ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ ರಾಯಲ್ಸ್, ಲಖನೌ ವಿರುದ್ಧ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ತಂಡವು ಪ್ಲೇ-ಆಫ್‌ಗೆ ಹತ್ತಿರವಾಗಿದ್ದು, ಮುಂಬೈ ವಿರುದ್ಧದ ಮುಂದಿನ ಪಂದ್ಯ ಗೆದ್ದರೆ ಇತರ ನಾಲ್ಕು ತಂಡಗಳು ಸ್ಪರ್ಧೆಯಿಂದ ಹೊರಬೀಳಲಿವೆ.

ಜೈಪುರ: ವೈಭವ್‌ ಸೂರ್ಯವಂಶಿ ಸ್ಫೋಟಕ ಆಟದ ನೆರವಿನಿಂದ ರಾಜಸ್ಥಾನ ರಾಯಲ್ಸ್‌ ತಂಡ ಲಖನೌ ವಿರುದ್ಧ 7 ವಿಕೆಟ್‌ ಭರ್ಜರಿ ಗೆಲುವು ಸಾಧಿಸಿದ್ದು, 13 ಪಂದ್ಯಗಳಿಂದ 14 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದೆ. ಇದರೊಂದಿಗೆ ತಂಡ ಪ್ಲೇ-ಆಫ್‌ಗೆ ಮತ್ತಷ್ಟು ಹತ್ತಿರವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೊದಲು ಬ್ಯಾಟ್‌ ಮಾಡಿದ ಲಖನೌ 5 ವಿಕೆಟ್‌ಗೆ 220 ರನ್ ಕಲೆಹಾಕಿತು. 57 ಎಸೆತಕ್ಕೆ 96 ರನ್‌ ಸಿಡಿಸಿದ ಮಿಚೆಲ್‌ ಮಾರ್ಷ್‌ ಕೊನೆ ಓವರ್‌ನಲ್ಲಿ ರನ್‌ಔಟ್‌ ಆಗಿ ಶತಕ ವಂಚಿತರಾದರು. ಜೋಶ್‌ ಇಂಗ್ಲಿಸ್‌ 29 ಎಸೆತಕ್ಕೆ 60, ರಿಷಭ್‌ ಪಂತ್‌ 35 ರನ್‌ ಗಳಿಸಿದರು.

ದೊಡ್ಡ ಗುರಿಯನ್ನು ರಾಯಲ್ಸ್‌ 19.1 ಓವರ್‌ಗಳಲ್ಲೇ ಬೆನ್ನತ್ತಿ ಗೆಲುವು ತನ್ನದಾಗಿಸಿಕೊಂಡಿತು. ಯಶಸ್ವಿ ಜೈಸ್ವಾಲ್‌(23 ಎಸೆತಕ್ಕೆ 43) ನಿರ್ಗಮನದ ಬಳಿಕ ಅಬ್ಬರಿಸಿದ ವೈಭವ್‌ 38 ಎಸೆತಗಳಲ್ಲೇ 7 ಬೌಂಡರಿ, 10 ಸಿಕ್ಸರ್‌ನೊಂದಿಗೆ 93 ರನ್‌ ಸಿಡಿಸಿ ಔಟಾದರು. ಬಳಿಕ ಧ್ರುವ್‌ ಜುರೆಲ್‌(ಔಟಾಗದೆ 53) ತಂಡವನ್ನು ಗೆಲ್ಲಿಸಿದರು.

ಸ್ಕೋರ್‌: ಲಖನೌ 20 ಓವರಲ್ಲಿ 220/5 (ಮಾರ್ಷ್‌ 96, ಇಂಗ್ಲಿಸ್‌ 60, ಯಶ್‌ರಾಜ್‌ 2-35), ರಾಜಸ್ಥಾನ 19.1 ಓವರಲ್ಲಿ 225/3 (ವೈಭವ್‌ 93, ಧ್ರುವ್‌ ಔಟಾಗದೆ 53, ಜೈಸ್ವಾಲ್‌ 43, ಮೊಹ್ಸಿನ್‌ 1-31),

--

ಮುಂಬೈ ವಿರುದ್ಧ ರಾಯಲ್ಸ್‌ ಗೆದ್ರೆ ಇತರ 4 ತಂಡ ಔಟ್!

ರಾಯಲ್ಸ್‌ ಈಗ 14 ಅಂಕ ಹೊಂದಿದ್ದು, ಭಾನುವಾರ ಮುಂಬೈ ವಿರುದ್ಧ ಕೊನೆ ಪಂದ್ಯವಾಡಲಿದೆ. ಅದರಲ್ಲಿ ರಾಜಸ್ಥಾನ ಗೆದ್ದರೆ ಪ್ಲೇ-ಆಫ್‌ ಪ್ರವೇಶಿಸಲಿದ್ದು, ಇತರ 4 ತಂಡಗಳಾದ ಪಂಜಾಬ್‌, ಚೆನ್ನೈ, ಡೆಲ್ಲಿ, ಕೋಲ್ಕತಾ ಹೊರಬೀಳಲಿವೆ. ಈಗ ಪ್ಲೇ-ಆಫ್‌ಗೇರಿರುವ ಆರ್‌ಸಿಬಿ, ಗುಜರಾತ್‌, ಸನ್‌ರೈಸರ್ಸ್ ಹೊರತಾಗಿ 16 ಅಂಕ ಗಳಿಸುವ ಅವಕಾಶವಿರುವ ಏಕೈಕ ತಂಡ ರಾಜಸ್ಥಾನ. ಉಳಿದಂತೆ ಪಂಜಾಬ್‌, ಕೆಕೆಆರ್‌ಗೆ ಗರಿಷ್ಠ 15 ಅಂಕ ಗಳಿಸಬಹುದು.

ಮೊದಲ ಸಲ ಅಗ್ರ-4ರಿಂದ ಹೊರಬಿದ್ದ ಪಂಜಾಬ್‌ ಟೀಂ!

ಪಂಜಾಬ್‌ ಈ ಬಾರಿ ಐಪಿಎಲ್‌ ಆರಂಭದಿಂದಲೂ ಅಂಕಪಟ್ಟಿಯಲ್ಲಿ ಅಗ್ರ-4ರಲ್ಲಿತ್ತು. ಆದರೆ ಮಂಗಳವಾರ ರಾಜಸ್ಥಾನ ಗೆಲ್ಲುವುದರೊಂದಿಗೆ ಪಂಜಾಬ್‌ ತಂಡ ಮೊದಲ ಬಾರಿ ಅಗ್ರ-4ರಿಂದ ಹೊರಗುಳಿಯಿತು. ತಂಡ ಏ.25ರ ಬಳಿಕ ಒಂದೂ ಪಂದ್ಯ ಗೆದ್ದಿಲ್ಲ.