ಒಮಾನ್‌ನಲ್ಲಿ ನಡೆಯಲಿರುವ ಎಸಿಸಿ ಪುರುಷರ ಅಂಡರ್-19 ಏಷ್ಯಾಕಪ್‌ಗೆ 15 ಆಟಗಾರರ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಲಕ್ಷ್ಯ ರೈಚಂದಾನಿ ನಾಯಕನಾಗಿ ಆಯ್ಕೆಯಾಗಿದ್ದಾರೆ. ವಿನೂ ಮಂಕಡ್ ಟ್ರೋಫಿಯಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದ ಅನ್ವಯ್ ದ್ರಾವಿಡ್ ಮತ್ತು ಆರ್ಯವೀರ್ ಸೆಹ್ವಾಗ್.

ನವದೆಹಲಿ(ಅ.30): ಭಾರತದ ಕ್ರಿಕೆಟ್‌ನ ಇಬ್ಬರು ದಿಗ್ಗಜ ಮಾಜಿ ಬ್ಯಾಟರ್‌ಗಳ ಪುತ್ರರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಮತ್ತೊಂದು ಅವಕಾಶ ಸಿಕ್ಕಿದೆ. ಕರ್ನಾಟಕದ ಅನ್ವಯ್ ದ್ರಾವಿಡ್ ಮತ್ತು ದೆಹಲಿಯ ಆರ್ಯವೀರ್ ಸೆಹ್ವಾಗ್ ಅವರು ಎಸಿಸಿ ಪುರುಷರ ಅಂಡರ್-19 ಏಷ್ಯಾಕಪ್‌ಗೆ ಪ್ರಕಟಿಸಿರುವ ಭಾರತದ 15 ಆಟಗಾರರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಟೂರ್ನಿ ನವೆಂಬರ್ 5ರಿಂದ 14ರವರೆಗೆ ಒಮಾನ್‌ನ ಮಸ್ಕತ್‌ನಲ್ಲಿ ನಡೆಯಲಿದೆ.

ಭಾರತದ ಮಾಜಿ ನಾಯಕ ಹಾಗೂ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವಯ್ ಮತ್ತು ತಮ್ಮ ಕಾಲದ ಸ್ಫೋಟಕ ಆರಂಭಿಕ ಬ್ಯಾಟರ್‌ಗಳಲ್ಲಿ ಒಬ್ಬರಾಗಿದ್ದ ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್, ಇತ್ತೀಚೆಗೆ ಮುಕ್ತಾಯಗೊಂಡ ವಿನೂ ಮಂಕಡ್ ಟ್ರೋಫಿಯಲ್ಲಿ ತೋರಿದ ಉತ್ತಮ ಪ್ರದರ್ಶನದ ಆಧಾರದಲ್ಲಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇದೀಗ ರಾಹುಲ್ ದ್ರಾವಿಡ್ ಹಾಗೂ ವಿರೇಂದ್ರ ಸೆಹ್ವಾಗ್ ಮಕ್ಕಳಿಬ್ಬರು ಅಂಡರ್‌-19 ಭಾರತ ತಂಡಕ್ಕೆ ಎಂಟ್ರಿಕೊಟ್ಟಿದ್ದು, ಇನ್ನು ಸೀನಿಯರ್ಸ್‌ ತಂಡಕ್ಕೆ ಎಂಟ್ರಿ ಕೊಡೋದು ಬಾಕಿ ಉಳಿದಿದೆ. ದೇಶೀಯ ಅಂಡರ್-19 ಟೂರ್ನಿಯಲ್ಲಿ ಇಬ್ಬರೂ ಯುವ ಆಟಗಾರರು ಆಕರ್ಷಕ ಶತಕಗಳನ್ನು ಸಿಡಿಸಿ ಗಮನ ಸೆಳೆದಿದ್ದರು. ಈ ಪ್ರದರ್ಶನಗಳು ಅವರ ಬ್ಯಾಟಿಂಗ್ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದ್ದು, ಮುಂಬರುವ ಮಹತ್ವದ ಟೂರ್ನಿಗೂ ಮುನ್ನ ಕ್ರಿಕೆಟ್ ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿವೆ.

100 ಎಸೆತಗಳಲ್ಲಿ 151 ರನ್ ಸಿಡಿಸಿದ್ದ ಅನ್ವಯ್

17 ವರ್ಷದ ಅನ್ವಯ್ ದ್ರಾವಿಡ್ ವಿನೂ ಮಂಕಡ್ ಟ್ರೋಫಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರಲ್ಲಿ ಒಬ್ಬರಾಗಿದ್ದರು. ಅಕ್ಟೋಬರ್ ಆರಂಭದಲ್ಲಿ ಗುಜರಾತ್ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 100 ಎಸೆತಗಳಲ್ಲಿ 151 ರನ್ ಸಿಡಿಸಿ ಗಮನ ಸೆಳೆದಿದ್ದರು. ಟೂರ್ನಿಯುದ್ದಕ್ಕೂ ಅನ್ವಯ್ ಸ್ಥಿರವಾಗಿ ರನ್ ಗಳಿಸುವ ಮೂಲಕ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದರು. ವಿಶೇಷವಾಗಿ ಇನ್ನಿಂಗ್ಸ್‌ನ ಕೊನೆಯ ಓವರ್‌ಗಳಲ್ಲಿ ವೇಗವಾಗಿ ರನ್ ಗಳಿಸುವ ಕೌಶಲವನ್ನು ತೋರಿಸಿದ್ದರು.

ಈ ವರ್ಷದ ಆರಂಭದಲ್ಲೇ ಅನ್ವಯ್ ಅಂತರರಾಷ್ಟ್ರೀಯ ಮಟ್ಟದಲ್ಲೂ ತಮ್ಮ ಪ್ರತಿಭೆಯ ಝಲಕ್ ನೀಡಿದ್ದರು. ಜುಲೈನಲ್ಲಿ ಹಂಬಂಟೋಟದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಯೂತ್ ಏಕದಿನ ಪಂದ್ಯದಲ್ಲಿ 67 ಎಸೆತಗಳಲ್ಲಿ 87 ರನ್ ಗಳಿಸಿದ್ದರು. ಈ ಪ್ರದರ್ಶನದೊಂದಿಗೆ ಭಾರತದ ವಯೋಮಿತಿ ತಂಡದಲ್ಲಿ ಗಮನ ಸೆಳೆಯುತ್ತಿರುವ ಬ್ಯಾಟರ್‌ಗಳ ಸಾಲಿನಲ್ಲಿ ತಮ್ಮ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿದ್ದರು.

ಸೆಹ್ವಾಗ್ ಪುತ್ರನಿಂದಲೂ ಭರ್ಜರಿ ಶತಕ

ಇತ್ತ ದೆಹಲಿಯ ಆರ್ಯವೀರ್ ಸೆಹ್ವಾಗ್ ಕೂಡ ವಿನೂ ಮಂಕಡ್ ಟ್ರೋಫಿಯಲ್ಲಿ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. 19 ವರ್ಷದ ಆರ್ಯವೀರ್, ವಿಜಯನಗರಂನಲ್ಲಿ ಚಂಡೀಗಢ ವಿರುದ್ಧ ನಡೆದ ಪಂದ್ಯದಲ್ಲಿ 143 ಎಸೆತಗಳಲ್ಲಿ ಭರ್ಜರಿ 173 ರನ್ ಗಳಿಸಿದ್ದರು. ದೊಡ್ಡ ಇನ್ನಿಂಗ್ಸ್ ಕಟ್ಟುವ ಸಾಮರ್ಥ್ಯವನ್ನು ಪ್ರದರ್ಶಿಸಿದ ಆರ್ಯವೀರ್, ಆಯ್ಕೆಗಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಅಂಡರ್-19 ಏಷ್ಯಾಕಪ್‌ನಲ್ಲಿ ಭಾರತ ತಂಡದ ಪರ ಆಡಲು ಅವಕಾಶ ಪಡೆದಿದ್ದು, ತಮ್ಮ ತಂದೆಯಂತೆ ಕ್ರಿಕೆಟ್‌ನಲ್ಲಿ ಛಾಪು ಮೂಡಿಸುವ ಗುರಿ ಹೊಂದಿದ್ದಾರೆ.

ಲಕ್ಷ್ಯ ರೈಚಂದಾನಿ ಭಾರತ ತಂಡದ ನಾಯಕ

ಅಂಡರ್-19 ಏಷ್ಯಾಕಪ್‌ನಲ್ಲಿ ಭಾರತ ತಂಡವನ್ನು ಲಕ್ಷ್ಯ ರೈಚಂದಾನಿ ಮುನ್ನಡೆಸಲಿದ್ದು, ಯಶವರ್ಧನ್ ಸಿಂಗ್ ಚೌಹಾಣ್ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ. ವಿಕೆಟ್‌ಕೀಪರ್‌ಗಳಾಗಿ ಅನ್ವಯ್ ದ್ರಾವಿಡ್ ಮತ್ತು ರಜತ್ ಬಘೇಲ್ ತಂಡದಲ್ಲಿದ್ದಾರೆ. ಇದಲ್ಲದೆ ವಿ.ಕೆ. ವಿನೀತ್, ಕುಶಾಗ್ರ ಓಜಾ ಮತ್ತು ಅರ್ಜುನ್ ರಾಜ್‌ಪೂತ್ ಸೇರಿದಂತೆ ಹಲವು ಬ್ಯಾಟಿಂಗ್ ಆಯ್ಕೆಗಳನ್ನು ತಂಡ ಹೊಂದಿದೆ.

ಭಾರತ ಅಂಡರ್-19 ತಂಡ: ಲಕ್ಷ್ಯ ರೈಚಂದಾನಿ (ನಾಯಕ), ಆರ್ಯವೀರ್ ಸೆಹ್ವಾಗ್, ವಿ.ಕೆ. ವಿನೀತ್, ಯಶವರ್ಧನ್ ಸಿಂಗ್ ಚೌಹಾಣ್ (ಉಪನಾಯಕ), ಕುಶಾಗ್ರ ಓಜಾ, ಅರ್ಜುನ್ ರಾಜ್‌ಪೂತ್, ಮನಲ್ ಚೌಹಾಣ್, ಅನ್ವಯ್ ದ್ರಾವಿಡ್ (ವಿಕೆಟ್‌ಕೀಪರ್), ರಜತ್ ಬಘೇಲ್ (ವಿಕೆಟ್‌ಕೀಪರ್), ವಿ. ಯಶ್ವೀರ್, ಆರ್ಯನ್ ಸಾವ್ಸಾನಿ, ಮೋಹಿತ್ ಉಲ್ವಾ, ಕಾವ್ಯ ಪಟೇಲ್, ಶವಿನ್ ವಿನೋದ್ ಮತ್ತು ಇಶಾನ್ ಸೂದ್.

ನವೆಂಬರ್ 8ರಂದು ಭಾರತ-ಪಾಕಿಸ್ತಾನ ಮುಖಾಮುಖಿ

ಭಾರತ ತಂಡ ಗ್ರೂಪ್ ಎನಲ್ಲಿ ಸ್ಥಾನ ಪಡೆದಿದ್ದು, ಪಾಕಿಸ್ತಾನ, ನೇಪಾಳ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ತಂಡಗಳನ್ನು ಎದುರಿಸಲಿದೆ. ಭಾರತ ತನ್ನ ಮೊದಲ ಪಂದ್ಯದಲ್ಲಿ ನವೆಂಬರ್ 6ರಂದು ನೇಪಾಳವನ್ನು ಎದುರಿಸಲಿದೆ. ಬಳಿಕ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ನವೆಂಬರ್ 8ರಂದು ಸೆಣಸಲಿದೆ. ಗುಂಪು ಹಂತದ ಕೊನೆಯ ಪಂದ್ಯದಲ್ಲಿ ನವೆಂಬರ್ 10ರಂದು ಯುಎಇ ವಿರುದ್ಧ ಆಡಲಿದೆ.

ಗ್ರೂಪ್ ಬಿನಲ್ಲಿ ಬಾಂಗ್ಲಾದೇಶ, ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಮಲೇಷ್ಯಾ ತಂಡಗಳಿವೆ. ಎರಡೂ ಗುಂಪುಗಳಿಂದ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿವೆ. ಸೆಮಿಫೈನಲ್ ಪಂದ್ಯಗಳು ನವೆಂಬರ್ 12ರಂದು ನಡೆಯಲಿದ್ದು, ಫೈನಲ್ ಪಂದ್ಯ ನವೆಂಬರ್ 14ರಂದು ಆಯೋಜನೆಯಾಗಲಿದೆ.