ಆರ್‌ಸಿಬಿ ಫ್ರಾಂಚೈಸಿಯು ವಿಲ್ ಜ್ಯಾಕ್ಸ್ ಅವರಿಗೆ ಆರ್‌ಟಿಎಂ ಕಾರ್ಡ್ ಬಳಸದೇ ಇದ್ದದ್ದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಜೆಡ್ಡಾ: ಹರಾಜು ಪ್ರಕ್ರಿಯೆಯನ್ನು ವೀಕ್ಷಿಸುತ್ತಿದ್ದವರಿಗೆ ಆರ್‌ಸಿಬಿ ಹಾಗೂಮುಂಬೈ ಇಂಡಿಯನ್ಸ್ ತಂಡಗಳ ಮಾಲಿಕರ ನಡುವೆ ಒಳ ಒಪ್ಪಂದ ಆಗಿದೆಯೇ ಎನ್ನುವ ಅನುಮಾನ ಮೂಡಿದ್ದು ಸಹಜ.
ಕಳೆದ ವರ್ಷ ಆರ್‌ಸಿಬಿ ತಂಡದಲ್ಲಿ ಆಡಿ ಅಬ್ಬರಿಸಿದ್ದ ಇಂಗ್ಲೆಂಡ್‌ನ ವಿಲ್ ಜ್ಯಾಕ್ಸ್‌ರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಕೇವಲ 5.25 ಕೋಟಿಗೆ ಖರೀದಿಸಿತು. ಆರ್‌ಸಿಬಿ ಆರ್‌ಟಿಎಂ ಕಾರ್ಡ್ ಬಳಕೆ ಮಾಡದೆ ಇರಲು ನಿರ್ಧರಿಸಿತು. 2 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ವಿಲ್ ಜ್ಯಾಕ್ಸ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಆರ್‌ಟಿಎಂ ಕಾರ್ಡ್ ಬಳಸಿ ರೀಟೈನ್ ಮಾಡಿಕೊಳ್ಳಲಾಗಿದೆ ಎಂದು ಭಾವಿಸಲಾಗಿತ್ತು. ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು 5.25 ಕೋಟಿ ರುಪಾಯಿಗೆ ವಿಲ್ ಜ್ಯಾಕ್ಸ್‌ಗೆ ಬಿಡ್ ಮಾಡಿದಾಗ ಆರ್‌ಸಿಬಿ ಫ್ರಾಂಚೈಸಿ ಬಳಿ 10 ಕೋಟಿಗೂ ಅಧಿಕ ಹಣ ಪರ್ಸ್‌ನಲ್ಲಿತ್ತು. ಹೀಗಿದ್ದೂ ಜ್ಯಾಕ್ಸ್ ಅವರಿಗೆ ಆರ್‌ಟಿಎಂ ಬಳಸದೇ ಹೋದದ್ದು ಆರ್‌ಸಿಬಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಕೇವಲ 13 ವರ್ಷದ ವೈಭವ್‌ಗೆ 1.1 ಕೋಟಿ ನೀಡಿ ಖರೀದಿಸಿದ ರಾಯಲ್ಸ್: ಅಷ್ಟಕ್ಕೂ ಯಾರೀತ?
ಇನ್ನು ವಿಲ್ ಜ್ಯಾಕ್ಸ್ ತಮ್ಮ ತೆಕ್ಕೆಗೆ ಬೀಳುತ್ತಿದ್ದಂತೆ ಮುಂಬೈ ಇಂಡಿಯನ್ಸ್ ಮಾಲೀಕ ಆಕಾಶ್ ಅಂಬಾನಿ ಎದ್ದು ಹೋಗಿ ಆರ್‌ಸಿಬಿ ತಂಡದ ಅಧ್ಯಕ್ಷ ಪ್ರಥಮೇಶ್ ಮಿಶ್ರಾರ ಕೈ ಕುಲುಕಿ ಧನ್ಯವಾದ ಹೇಳಿ ಬಂದರು. ಇದು ನೋಡುಗರಲ್ಲಿ ಅಚ್ಚರಿ ಹಾಗೂ ಕುತೂಹಲ ಮೂಡಿಸಿತು.
ಇನ್ನು ಆರ್‌ಸಿಬಿ ಫ್ರಾಂಚೈಸಿಯು ಅನಾಯಾಸವಾಗಿ ವಿಲ್ ಜ್ಯಾಕ್ಸ್ ಅವರನ್ನು ಕೈಬಿಟ್ಟಿದ್ದು ಬೆಂಗಳೂರು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲೂ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯ ಮೊದಲಾರ್ಧದಲ್ಲಿ ಆರ್‌ಸಿಬಿ ಫ್ರಾಂಚೈಸಿಯು ದಯನೀಯ ವೈಫಲ್ಯ ಅನುಭವಿಸಿತ್ತು. ಆಗ ವಿಲ್ ಜ್ಯಾಕ್ಸ್ ಬೆಂಚ್ ಕಾಯಿಸಲಷ್ಟೇ ಸೀಮಿತವಾಗಿದ್ದರು. ಆದರೆ ದ್ವಿತಿಯಾರ್ಧದಲ್ಲಿ ವಿಲ್ ಜ್ಯಾಕ್ಸ್ ಆರ್‌ಸಿಬಿ ಆಡುವ ಹನ್ನೊಂದರ ಬಳಗ ಕೂಡಿಕೊಳ್ಳುತ್ತಿದ್ದಂತೆಯೇ ಅಮೋಘ ಪ್ರದರ್ಶನ ತೋರುವಲ್ಲಿ ಯಶಸ್ವಿಯಾಗಿತ್ತು. ಅದರಲ್ಲೂ ಗುಜರಾತ್ ಟೈಟಾನ್ಸ್ ಎದುರಿನ ಪಂದ್ಯದಲ್ಲಿ ವಿಲ್ ಜ್ಯಾಕ್ಸ್ ಸಿಡಿಸಿದ ವಿಸ್ಪೋಟಕ ಶತಕ ಬೆಂಗಳೂರಿನ ಅಭಿಮಾನಿಗಳ ಮನಸ್ಸಿನಲ್ಲಿ ಇನ್ನೂ ಅಚ್ಚಳಿಯದೇ ಉಳಿದಿದೆ. ಹೀಗಿದ್ದೂ ಕೇವಲ 5.25 ಕೋಟಿ ರುಪಾಯಿಗೆ ವಿಲ್ ಜ್ಯಾಕ್ಸ್ ಅವರನ್ನು ಕೈಬಿಟ್ಟಿದ್ದು, ಆರ್‌ಸಿಬಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
