* ಪಾಕಿಸ್ತಾನ ಕೋಚ್‌ ಹುದ್ದೆಯಿಂದ ಕೆಳಗಿಳಿದ ಮಿಸ್ಬಾ, ವಕಾರ್ ಯೂನಿಸ್* ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನ ಪಾಕ್‌ ತಂಡಕ್ಕೆ ಶಾಕ್‌* ಸಕ್ಲೈನ್‌ ಮುಷ್ತಾಕ್‌ ಮತ್ತು ಅಬ್ದುಲ್‌ ರಜಾಕ್‌ ಹಂಗಾಮಿ ಕೋಚ್‌

ಕರಾಚಿ(ಸೆ.07): ಮುಂಬರುವ ಟಿ20 ವಿಶ್ವಕಪ್‌ಗೆ ತಂಡವನ್ನು ಪ್ರಕಟಿಸಿದ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಮಿಸ್ಬಾ ಉಲ್‌ ಹಕ್‌ ಮತ್ತು ಮುಖ್ಯ ಬೌಲಿಂಗ್‌ ಕೋಚ್‌ ವಾಕರ್‌ ಯೂನಿಸ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಟಿ20 ವಿಶ್ವಕಪ್‌ ಒಂದು ತಿಂಗಳಷ್ಟೇ ಬಾಕಿ ಇರುವಾಗ ಇಬ್ಬರು ಪ್ರಮುಖರು ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ) ಸೋಮವಾರ ಈ ವಿಷಯವನ್ನು ಖಚಿತ ಪಡಿಸಿದ್ದು, ಪಾಕಿಸ್ತಾನದ ಮಾಜಿ ಆಟಗಾರರಾದ ಸಕ್ಲೈನ್‌ ಮುಷ್ತಾಕ್‌ ಮತ್ತು ಅಬ್ದುಲ್‌ ರಜಾಕ್‌ ಹಂಗಾಮಿ ಕೋಚ್‌ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಸೆಪ್ಟೆಂಬರ್ 13ರಂದು ಪಿಸಿಬಿ ಛೇರ್ಮನ್‌ ಆಗಿ ರಮೀಜ್‌ ರಾಜಾ ಅಧಿಕಾರ ಸ್ವೀಕರಿಸುತ್ತಿದ್ದು, ಇದೇ ವೇಳೆ ಮುಖ್ಯ ಕೋಚ್‌ಗಳಿಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದು ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ.

Scroll to load tweet…

ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ಪಾಕ್‌ ತಂಡ ಪ್ರಕಟ, ಬಾಬರ್ ಅಜಂ ನಾಯಕ

ಮುಂಬರುವ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡವು ತನ್ನ ಮೊದಲ ಕಾದಾಟದಲ್ಲಿ ಸಾಂಪ್ರಾದಾಯಿಕ ಎದುರಾಳಿ ಟೀಂ ಇಂಡಿಯಾ ವಿರುದ್ದ ಅಭಿಯಾನ ಆರಂಭಿಸಲಿದೆ. ಅಕ್ಟೋಬರ್ 24ರಂದು ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.