಟಾಪ್‌-10 ಪದಕ ಭರವಸೆಗಳು! ಇತಿಹಾಸ ಬರೆಯಲು ಭಾರತೀಯರು ರೆಡಿ

9ನೇ ಬಾರಿಗೆ ಫೈನಲ್ 8ನೇ ಟ್ರೋಫಿ ಮೇಲೆ ಕಣ್ಣು: ಭಾರತ ಮಹಿಳಾ ಕ್ರಿಕೆಟ್‌ ತಂಡವು 9ನೇ ಆವೃತ್ತಿಯ ಏಷ್ಯಾಕಪ್ ಟೂರ್ನಿಯಲ್ಲಿ ಸತತ 9ನೇ ಬಾರಿಗೆ ಫೈನಲ್ ಪ್ರವೇಶಿಸುವಲ್ಲಿ ಯಶಸ್ವಿಯಾದರು. 2018ರ ಏಷ್ಯಾಕಪ್ ಫೈನಲ್‌ನಲ್ಲಿ ಬಾಂಗ್ಲಾದೇಶ ಎದುರು ಮುಗ್ಗರಿಸಿದ್ದು ಬಿಟ್ಟರೇ, ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಮಹಿಳಾ ತಂಡವು ಫೈನಲ್‌ನಲ್ಲಿ ಸೋತಿದ್ದೇ ಇಲ್ಲ. ಈಗಾಗಲೇ 7 ಬಾರಿ ಏಷ್ಯಾಕಪ್ ಚಾಂಪಿಯನ್ ಆಗಿರುವ ಭಾರತ ಮಹಿಳಾ ಕ್ರಿಕೆಟ್ ತಂಡವು ಇದೀಗ 8ನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ.

ಇದೀಗ ಭಾರತ ತಂಡವು ಪ್ರಶಸ್ತಿಗಾಗಿ ಜುಲೈ 28ರಂದು ಪಾಕಿಸ್ತಾನ ಇಲ್ಲವೇ ಶ್ರೀಲಂಕಾ ಎದುರು ಕಾದಾಡಲಿದೆ. ಏಷ್ಯಾಕಪ್ ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಲಂಕಾ ಹಾಗೂ ಪಾಕಿಸ್ತಾನ ತಂಡಗಳು ಕಾದಾಡಲಿದ್ದು, ಈ ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡವು ಭಾರತದ ಎದುರು ಫೈನಲ್‌ನಲ್ಲಿ ಹೋರಾಡಲಿದೆ.