ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಕಾರ್ ಯೂನಿಸ್ ತಮ್ಮ ಇಂಡೋ-ಪಾಕ್ ಡ್ರೀಮ್ XIನಲ್ಲಿ ಬಹುತೇಕ ಭಾರತೀಯ ಆಟಗಾರರನ್ನೇ ಆಯ್ಕೆ ಮಾಡಿದ್ದು, ಸಯೀದ್ ಅನ್ವರ್ ಮಾತ್ರ ಜಾಗ ಪಡೆದ ಏಕೈಕ ಪಾಕಿಸ್ತಾನಿ ಆಟಗಾರರಾಗಿದ್ದಾರೆ.

ಬೆಂಗಳೂರು (ಅ.30): ಯೂಟ್ಯೂಬರ್‌ ಶುಭಂಕರ್ ಮಿಶ್ರಾ ಅವರ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ್ದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಾಗೂ ದಿಗ್ಗಜ ವಕಾರ್ ಯೂನಿಸ್ (Waqar Younis), ಭಾರತ ಮತ್ತು ಪಾಕಿಸ್ತಾನದ ಆಟಗಾರರ ನಡುವಿನ Rapid-Fire ಸ್ಪರ್ಧೆಯಲ್ಲಿ ಅತ್ಯಂತ ರೋಚಕ ಹಾಗೂ ವಿಚಿತ್ರ ಆಯ್ಕೆ ಮಾಡಿದ್ದಾರೆ. ತಮ್ಮ ಸುದೀರ್ಘ ಕ್ರಿಕೆಟ್ ವೃತ್ತಿಜೀವನದಲ್ಲಿ 87 ಟೆಸ್ಟ್ (373 ವಿಕೆಟ್) ಹಾಗೂ 262 ಏಕದಿನ (416 ವಿಕೆಟ್) ಪಂದ್ಯಗಳನ್ನಾಡಿ, ಭಾರತದ ವಿರುದ್ಧದ ಭಾರಿ ಹೈ-ವೋಲ್ಟೇಜ್ ಪಂದ್ಯಗಳ ಅನುಭವ ಹೊಂದಿರುವ ವಕಾರ್, ತಮ್ಮದೇ ದೇಶದ ದಿಗ್ಗಜ ಆಟಗಾರರನ್ನು ಬದಿಗೆ ಸರಿಸಿ ಭಾರತೀಯ ಆಟಗಾರರಿಗೆ ಜೈ ಎಂದಿದ್ದಾರೆ.

ವಕಾರ್ ಯೂನಿಸ್ ಅವರ 'ಇಂಡಿಯಾ-ಪಾಕ್ XI' ಆಯ್ಕೆ

ರಾಪಿಡ್‌ ಸುತ್ತಿನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಇಬ್ಬರು ಆಟಗಾರರಲ್ಲಿ ಒಬ್ಬರನ್ನು ಪ್ಲೇಯಿಂಗ್‌ ಇಲೆವೆನ್‌ಗೆ ಆಯ್ಕೆ ಮಾಡಲು ಕೇಳಿದಾಗ, ವಕಾರ್ ನೀಡಿದ ಸರಣಿ ಉತ್ತರಗಳು ಹೀಗಿವೆ. ಅಲ್ಲದೆ, ಯಾರ ಬದಲು ಇವರನ್ನು ಆಯ್ಕೆ ಮಾಡುತ್ತಿದ್ದೇನೆ ಎಂದೂ ಹೇಳಿದ್ದಾರೆ. ಅವರ ಇಂಡಿಯಾ-ಪಾಕಿಸ್ತಾನ ಜಂಟಿ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಸಚಿನ್ ತೆಂಡುಲ್ಕರ್ (ಇಂಜಮಾಮ್ ಉಲ್ ಹಕ್ ಬದಲು), ವಿರಾಟ್ ಕೊಹ್ಲಿ (ಬಾಬರ್ ಅಜಮ್ ಬದಲು), ಜಸ್ಪ್ರೀತ್ ಬುಮ್ರಾ (ಶಾಹೀನ್ ಶಾ ಅಫ್ರಿದಿ ಬದಲು), ರಾಹುಲ್ ದ್ರಾವಿಡ್ (ಯೂನಿಸ್ ಖಾನ್ ಬದಲು), ಎಂ.ಎಸ್. ಧೋನಿ (ಜಾವೇದ್ ಮಿಯಾಂದಾದ್ ಬದಲು), ರೋಹಿತ್ ಶರ್ಮಾ (ಫಖರ್ ಜಮಾನ್ ಬದಲು), ವಿ.ವಿ.ಎಸ್. ಲಕ್ಷ್ಮಣ್ (ಮಿಸ್ಬಾ ಉಲ್ ಹಕ್ ಬದಲು) ಹಾಗೂ ಮೊಹಮ್ಮದ್ ಶಮಿ (ಮೊಹಮ್ಮದ್ ಅಮೀರ್ ಬದಲು) ಅವರನ್ನು ಆಯ್ಕೆ ಮಾಡಿದ್ದಾರೆ.

ಪಾಕಿಸ್ತಾನದ ಏಕೈಕ ಆಯ್ಕೆ

ವೀರೇಂದ್ರ ಸೆಹ್ವಾಗ್ ಮತ್ತು ಪಾಕಿಸ್ತಾನದ ಸಯೀದ್ ಅನ್ವರ್ (Saeed Anwar) ನಡುವೆ ಆಯ್ಕೆ ಮಾಡಲು ಕೇಳಿದಾಗ ಮಾತ್ರ ವಕಾರ್, ಸಯೀದ್ ಅನ್ವರ್ ಅವರನ್ನು ಆಯ್ಕೆ ಮಾಡಿದರು. ಹೀಗಾಗಿ ಅವರ ಈ ಸಂಯೋಜಿತ 'ಇಂಡಿಯಾ-ಪಾಕ್ ಡ್ರೀಮ್ XI' ನಲ್ಲಿ ಜಾಗ ಪಡೆದ ಏಕೈಕ ಪಾಕಿಸ್ತಾನಿ ಆಟಗಾರ ಸಯೀದ್ ಅನ್ವರ್ ಮಾತ್ರ. ಇನ್ನು ಭಾರತದ 15 ವರ್ಷದ ಉದಯೋನ್ಮುಖ ತಾರೆ ವೈಭವ್ ಸೂರ್ಯವಂಶಿ ಹಾಗೂ ಪಾಕಿಸ್ತಾನದ 20 ವರ್ಷದ ಸಮೀರ್ ಮಿನ್ಹಾಸ್ ಅವರ ನಡುವಿನ ಆಯ್ಕೆಗೆ, "ನಾನು ಇಬ್ಬರ ಆಟವನ್ನೂ ಸಾಕಷ್ಟು ನೋಡಿಲ್ಲ, ಹೀಗಾಗಿ ಈಗಲೇ ನಿರ್ಣಯಿಸುವುದು ಸರಿಯಲ್ಲ" ಎಂದು ಉತ್ತರಿಸಲು ನಿರಾಕರಿಸಿದರು.

ಬುಮ್ರಾ ಟೆಸ್ಟ್‌ನಲ್ಲಿ ಇನ್ನೂ ಸಾಧಿಸುವುದು ಬಾಕಿಯಿದೆ

ತಂಡದಲ್ಲಿ ಬುಮ್ರಾ ಅವರನ್ನು ಆಯ್ಕೆ ಮಾಡಿದರೂ, ಜಸ್ಪ್ರೀತ್ ಬುಮ್ರಾ ಅವರ ಟೆಸ್ಟ್ ಕ್ರಿಕೆಟ್ ಸಾಧನೆಗಳ ಕುರಿತು ವಕಾರ್ ಯೂನಿಸ್ ನೀಡಿರುವ ಹೇಳಿಕೆ ಭಾರತೀಯ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಜಗತ್ತಿನ ಅತ್ಯಂತ ಮಾರಕ ಬೌಲರ್ ಆಗಿರುವ ಬುಮ್ರಾ, ವಿಶ್ವದ ಅತ್ಯುತ್ತಮ ಟೆಸ್ಟ್ ಬೌಲರ್ ಎನಿಸಿಕೊಳ್ಳಲು ಕೆಂಪು ಚೆಂಡಿನ ಕ್ರಿಕೆಟ್‌ನಲ್ಲಿ (Red-ball cricket) ಇನ್ನೂ ಸಾಕಷ್ಟು ಸಾಬೀತುಪಡಿಸಬೇಕಿದೆ ಎಂದು ವಕಾರ್ ಪ್ರತಿಪಾದಿಸಿದ್ದಾರೆ.

ಬಿಳಿ ಚೆಂಡಿನ (White-ball) ಕ್ರಿಕೆಟ್‌ನಲ್ಲಿ ಬುಮ್ರಾ ಅವರ ಸಾಮರ್ಥ್ಯಕ್ಕೆ ಸರಿಹೊಂದುವ ಯಾವ ಬೌಲರ್ ಕೂಡ ಆಧುನಿಕ ಕ್ರಿಕೆಟ್‌ನಲ್ಲಿ ಇಲ್ಲ. ಆದರೆ ಟೆಸ್ಟ್ ಕ್ರಿಕೆಟ್ ಅನ್ನು ಹೊರಗಿಡಿ. ಟೆಸ್ಟ್‌ನಲ್ಲಿ ಅವರು ಇನ್ನೂ ಸಾಧಿಸಬೇಕಾದದ್ದು ಬಹಳಷ್ಟಿದೆ; ಅವರು ಹೆಚ್ಚಾಗಿ ಟೆಸ್ಟ್ ಆಡಿಲ್ಲ. ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಝಲ್‌ವುಡ್ ಹಾಗೂ ಇಂಗ್ಲೆಂಡ್‌ನ ಹಲವು ಬೌಲರ್‌ಗಳು ಟೆಸ್ಟ್‌ನಲ್ಲಿ ಅದ್ಭುತವಾಗಿದ್ದಾರೆ. ಆದರೆ T20 ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ಕ್ಲಿಷ್ಟಕರ ಸಂದರ್ಭಗಳಲ್ಲಿ (Crunch scenarios) ಬುಮ್ರಾ ನೀಡುವ ಇಂಪ್ಯಾಕ್ಟ್ ಅತ್ಯದ್ಭುತ ಎಂದು ವಕಾರ್ ಹೇಳೀದ್ದಾರೆ.

ಅಂಕಿ-ಅಂಶಗಳೇ ಹೇಳುತ್ತಿವೆ ಬುಮ್ರಾ ನಂ.1 ಶ್ರೇಷ್ಠತೆ!

ವಕಾರ್ ಯೂನಿಸ್ ಅವರ ಈ ಹೇಳಿಕೆಗೆ ಜಾಗತಿಕ ಕ್ರಿಕೆಟ್ ಅಂಕಿ-ಅಂಶಗಳೇ ಕನ್ನಡಿ ಹಿಡಿದಿವೆ. ಬುಮ್ರಾ ಅವರ ಟೆಸ್ಟ್ ದಾಖಲೆಗಳು ವಕಾರ್ ಅವರ ವಾದವನ್ನು ಉಲ್ಟಾ ಮಾಡಿದೆ. ಬುಮ್ರಾ ಅವರು 52 ಟೆಸ್ಟ್ ಪಂದ್ಯಗಳಿಂದ 234 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅವರ ಬೌಲಿಂಗ್ ಸರಾಸರಿ ಬರೋಬ್ಬರಿ 19.7 ಹಾಗೂ ಸ್ಟ್ರೈಕ್ ರೇಟ್ 42.8 ಆಗಿದೆ. ಟೆಸ್ಟ್ ಕ್ರಿಕೆಟ್‌ನ 147 ವರ್ಷಗಳ ಇತಿಹಾಸದಲ್ಲೇ 200 ಕ್ಕೂ ಹೆಚ್ಚು ವಿಕೆಟ್ ಪಡೆದು, 20 ಕ್ಕಿಂತ ಕಡಿಮೆ ಬೌಲಿಂಗ್ ಸರಾಸರಿ (Below 20 average) ಹೊಂದಿರುವ ಜಗತ್ತಿನ ಏಕೈಕ ಬೌಲರ್ ಎಂಬ ಅಪರೂಪದ ಹೆಗ್ಗಳಿಕೆ ಬುಮ್ರಾ ಅವರದ್ದಾಗಿದೆ. 2018 ರಲ್ಲಿ ಕೇವಲ 11ನೇ ಪಂದ್ಯದಲ್ಲೇ 50 ಟೆಸ್ಟ್ ವಿಕೆಟ್ ಹಾಗೂ 24ನೇ ಪಂದ್ಯದಲ್ಲಿ 100 ಟೆಸ್ಟ್ ವಿಕೆಟ್ ಪೂರೈಸಿದ ಭಾರತದ ಅತ್ಯಂತ ವೇಗದ ವೇಗಿ ಎನಿಸಿಕೊಂಡಿದ್ದಾರೆ. 2019 ರಲ್ಲಿ ಟೆಸ್ಟ್‌ನಲ್ಲಿ ಹ್ಯಾಟ್ರಿಕ್ ಪಡೆದ ಭಾರತದ 3ನೇ ಬೌಲರ್ ಆದರು. 2024 ರ ಸಾಲಿನ 'ICC ವರ್ಷದ ಅತ್ಯುತ್ತಮ ಟೆಸ್ಟ್ ಕ್ರಿಕೆಟಿಗ' (ICC Men's Test Cricketer of the Year) ಪ್ರಶಸ್ತಿಗೆ ಭಾಜನರಾಗಿದ್ದರು.

2024-25 ರ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಬರೋಬ್ಬರಿ 32 ವಿಕೆಟ್ ಕಬಳಿಸಿ ಸರಣಿಯ ಶ್ರೇಷ್ಠ ಬೌಲರ್ ಎನಿಸಿಕೊಂಡಿದ್ದರು. ಬುಮ್ರಾ ಅವರ ಈ ಟೆಸ್ಟ್ ದಾಖಲೆಗಳು ಕಣ್ಣ ಮುಂದಿದ್ದರೂ, ಪಾಕ್ ಮಾಜಿ ವೇಗಿ ವಕಾರ್ ಯೂನಿಸ್ ಅವರು ಬುಮ್ರಾ ಟೆಸ್ಟ್ ಸಾಧನೆಯನ್ನು ತಗ್ಗಿಸಿ ಮಾತನಾಡಿರುವುದು ಕ್ರೀಡಾಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ.