ಮುಂಬೈ ಇಂಡಿಯನ್ಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ 4 ವಿಕೆಟ್‌ಗಳ ಜಯ ಸಾಧಿಸಿ, ಪ್ಲೇ-ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಮನೀಶ್ ಪಾಂಡೆ ಮತ್ತು ರೋವ್ಮನ್ ಪೊವೆಲ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಕೋಲ್ಕತಾ 148 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತು.
ಕೋಲ್ಕತಾ: ಮುಂಬೈ ಇಂಡಿಯನ್ಸ್ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ 4 ವಿಕೆಟ್ ಅಂತರದಲ್ಲಿ ಗೆಲುವು ಸಾಧಿಸಿದ ಕೋಲ್ಕತಾ ನೈಟ್ ರೈಡರ್ಸ್ ತಂಡ, ಈ ಬಾರಿ ಐಪಿಎಲ್‌ನಲ್ಲಿ ಪ್ಲೇ-ಆಫ್ ಪ್ರವೇಶಿಸುವ ಕನಸನ್ನು ಜೀವಂತವಾಗಿಟ್ಟುಕೊಂಡಿದೆ. ತಂಡ ಆಡಿರುವ 13 ಪಂದ್ಯಗಳಲ್ಲಿ 6 ಗೆಲುವಿನೊಂದಿಗೆ 13 ಅಂಕ ಸಂಪಾದಿಸಿದ್ದು, ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದೆ. ಮತ್ತೊಂದೆಡೆ ಮುಂಬೈ ಆಡಿರುವ 13 ಪಂದ್ಯಗಳಲ್ಲಿ 9ನೇ ಸೋಲನುಭವಿಸಿತು.

ಮೊದಲು ಬ್ಯಾಟ್ ಮಾಡಿದ ಮುಂಬೈ 8 ವಿಕೆಟ್ ನಷ್ಟದಲ್ಲಿ 147 ರನ್ ಗಳಿಸಿತು. ತೀವ್ರ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ತಂಡ 18 ಓವರ್‌ನಲ್ಲಿ 115 ರನ್ ಗಳಿಸಿತ್ತು. ಕೊನೆ 2 ಓವರ್‌ನಲ್ಲಿ ಕಾರ್ಬಿನ್ ಬಾಶ್(ಔಟಾಗದೆ 32) ಅಬ್ಬರಿಸಿದ ಸ್ಪರ್ಧಾತ್ಮಕ ಮೊತ್ತ ಕಲೆಹಾಕಲು ನೆರವಾದರು. ಉಳಿದಂತೆ ಹಾರ್ದಿಕ್ 26, ತಿಲಕ್ 20 ರನ್ ಕೊಡುಗೆ ನೀಡಿದರು.
ಮನೀಶ್, ಪೊವೆಲ್ ಆಸರೆ:
ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ ಕೋಲ್ಕತಾಗೆ ಮನೀಶ್ ಪಾಂಡೆ, ರೋವ್ಮನ್ ಪೊವೆಲ್ ಆಸರೆಯಾದರು. ಈ ಜೋಡಿ 4ನೇ ವಿಕೆಟ್‌ಗೆ 64 ರನ್ ಸೇರಿಸಿತು. ಪೊವೆಲ್ 30 ಎಸೆತಕ್ಕೆ 40, ಮನೀಶ್ 33 ಎಸೆತಕ್ಕೆ 45 ರನ್ ಗಳಿಸಿದರು. ತಂಡ 18.5 ಓವರ್‌ಗಳಲ್ಲಿ ಗೆಲುವಿನ ದಡ ಸೇರಿತು. ಕಾರ್ಬಿನ್ 3 ವಿಕೆಟ್ ಕಿತ್ತರು.
ಸ್ಕೋರ್: ಮುಂಬೈ 20 ಓವರಲ್ಲಿ 147/8 (ಕಾರ್ಬಿನ್ ಔಟಾಗದೆ 32, ಹಾರ್ದಿಕ್ 26, ಗ್ರೀನ್ 2-23), ಕೋಲ್ಕತಾ 18.5 ಓವರಲ್ಲಿ 148/6 (ಮನೀಶ್ 45, ಪೊವೆಲ್ 40, ಕಾರ್ಬಿನ್ 3-30)
ಪಂದ್ಯಶ್ರೇಷ್ಠ: ಮನೀಶ್ ಪಾಂಡೆ
42 ಪಂದ್ಯದಲ್ಲಿ ಯಶಸ್ವಿ ಚೇಸ್: ಹೊಸ ದಾಖಲೆ
ಈ ಬಾರಿ ಐಪಿಎಲ್‌ನಲ್ಲಿ ನಡೆದಿರುವ 65 ಪಂದ್ಯಗಳ ಪೈಕಿ 42ರಲ್ಲಿ ಚೇಸಿಂಗ್ ತಂಡಗಳು ಗೆಲುವು ಸಾಧಿಸಿದೆ. ಐಪಿಎಲ್ ಆವೃತ್ತಿಯೊಂದರಲ್ಲಿ ಇದು ಗರಿಷ್ಠ. 2026ರ ಐಪಿಎಲ್‌ನಲ್ಲಿ 60 ಪಂದ್ಯಗಳ ಪೈಕಿ 41ರಲ್ಲಿ ತಂಡಗಳು ಯಶಸ್ವಿಯಾಗಿ ರನ್ ಬೆನ್ನತ್ತಿ ಗೆದ್ದಿದ್ದವು.
ಅಗ್ರ-2 ಸ್ಥಾನದ ಮೇಲೆ ಕಣ್ಣಿಟ್ಟ ಗುಜರಾತ್‌ಗೆ ಚೆನ್ನೈ ಸವಾಲು
ಅಹಮದಾಬಾದ್: ಈ ಬಾರಿ ಐಪಿಎಲ್‌ನಲ್ಲಿ ಪ್ಲೇ-ಆಫ್ ಸ್ಥಾನ ಖಚಿತಪಡಿಸಿಕೊಂಡಿರುವ ಮಾಜಿ ಚಾಂಪಿಯನ್ ಗುಜರಾತ್ ತಂಡ ಗುರುವಾರ ಚೆನ್ನೈ ವಿರುದ್ಧ ಆಡಲಿದೆ. ಅಂಕಪಟ್ಟಿಯಲ್ಲಿ ಅಗ್ರ-2 ಸ್ಥಾನ ಪಡೆದು ಕ್ವಾಲಿಫೈಯರ್-1ರಲ್ಲಿ ಆಡುವ ಗುರಿ ಇಟ್ಟುಕೊಂಡಿರುವ ಗುಜರಾತ್‌ಗೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಿದೆ.
ಗುಜರಾತ್ ಆಡಿರುವ 13 ಪಂದ್ಯಗಳಲ್ಲಿ 16 ಅಂಕ ಗಳಿಸಿದೆ. ಆರ್‌ಸಿಬಿ 18, ಹೈದರಾಬಾದ್ 16 ಅಂಕ ಹೊಂದಿದೆ. ಚೆನ್ನೈ ವಿರುದ್ಧ ಗುಜರಾತ್ ಗೆದ್ದು, ಆರ್‌ಸಿಬಿ ವಿರುದ್ಧ ಹೈದರಾಬಾದ್ ಗೆದ್ದರೆ ಈ ಮೂರು ತಂಡಗಳ ಅಂಕ ತಲಾ 18 ಆಗಲಿದೆ. ಆಗ ನೆಟ್ ರನ್‌ರೇಟ್ ಆಧಾರದಲ್ಲಿ ಅಗ್ರ-2 ಸ್ಥಾನಗಳನ್ನು ನಿರ್ಧರಿಸಲಾಗುತ್ತದೆ. ಹೀಗಾಗಿ ಚೆನ್ನೈ ವಿರುದ್ಧ ದೊಡ್ಡ ಗೆಲುವಿನೊಂದಿಗೆ ಲೀಗ್ ಹಂತಕ್ಕೆ ವಿದಾಯ ಹೇಳುವುದು ಗುಜರಾತ್ ಗುರಿ.
ಮತ್ತೊಂದೆಡೆ ಚೆನ್ನೈಗಿದು ಮಾಡು ಇಲ್ಲವೇ ಮಡಿ ಪಂದ್ಯ. 13 ಪಂದ್ಯಗಳಲ್ಲಿ 12 ಅಂಕ ಗಳಿಸಿರುವ ತಂಡ ಈ ಪಂದ್ಯದಲ್ಲಿ ಗೆದ್ದರಷ್ಟೇ ಪ್ಲೇ-ಆಫ್ ರೇಸ್‌ನಲ್ಲಿ ಉಳಿದುಕೊಳ್ಳಲಿದೆ. ಒಂದು ವೇಳೆ ಸೋತರೆ ತಂಡ ರೇಸ್‌ನಿಂದ ಅಧಿಕೃತವಾಗಿ ಹೊರಬೀಳಲಿದೆ. ಇತ್ತೀಚೆಗೆ ಚೆನ್ನೈನಲ್ಲಿ ನಡೆದಿದ್ದ ಉಭಯ ತಂಡಗಳ ನಡುವಿನ ಮುಖಾಮುಖಿಯಲ್ಲಿ ಗುಜರಾತ್ 8 ವಿಕೆಟ್‌ನಿಂದ ಗೆದ್ದಿತ್ತು.
ಪಂದ್ಯ ಆರಂಭ: ಸಂಜೆ 7.30ಕ್ಕೆ

