1999ರಲ್ಲಿ ಅನಿಲ್ ಕುಂಬ್ಳೆ ಅವರ 10 ವಿಕೆಟ್ ಸಾಧನೆಯನ್ನು ತಡೆಯಲು ಪಾಕಿಸ್ತಾನದ ಆಟಗಾರರು ಉದ್ದೇಶಪೂರ್ವಕವಾಗಿ ರನ್ ಔಟ್ ಆಗಲು ಸಂಚು ರೂಪಿಸಿದ್ದರು ಎಂಬ ರಹಸ್ಯವನ್ನು ವಕಾರ್ ಯೂನಿಸ್ ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ.

ಬೆಂಗಳೂರು (ಅ.29): ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಸುವರ್ಣ ಅಕ್ಷರಗಳಲ್ಲಿ ದಾಖಲಾಗಿರುವ ದಿನ 1999ರ ಫೆಬ್ರವರಿ 7. ದೆಹಲಿಯ ಫಿರೋಜ್‌ ಶಾ ಕೋಟ್ಲಾ (ಈಗಿನ ಅರುಣ್ ಜೇಟ್ಲಿ) ಮೈದಾನದಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಕನ್ನಡಿಗ ಅನಿಲ್ ಕುಂಬ್ಳೆ (Anil Kumble) ಬರೋಬ್ಬರಿ 10 ವಿಕೆಟ್‌ಗಳನ್ನು ಕಬಳಿಸಿ ಜಗತ್ತನ್ನೇ ಬೆರಗುಗೊಳಿಸಿದ್ದರು. ಆದರೆ, ಕುಂಬ್ಳೆ ಅವರ ಈ ಐತಿಹಾಸಿಕ 'ಪರ್ಫೆಕ್ಟ್ ಟೆನ್' (10-Wicket Haul) ಸಾಧನೆ ಸಿಗದಂತೆ ಮಾಡಲು ಪಾಕಿಸ್ತಾನಿ ಆಟಗಾರರು ಕುತಂತ್ರ ನಡೆಸಿದ್ದರು ಎಂಬ ರಹಸ್ಯ ಇದೀಗ ಶುಭಂಕರ್ ಮಿಶ್ರಾ (Shubhankar Mishra) ಅವರ ಯೂಟ್ಯೂಬ್ ಪಾಡ್‌ಕಾಸ್ಟ್‌ನಲ್ಲಿ ಬಹಿರಂಗವಾಗಿದೆ.

ಶುಭಂಕರ್ ಮಿಶ್ರಾ ಅವರ ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿದ್ದ ವಕಾರ್‌ ಅವರಿಗೆ, 1999 ರ ದೆಹಲಿ ಟೆಸ್ಟ್‌ನಲ್ಲಿ ಅನಿಲ್ ಕುಂಬ್ಳೆ 10 ವಿಕೆಟ್ ಪಡೆಯುವುದನ್ನು ತಡೆಯಲು ನೀವಿಬ್ಬರೂ ಉದ್ದೇಶಪೂರ್ವಕವಾಗಿ ರನ್ ಔಟ್ (Run Out) ಆಗೋಣ ಎಂದು ವಾಸಿಂ ಅಕ್ರಮ್‌ಗೆ ಸಲಹೆ ನೀಡಿದ್ದು ನಿಜವೇ?" ಎಂದು ನೇರವಾಗಿ ಪ್ರಶ್ನಿಸಿದರು. ಇದಕ್ಕೆ ಹೌದು ಎಂದು ಉತ್ತರಿಸಿದ ವಕಾರ್‌ ಯೂನುಸ್‌, ಅನಿಲ್ ಕುಂಬ್ಳೆ ಈಗಾಗಲೇ 9 ವಿಕೆಟ್ ಕಬಳಿಸಿದ್ದರು. ಮೈದಾನದಲ್ಲಿ ಕೊನೆಯ ವಿಕೆಟ್‌ಗಾಗಿ ನಾನೂ ಮತ್ತು ವಾಸಿಂ ಅಕ್ರಮ್ ಬ್ಯಾಟಿಂಗ್ ಮಾಡುತ್ತಿದ್ದೆವು. ಆಗ ನಾನು ವಾಸಿಂ ಬಳಿ ಹೋಗಿ, 'ನಾವಿಬ್ಬರೂ ಬೇಕಂತಲೇ ರನ್ ಔಟ್ ಆಗಿಬಿಡೋಣ, ಆಗ ಕುಂಬ್ಳೆಗೆ 10ನೇ ವಿಕೆಟ್ ಸಿಗುವುದಿಲ್ಲ' ಎಂದು ಸಲಹೆ ನೀಡಿದ್ದೆ.

ಆದರೆ, ವಾಸಿಂ ಅಕ್ರಮ್ ನನ್ನ ಸಲಹೆಯನ್ನು ತಿರಸ್ಕರಿಸಿದರು. 'ಅದೃಷ್ಟ ಆತನ ಪರವಾಗಿದ್ದರೆ ನಾವು ಅದನ್ನು ತಡೆಯಲು ಸಾಧ್ಯವಿಲ್ಲ. ಆದರೆ, ನಾನು ಕುಂಬ್ಳೆಗೆ ನನ್ನ ವಿಕೆಟ್ ನೀಡುವುದಿಲ್ಲ ಎಂದು ನಿಮಗೆ ಭರವಸೆ ನೀಡುತ್ತೇನೆ' ಎಂದು ವಾಸಿಂ ಹೇಳಿದ್ದರು ಎಂದು ವಕಾರ್ ಒಪ್ಪಿಕೊಂಡಿದ್ದಾರೆ. ಆದರೆ ವಿಧಿಯಾಟ ಬೇರೆಯೇ ಇತ್ತು. ವಾಸಿಂ ಅಕ್ರಮ್ ಎಷ್ಟೇ ಜಾಗರೂಕರಾಗಿ ಆಡಿದರೂ, ಅಂತಿಮವಾಗಿ ಕುಂಬ್ಳೆ ಬೌಲಿಂಗ್‌ನಲ್ಲೇ ವಿವಿಎಸ್ ಲಕ್ಷ್ಮಣ್ ಅವರಿಗೆ ಇನ್‌ಸೈಡ್ ಎಡ್ಜ್ (Inside edge) ಕ್ಯಾಚ್ ನೀಡಿ 10ನೇ ವಿಕಟ್‌ ಆಗಿ ಪೆವಿಲಿಯನ್‌ಗೆ ಮರಳಿದರು. ಇದರೊಂದಿಗೆ ಕುಂಬ್ಳೆ ಒಂದೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ಪಡೆದ ಜಗತ್ತಿನ ಎರಡನೇ ಬೌಲರ್ ಆಗಿ ಇತಿಹಾಸ ನಿರ್ಮಿಸಿದರು. ಒಂದೇ ಇನ್ನಿಂಗ್ಸ್‌ನಲ್ಲಿ ಎಲ್ಲಾ 10 ವಿಕೆಟ್‌ ಪಡೆದ ಮೊದಲ ಬೌಲರ್‌ ಜಿಮ್‌ ಲೇಕರ್‌.

ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಚರ್ಚೆ

ವಕಾರ್ ಯೂನಿಸ್ ಅವರ ಈ ಒಪ್ಪಿಗೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು, ಕ್ರೀಡಾಭಿಮಾನಿಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕ್ರೀಡೆಯಲ್ಲಿ ಎದುರಾಳಿ ಆಟಗಾರನ ಸಾಧನೆಯನ್ನು ಗೌರವಿಸುವುದನ್ನು ಬಿಟ್ಟು, ಇಷ್ಟೊಂದು ಹೊಟ್ಟೆಯುರಿ ಮತ್ತು ಸಂಕುಚಿತ ಮನೋಭಾವ ಹೊಂದುವುದು ಅಸಹ್ಯಕರ ಎಂದು ಹಲವರು ಕಾಮೆಂಟ್‌ ಮಾಡಿದ್ದಾರೆ. ಇದೇ ವೇಳೆ ಭಾರತದ ವೀರೇಂದ್ರ ಸೆಹ್ವಾಗ್ 99 ರನ್‌ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾಗ, ಭಾರತದ ಗೆಲುವಿಗೆ ಕೇವಲ 1 ರನ್ ಬೇಕಿದ್ದಾಗ ಶ್ರೀಲಂಕಾದ ಬೌಲರ್ ರಣಧೀವ್‌ ಬೇಕಂತಲೇ ನೋ-ಬಾಲ್/ವೈಡ್ ಬೌಲ್ ಮಾಡಿ ಸೆಹ್ವಾಗ್ ಶತಕ ತಪ್ಪಿಸಿದ್ದ ಘಟನೆಯನ್ನು ಕ್ರಿಕೆಟ್ ಪ್ರಿಯರು ನೆನಪಿಸಿಕೊಂಡಿದ್ದಾರೆ.

ಇನ್ನೊಂದೆಡೆ ಕೆಲವು ಕ್ರೀಡಾವಿಶ್ಲೇಷಕರು ಮತ್ತು ನೆಟ್ಟಿಗರು ಇದನ್ನು 'ಗೇಮ್ ಟ್ಯಾಕ್ಟಿಕ್ಸ್' (Game Tactics) ಎಂದು ಸಮರ್ಥಿಸಿಕೊಂಡಿದ್ದಾರೆ. ಅಂದು ಕುಂಬ್ಳೆ 9 ವಿಕೆಟ್ ಪಡೆದಿದ್ದಾಗ, ಇನ್ನೊಂದು ತುದಿಯಲ್ಲಿ ಬೌಲಿಂಗ್ ಮಾಡುತ್ತಿದ್ದ ಭಾರತದ ವೇಗಿ ಶ್ರೀನಾಥ್ ಅವರು ತಮಗೆ ವಿಕೆಟ್ ಸಿಗಬಾರದು ಎಂಬ ಕಾರಣಕ್ಕೆ ಉದ್ದೇಶಪೂರ್ವಕವಾಗಿ ಆಫ್ ಸ್ಟಂಪ್‌ನಿಂದ ಭಾರಿ ಹೊರಭಾಗದಲ್ಲಿ (Wide of the stumps) ಬೌಲಿಂಗ್ ಮಾಡುತ್ತಿದ್ದರು! ಏಕೆಂದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ಚೆಂಡು ತೀರ ಹೊರಹೋಗದ ಹೊರತು ವೈಡ್ ನೀಡುವುದಿಲ್ಲ. ತಮ್ಮ ಸಹಪಾಠಿ ಕುಂಬ್ಳೆಗೆ 10 ವಿಕೆಟ್ ಸಿಗಲಿ ಎಂಬ ಕಾರಣಕ್ಕೆ ಶ್ರೀನಾಥ್ ವಿಕೆಟ್ ಪಡೆಯದೇ ಬೌಲಿಂಗ್ ಮಾಡುವ ತಂತ್ರ ಹೂಡಿದ್ದರು.

ಹಾಗಿದ್ದಾಗ, ಎದುರಾಳಿ ಬ್ಯಾಟರ್ ತಮಗೆ 10ನೇ ವಿಕೆಟ್ ಸಿಗದಿರಲಿ ಎಂದು ರನ್ ಔಟ್ ಆಗಲು ಯತ್ನಿಸುವುದೂ ಸಹ ಪಂದ್ಯದ ತಂತ್ರಗಾರಿಕೆಯ ಭಾಗವೇ ಹೊರತು ಇದರಲ್ಲಿ ವೈಯಕ್ತಿಕ ದ್ವೇಷವೇನೂ ಇಲ್ಲ ಎಂದು ಕೆಲವರು ವಿಶ್ಲೇಷಿಸಿದ್ದಾರೆ.