ಮೆಗಾ ಹರಾಜಿಗೂ ಮುನ್ನ 6 ಆಟಗಾರರ ರೀಟೈನ್‌ಗೆ ಫ್ರಾಂಚೈಸಿಗಳ ಮನವಿ: ಆರ್‌ಸಿಬಿಯಲ್ಲೇ ಉಳಿತಾರಾ ಮ್ಯಾಕ್ಸಿ, ಫಾಫ್..?
ಮುಂಬರುವ ಐಪಿಎಲ್ ಮೆಗಾ ಹರಾಜಿಗೂ ಮುನ್ನ 6 ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಬಿಸಿಸಿಐ ಅವಕಾಶ ಮಾಡಿಕೊಡುವ ಸಾಧ್ಯತೆಯಿದೆ. ಹೀಗಾಗಿ ಯಾರನ್ನೆಲ್ಲಾ ರೀಟೈನ್ ಮಾಡಿಕೊಳ್ಳಬಹುದು ಎನ್ನುವ ಕುತೂಹಲ ಗರಿಗೆದರಿದೆ
ಬೆಂಗಳೂರು: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಈಗಿನಿಂದಲೇ ಸಿದ್ದತೆಗಳು ಶುರುವಾಗಿವೆ. ಕಳೆದ ಜುಲೈ 24ರಂದು ಬಿಸಿಸಿಐ ಜತೆಗೆ ನಡೆದ ಫ್ರಾಂಚೈಸಿಗಳ ಸಭೆಯಲ್ಲಿ ಬಹುತೇಕ ಫ್ರಾಂಚೈಸಿಗಳು ಪ್ರಮುಖ ಡಿಮ್ಯಾಂಡ್ ಮುಂದಿಟ್ಟಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಹೌದು, ಐಪಿಎಲ್‌ನ ಕೆಲ ಫ್ರಾಂಚೈಸಿಗಳು ಇನ್ನು ಮುಂದೆ 5 ವರ್ಷಗಳಿಗೊಮ್ಮೆ ಮೆಗಾ ಹರಾಜು ನಡೆಸಬೇಕು ಹಾಗೂ ಹರಾಜಿಗೂ ಮುನ್ನ 6 ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಅವಕಾಶ ನೀಡಬೇಕು ಎಂದು ಮನವಿ ಮಾಡಿಕೊಂಡಿವೆ. ಸದ್ಯ ಮೂರು ವರ್ಷಗಳಿಗೊಮ್ಮೆ ಐಪಿಎಲ್ ಮೆಗಾ ಹರಾಜು ನಡೆಯುತ್ತಿದ್ದು, ಕೊನೆಯ ಬಾರಿಗೆ 2022ರಲ್ಲಿ ಐಪಿಎಲ್ ಮೆಗಾ ಹರಾಜು ನಡೆದಿತ್ತು. ಎಲ್ಲಾ ಅಂದುಕೊಂಡಂತೆ ಆದರೆ ಇನ್ನು ಕೆಲವೇ ತಿಂಗಳಲ್ಲಿ 18ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಮೆಗಾ ಹರಾಜು ನಡೆಯಬೇಕಿದೆ.
ಸದ್ಯ ಮೆಗಾ ಹರಾಜಿಗೂ ಮುನ್ನ ಪ್ರತಿ ಫ್ರಾಂಚೈಸಿಯು ಗರಿಷ್ಠ 4 ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ. ಆದರೆ ಈ ಬಾರಿ ಎಷ್ಟು ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಬಿಸಿಸಿಐ ಅವಕಾಶ ಕಲ್ಪಿಸಿಕೊಡಲಿದೆ ಎನ್ನುವ ಕುತೂಹಲ ಜೋರಾಗಿದೆ.
5 ವರ್ಷಕ್ಕೆ ಮೆಗಾ ಹರಾಜು, ಆರು ಆಟಗಾರರು ರೀಟೈನ್; ಬಿಸಿಸಿಐ ಮುಂದೆ ಐಪಿಎಲ್ ಫ್ರಾಂಚೈಸಿ ಡಿಮ್ಯಾಂಡ್..!
ಇನ್ನು ಒಂದು ವೇಳೆ ಐಪಿಎಲ್ ಫ್ರಾಂಚೈಸಿಯು ಆರು ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಬಿಸಿಸಿಐ ಅವಕಾಶ ಕಲ್ಪಿಸಿಕೊಟ್ಟರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಯಾರನ್ನೆಲ್ಲಾ ರೀಟೈನ್ ಮಾಡಿಕೊಳ್ಳಲಿದೆ ಎನ್ನುವ ಕುತೂಹಲ ಕೂಡಾ ಜೋರಾಗಿದೆ.
ಆರ್‌ಸಿಬಿ ಫ್ರಾಂಚೈಸಿಯು ಮೊದಲ ಆಯ್ಕೆಯ ರೂಪದಲ್ಲಿ ವಿರಾಟ್ ಕೊಹ್ಲಿಯನ್ನು ರೀಟೈನ್ ಮಾಡಿಕೊಳ್ಳಲಿದೆ. ಕೊಹ್ಲಿ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಬ್ಯಾಟರ್ ಎನಿಸಿಕೊಂಡಿದ್ದು, ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸುವ ಮೂಲಕ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದರು.
ಇನ್ನು ಎರಡನೇ ಆಯ್ಕೆಯ ರೂಪದಲ್ಲಿ ಆರ್‌ಸಿಬಿ ಫ್ರಾಂಚೈಸಿಯು ರಜತ್ ಪಾಟೀದಾರ್ ಅವರನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಪಾಟೀದಾರ್, ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯ ದ್ವಿತಿಯಾರ್ಧದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಮಿಂಚಿದ್ದರು. ಇನ್ನು ಯುವ ಆಟಗಾರನಾಗಿರುವ ಪಾಟೀದಾರ್, ಆರ್‌ಸಿಬಿ ತಂಡದಲ್ಲಿ ಉಳಿದುಕೊಳ್ಳುವುದು ಬಹುತೇಕ ಗ್ಯಾರಂಟಿ.
KKR ಅಲ್ಲವೇ ಅಲ್ಲ, ಈ ಐಪಿಎಲ್ ತಂಡಕ್ಕೆ ರಾಹುಲ್ ದ್ರಾವಿಡ್ ಕೋಚ್; ಪ್ರಕಟಣೆಯೊಂದೇ ಬಾಕಿ..?
ಆರ್‌ಸಿಬಿ ಫ್ರಾಂಚೈಸಿಯು ಮೂರನೇ ರೀಟೈನ್ ರೂಪದಲ್ಲಿ ಇಂಗ್ಲೆಂಡ್ ಮೂಲದ ವಿಲ್ ಜ್ಯಾಕ್ಸ್ ಅವರನ್ನು ತನ್ನಲ್ಲೇ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಯಾವುದೇ ಪರಿಸ್ಥಿತಿಯಲ್ಲೂ ಮೈಚಳಿ ಬಿಟ್ಟು ಬ್ಯಾಟ್ ಬೀಸುವ ಕಲೆಯನ್ನು ಕರಗತ ಮಾಡಿಕೊಂಡಿರುವ ಜ್ಯಾಕ್ಸ್, ಕಳೆದ ಐಪಿಎಲ್‌ನಲ್ಲಿ ಅತಿವೇಗದ ಶತಕ ಸಿಡಿಸಿದ್ದರು. ಸಹಜವಾಗಿಯೇ ಜ್ಯಾಕ್ಸ್ ಆರ್‌ಸಿಬಿ ಪಾಳಯದಲ್ಲಿ ಮುಂದಿನ ಆವೃತ್ತಿಯಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆ.
ಇನ್ನು ನಾಲ್ಕನೇ ಆಯ್ಕೆಯ ರೂಪದಲ್ಲಿ ನಾಯಕ ಫಾಫ್ ಡು ಪ್ಲೆಸಿಸ್ ಇಲ್ಲವೇ ಗ್ಲೆನ್ ಮ್ಯಾಕ್ಸ್‌ವೆಲ್ ಇಬ್ಬರಲ್ಲಿ ಒಬ್ಬರನ್ನು ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಮ್ಯಾಕ್ಸ್‌ವೆಲ್ ಕಳೆದ ಐಪಿಎಲ್‌ನಲ್ಲಿ ದಯನೀಯ ವೈಫಲ್ಯ ಅನುಭವಿಸಿದ್ದರು. ಇನ್ನು ನಾಯಕನಾಗಿ ಮೂರು ಆವೃತ್ತಿಯಲ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸಿದ್ದ ಫಾಫ್, ಈ ಬಾರಿ ಕೇವಲ ಆಟಗಾರನಾಗಿ ತಂಡದಲ್ಲಿ ಕಾಣಿಸಿಕೊಂಡರೂ ಅಚ್ಚರಿಯಿಲ್ಲ.
ಇನ್ನು 5ನೇ ಆಯ್ಕೆಯ ರೂಪದಲ್ಲಿ ಆರ್‌ಸಿಬಿ ಫ್ರಾಂಚೈಸಿಯು ಹೈದರಾಬಾದ್ ಮೂಲದ ವೇಗಿ ಮೊಹಮ್ಮದ್ ಸಿರಾಜ್ ಅವರನ್ನು ರೀಟೈನ್ ಮಾಡಿಕೊಳ್ಳುವ ಸಾಧ್ಯತೆಯಿದೆ. ಸಿರಾಜ್ 2018ರಿಂದಲೂ ಆರ್‌ಸಿಬಿ ತಂಡದ ಬ್ಯಾಟಿಂಗ್ ಬೆನ್ನೆಲುಬು ಎನಿಸಿಕೊಂಡಿದ್ದಾರೆ. ಕಳೆದ ಬಾರಿ ಕೊಂಚ ನಿರಾಸೆ ಅನುಭವಿಸಿದ್ದರೂ ಸಿರಾಜ್, ಯಾವುದೇ ಕ್ಷಣದಲ್ಲಿ ಬೇಕಿದ್ದರೂ ಕಮ್‌ಬ್ಯಾಕ್ ಮಾಡಬಲ್ಲ ಆಟಗಾರ ಎನಿಸಿಕೊಂಡಿದ್ದಾರೆ.
ಯಶ್ ದಯಾಳ್, ಎಡಗೈ ವೇಗಿಯಾಗಿದ್ದು ಆರ್‌ಸಿಬಿ ತಂಡದ ಪರ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ತಂಡದ ಪರ ಗರಿಷ್ಠ ವಿಕೆಟ್ ಕಬಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದರು. ಡೆತ್ ಓವರ್‌ಗಳಲ್ಲಿ ಪರಿಣಾಮಕಾರಿ ದಾಳಿ ನಡೆಸಿ ಮಿಂಚಿದ್ದ ದಯಾಳ್ ಅವರನ್ನು ಆರ್‌ಸಿಬಿ ಫ್ರಾಂಚೈಸಿಯು ತನ್ನ ತೆಕ್ಕೆಯಲ್ಲೇ ಉಳಿಸಿಕೊಂಡರೆ ಅಚ್ಚರಿಪಡುವಂತದ್ದು ಏನೂ ಇಲ್ಲ.
ಇದಿಷ್ಟು ಸಾಧ್ಯವಾಗಬೇಕಿದ್ದರೇ, ಐಪಿಎಲ್ ಫ್ರಾಂಚೈಸಿಯು ಗರಿಷ್ಠ 6 ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕಿದೆ. ಇದೆಲ್ಲಾ ಸಾಧ್ಯವಾಗುತ್ತಾ ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕಿದೆ.