Asianet Suvarna News Asianet Suvarna News

ಐಪಿಎಲ್‌ ಸ್ಟಾರ್‌ಗಳನ್ನು ಕೆಡವಿ ಟಿ20 ಸರಣಿ ಗೆದ್ದ ವಿಂಡೀಸ್‌!

ಕೊನೆ ಟಿ20 ಪಂದ್ಯದಲ್ಲಿ ಭಾರತಕ್ಕೆ 8 ವಿಕೆಟ್‌ ಹೀನಾಯ ಸೋಲು
5 ಪಂದ್ಯಗಳ ಸರಣಿ 3-2ರಲ್ಲಿ ವಿಂಡೀಸ್‌ ಮಡಿಲಿಗೆ
2016ರ ಬಳಿಕ ಭಾರತ ವಿರುದ್ಧ ವಿಂಡೀಸ್‌ಗೆ ಸರಣಿ
 

West Indies break 6 year drought with India series triumph kvn
Author
First Published Aug 14, 2023, 9:36 AM IST

ಲಾಡರ್‌ಹಿಲ್‌(ಅ​ಮೆ​ರಿಕ): ವೆಸ್ಟ್‌ಇಂಡೀಸ್‌ನ ಸ್ಫೋಟಕ ಹಾಗೂ ಅನುಭವಿ ಬ್ಯಾಟರ್‌ಗಳ ನಡುವೆ ಐಪಿಎಲ್‌ ಸ್ಟಾರ್‌ಗಳ ಆಟ ನಡೆಯಲಿಲ್ಲ. ಸೂರ್ಯಕುಮಾರ್‌ ಹೊರತುಪಡಿಸಿ ಇತರ ಬ್ಯಾಟರ್‌ಗಳ ವೈಫಲ್ಯ ಹಾಗೂ ಮೊನಚು ಕಳೆದುಕೊಂಡ ಬೌಲಿಂಗ್‌ ದಾಳಿಯಿಂದಾಗಿ ವಿಂಡೀಸ್‌ ವಿರುದ್ಧದ ಕೊನೆ ಟಿ20 ಪಂದ್ಯದಲ್ಲಿ ಭಾರತ 8 ವಿಕೆಟ್‌ ಸೋಲನಭವಿಸಿತು. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ವಿಂಡೀಸ್‌ 3-2ರಲ್ಲಿ ಜಯಭೇರಿ ಬಾರಿಸಿ, 2016ರ ಬಳಿಕ ಭಾರತದ ವಿರುದ್ಧ ಟಿ20 ಸರಣಿ ಗೆದ್ದ ಸಾಧನೆ ಮಾಡಿತು.

ಇದೇ ಕ್ರೀಡಾಂಗಣದಲ್ಲಿ ಶನಿವಾರ ನಡೆದಿದ್ದ 4ನೇ ಪಂದ್ಯದಲ್ಲಿ ಭಾರತ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿತ್ತು. ಆದರೆ ಭಾನುವಾರ ಮೊದಲು ಬ್ಯಾಟ್‌ ಆಯ್ಕೆ ಮಾಡಿ ಕೈಸುಟ್ಟುಕೊಂಡ ಭಾರತ 9 ವಿಕೆಟ್‌ಗೆ 165 ರನ್‌ ಗಳಿಸಿತು. ಚೇಸಿಂಗ್‌ಗೂ ಮಳೆ ಅಡ್ಡಿಪಡಿಸುವ ಖಾತರಿ ಇದ್ದ ಕಾರಣ ಆರಂಭದಲ್ಲೇ ಅಬ್ಬರಿಸತೊಡಗಿದ ವಿಂಡೀಸ್‌ 18 ಓವರ್‌ಗಳಲ್ಲಿ ಪಂದ್ಯ ತನ್ನದಾಗಿಸಿಕೊಂಡಿತು. ಭಾರತೀಯ ಬೌಲರ್‌ಗಳನ್ನು ಮನಸೋಇಚ್ಛೆ ದಂಡಿಸಿದ ಬ್ರ್ಯಾಂಡನ್‌ ಕಿಂಗ್‌ ಹಾಗೂ ಪೂರನ್‌ 2ನೇ ವಿಕೆಟ್‌ಗೆ 107 ರನ್‌ ಜೊತೆಯಾಟವಾಡಿದರು. ಕಿಂಗ್‌ 55 ಎಸೆತಗಳಲ್ಲಿ 85 ರನ್‌ ಚಚ್ಚಿ ಔಟಾಗದೆ ಉಳಿದರೆ, ನಿಕೋಲಸ್‌ ಪೂರನ್‌ 35 ಎಸೆತಗಳಲ್ಲಿ ಔಟಾಗದೆ 47 ರನ್‌ ಗಳಿಸಿದರು. ತಿಲಕ್‌ ವರ್ಮಾ, ಅಶ್‌ರ್‍ದೀಪ್‌ ಸಿಂಗ್‌ ತಲಾ 1 ವಿಕೆಟ್‌ ಪಡೆದರು.

IND vs WI ಸರಣಿ ಯಾರಿಗೆ? ಅಂತಿಮ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ!

ಸೂರ್ಯ ಅಬ್ಬರ: ಇದಕ್ಕೂ ಮೊದಲು 4ನೇ ಪಂದ್ಯದಲ್ಲಿ ಮಿಂಚಿದ್ದ ಯಶಸ್ವಿ ಜೈಸ್ವಾಲ್‌(05), ಶುಭ್‌ಮನ್‌ ಗಿಲ್‌(09) ಈ ಬಾರಿ ಎರಡಂಕಿ ಮೊತ್ತ ಗಳಿಸಲಿಲ್ಲ. ತಿಲಕ್‌ ವರ್ಮಾ(27) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಸಂಜು ಸ್ಯಾಮ್ಸನ್‌(13), ಹಾರ್ದಿಕ್‌(14),ಅಕ್ಷರ್‌ ಪಟೇಲ್‌(13) ಮತ್ತೆ ವೈಫಲ್ಯ ಕಂಡರು. ಆದರೆ ಸೂರ್ಯ ಏಕಾಂಗಿ ಹೋರಾಟ ನಡೆಸಿದರು. 45 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್‌ನೊಂದಿಗೆ 61 ರನ್‌ ಸಿಡಿಸಿ ತಂಡದ ಮೊತ್ತ 160ರ ಗಡಿ ದಾಟಲು ನೆರವಾದರು.

ಸ್ಕೋರ್‌:
ಭಾರತ 20 ಓವ​ರಲ್ಲಿ 165/9 (ಸೂರ‍್ಯ 61, ತಿಲಕ್‌ 27, ಶೆಫರ್ಡ್‌ 4-31) 
ವಿಂಡೀಸ್‌ 18 ಓವರ್‌ಗಳಲ್ಲಿ 171/2 (ಕಿಂಗ್‌ 85*, ಪೂರನ್‌ 47, ತಿಲಕ್‌ 1-17)

ಪಂದ್ಯಶ್ರೇಷ್ಠ: ಬ್ರ್ಯಡನ್‌ ಕಿಂಗ್‌

ಟರ್ನಿಂಗ್‌ ಪಾಯಿಂಟ್‌

ಮಧ್ಯಮ ಕ್ರಮಾಂಕದ ವೈಫಲ್ಯದಿಂದಾಗಿ ಭಾರತ ನಿರೀಕ್ಷೆಗಿಂತ ಕಡಿಮೆ ಮೊತ್ತ ಕಲೆ ಹಾಕಿತು. ಬಳಿಕ ಕಿಂಗ್‌ ಹಾಗೂ ಪೂರನ್‌ರನ್ನು ಕ್ರೀಸ್‌ನಲ್ಲಿ ನೆಲೆಯೂರಲು ಬಿಟ್ಟಿದ್ದು ತಂಡಕ್ಕೆ ಮುಳುವಾಯಿತು. ಪವರ್‌-ಪ್ಲೇನಲ್ಲೇ 61 ರನ್‌ ಸಿಡಿಸಿ ವಿಂಡೀಸ್‌ ಪಂದ್ಯದಲ್ಲಿ ಹಿಡಿತ ಸಾಧಿಸಿತು.

ಸತತ 11 ಟಿ20 ಸರಣಿ ಜಯದ ಓಟಕ್ಕೆ ಬ್ರೇಕ್‌

ಸತತ 12ನೇ ದ್ವಿಪ​ಕ್ಷೀಯ ಟಿ20 ಸರಣಿ ಗೆಲ್ಲುವ ಭಾರತದ ಕನಸಿಗೆ ವಿಂಡೀಸ್‌ ಬ್ರೇಕ್‌ ಹಾಕಿದೆ. 2021ರಲ್ಲಿ ಶ್ರೀಲಂಕಾ ವಿರುದ್ಧ ಭಾರತ ಸರಣಿ ಸೋತ ಬಳಿಕ ಈವರೆಗೆ 12 ಸರಣಿಗಳಲ್ಲಿ ಅಜೇಯವಾಗಿತ್ತು. 11 ಸರಣಿಗಳಲ್ಲಿ ಗೆದ್ದಿದ್ದರೆ, ಕಳೆದ ವರ್ಷ ದ.ಆಫ್ರಿಕಾ ವಿರುದ್ಧದ ಸರಣಿ 2-2ರಿಂದ ಸಮಬಲಗೊಂಡಿತ್ತು. ಇದರೊಂದಿಗೆ ಸತತವಾಗಿ ಅತಿಹೆಚ್ಚು ದ್ವಿಪಕ್ಷೀಯ ಟಿ20 ಸರಣಿ ಗೆದ್ದ ಸಾಧನೆ ಮಾಡಿತ್ತು.

01ನೇ ಬಾರಿ: ಭಾರತ ಇದೇ ಮೊದಲ ಬಾರಿ ದ್ವಿಪಕ್ಷೀಯ ಟಿ20 ಸರಣಿಯಲ್ಲಿ 3 ಪಂದ್ಯಗಳಲ್ಲಿ ಸೋಲನುಭವಿಸಿತು.
 

Follow Us:
Download App:
  • android
  • ios