ಆರ್‌ಸಿಬಿ ತಂಡಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ಇಂಗ್ಲೆಂಡ್ ಮೂಲದ ಸ್ಟಾರ್ ಆಲ್ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಸ್ಪೋಟಕ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸಾಕಷ್ಟು ಅಳೆದುತೂಗಿ 2025ರ ಐಪಿಎಲ್ ಟೂರ್ನಿಗೆ ಸಮತೋಲಿತ ತಂಡವನ್ನು ಕಟ್ಟಿದೆ. ಐಪಿಎಲ್ ಮೆಗಾ ಹರಾಜಿಗೂ ಮುನ್ನ ಹಲವು ಟಿ20 ಸ್ಪೆಷಲಿಸ್ಟ್ ಆಟಗಾರರನ್ನು ಕೈಬಿಟ್ಟಿದ್ದ ಆರ್‌ಸಿಬಿ, ಇದೀಗ ಹರಾಜಿನಲ್ಲಿ ಹೊಸ ಹುರುಪಿನಲ್ಲಿ ಬಲಿಷ್ಠ ಟಿ20 ತಂಡವನ್ನು ಕಟ್ಟುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿಟ್ಟಿದೆ. ಹೀಗಿರುವಾಗಲೇ ಆರ್‌ಸಿಬಿ ತಂಡಕ್ಕೆ ಸೇರ್ಪಡೆಯಾದ ಬೆನ್ನಲ್ಲೇ ಇಂಗ್ಲೆಂಡ್ ಮೂಲದ ಬ್ಯಾಟರ್ ಕೇವಲ 15 ಎಸೆತಗಳಲ್ಲಿ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ.
ಹೌದು, ಆರ್‌ಸಿಬಿ ತಂಡಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ಲಿಯಾಮ್ ಲಿವಿಂಗ್‌ಸ್ಟೋನ್, ಅಬುದಾಬಿ ಟಿ10 ಲೀಗ್ ಟೂರ್ನಿಯಲ್ಲಿ ವಿಸ್ಪೋಟಕ ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದಾರೆ. ಇಂಗ್ಲೆಂಡ್ ಮೂಲದ ಬ್ಯಾಟಿಂಗ್ ಆಲ್ರೌಂಡರ್ ಆಗಿರುವ ಲಿಯಾಮ್ ಲಿವಿಂಗ್‌ಸ್ಟೋನ್ ಸದ್ಯ ಅಬುದಾಬಿ ಟಿ10 ಲೀಗ್‌ನಲ್ಲಿ ಪಾಲ್ಗೊಂಡಿದ್ದಾರೆ.
RCB ಸೋಲಿಸಿ ಕಪ್ ಗೆದ್ದ ನಾಯಕ ಅನ್‌ಸೋಲ್ಡ್; ಈತ 3 ಆರೆಂಜ್ ಕ್ಯಾಪ್ ವಿನ್ನರ್!
2025ರ ಐಪಿಎಲ್ ಮೆಗಾ ಹರಾಜಿನ ಮೊದಲ ದಿನವೇ ಇಂಗ್ಲೆಂಡ್ ಆಲ್ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಬರೋಬ್ಬರಿ 8.75 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ಸ್ಪೋಟಕ ಬಲಗೈ ಬ್ಯಾಟರ್ ಆಗಿರುವ ಲಿವಿಂಗ್‌ಸ್ಟೋನ್, ಎಡಗೈ ಹಾಗೂ ಬಲಗೈನಲ್ಲಿ ಸ್ಪಿನ್ ಬೌಲಿಂಗ್ ಮಾಡುವ ಅಪರೂಪದ ಆಲ್ರೌಂಡರ್ ಎನಿಸಿಕೊಂಡಿದ್ದಾರೆ.
ಸ್ಟಾರ್ ಆಟಗಾರನನ್ನು ಕೈಬಿಟ್ಟು ಅಭಿಮಾನಿಗಳ ಹೃದಯ ಒಡೆದ ಆರ್‌ಸಿಬಿ; ಈ ಸಲ ಕಪ್ ನಮ್ದಲ್ವಾ?
ಇದೀಗ ಅಬುದಾಬಿ ಟಿ10 ಲೀಗ್‌ನ 18ನೇ ಪಂದ್ಯದಲ್ಲಿ ಡೆಲ್ಲಿ ಬುಲ್ಸ್ ಹಾಗೂ ಬಾಂಗ್ಲಾ ಟೈಗರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಬುಲ್ಸ್ ತಂಡವು ನಿಕಿಲ್ ಚೌಧರಿ(47 ರನ್) ಸ್ಪೋಟಕ ಬ್ಯಾಟಿಂಗ್ ನೆರವಿನಿಂದ 6 ವಿಕೆಟ್ ಕಳೆದುಕೊಂಡು 123 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ಇನ್ನು ಗುರಿ ಬೆನ್ನತ್ತಿದ ಬಾಂಗ್ಲಾ ಟೈಗರ್ಸ್ ತಂಡವು ಇನ್ನೂ ಎರಡು ಎಸೆತ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು. ಬಾಂಗ್ಲಾ ಟೈಗರ್ಸ್ ಪರ ಸ್ಪೋಟಕ ಬ್ಯಾಟಿಂಗ್ ನಡೆಸಿದ ಲಿವಿಂಗ್‌ಸ್ಟೋನ್ ಕೇವಲ 15 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 5 ಮುಗಿಲೆತ್ತರದ ಸಿಕ್ಸರ್ ನೆರವಿನಿಂದ ಅಜೇಯ 50 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
