ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಅವರ ವೃತ್ತಿಜೀವನದ ಅಪೂರ್ಣ ಕನಸುಗಳ ಕುರಿತು ಅಭಿಮಾನಿಗಳು ಭಾವುಕರಾಗಿದ್ದಾರೆ. ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್ ಗಳಿಸುವ ಕನಸು ಕಂಡಿದ್ದರೆ, ಧೋನಿ ಚೆಪಾಕ್‌ನಲ್ಲಿ ಕೊನೆಯ ಪಂದ್ಯ ಆಡುವ ಆಸೆ ಹೊಂದಿದ್ದರು.
ಬೆಂಗಳೂರು (ನ.17): 'ಅವರು ಬೇರೆಯದೇ ರೀತಿಯಾದ ಅಂತ್ಯದ ಕನಸು ಕಂಡಿದ್ದರು, ಆದರೆ ವಿಧಿಯ ಲಿಖಿತವೇ ಬೇರೆಯಾಗಿತ್ತು..' ಭಾರತೀಯ ಕ್ರಿಕೆಟ್ ಇತಿಹಾಸದ ಇಬ್ಬರು ಮಹಾನ್ ದಿಗ್ಗಜರಾದ ವಿರಾಟ್ ಕೊಹ್ಲಿ (Virat Kohli) ಮತ್ತು ಮಹೇಂದ್ರ ಸಿಂಗ್ ಧೋನಿ (MS Dhoni) ಅವರು ವೃತ್ತಿಜೀವನದಲ್ಲಿ ಕಂಡ ಕನಸು ಅದಾಗದೇ ಅಂತ್ಯವಾಗಿದ್ದರ ಕುರಿತು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಒಂದು ಸಾಲು ಕೋಟ್ಯಂತರ ಅಭಿಮಾನಿಗಳ ಹೃದಯವನ್ನು ಭಾವುಕಗೊಳಿಸಿದೆ.
ಮಂಗಳವಾರ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ 'ಥಲಾ' ಎಂಎಸ್ ಧೋನಿ ತಮ್ಮ ಐಪಿಎಲ್ ವೃತ್ತಿಜೀವನಕ್ಕೆ ಅಧಿಕೃತವಾಗಿ ವಿದಾಯ ಘೋಷಿಸಿದ ಬೆನ್ನಲ್ಲೇ, ಕ್ರಿಕೆಟ್ ಲೋಕದ ಈ ಇಬ್ಬರು ಸೂಪರ್ ಸ್ಟಾರ್‌ಗಳ 'ಅಪೂರ್ಣ ಕನಸುಗಳ' ಕುರಿತು ಚರ್ಚೆ ಶುರುವಾಗಿದೆ. ಮೈದಾನದಲ್ಲಿ ತಮ್ಮದೇ ಆದ ಛಾಪು ಮೂಡಿಸಿ, ವಿಶ್ವ ಕ್ರಿಕೆಟ್ ಆಳಿದ ಈ ಇಬ್ಬರೂ ದಿಗ್ಗಜರಿಗೆ, ತಾವು ಬಯಸಿದ ರೀತಿಯಲ್ಲಿ ವಿದಾಯ ಹೇಳುವ ಅವಕಾಶ ಸಿಗಲೇ ಇಲ್ಲ ಎಂಬುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.
ವಿರಾಟ್ ಕೊಹ್ಲಿ ಕೈತಪ್ಪಿದ '10,000 ಟೆಸ್ಟ್ ರನ್‌ಗಳ' ಮಹಾಕನಸು
ಟೆಸ್ಟ್ ಕ್ರಿಕೆಟ್‌ಗೆ ಹೊಸ ಜೀವ ತುಂಬಿದ ಕಿಂಗ್ ವಿರಾಟ್ ಕೊಹ್ಲಿ, 2013ರಲ್ಲಿ ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಒಂದು ದೊಡ್ಡ ಕನಸನ್ನು ಸಾರ್ವಜನಿಕವಾಗಿ ಬಿಚ್ಚಿಟ್ಟಿದ್ದರು: ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್ ಗಳಿಸುವುದು ನನ್ನ ಗುರಿಯಾಗಿದೆ, ಮತ್ತು ನಾನು ನಿಜವಾಗಿಯೂ ಸಾಧಿಸಲು ಬಯಸುವ ಮೈಲಿಗಲ್ಲು ಅದಾಗಿದೆ ಎಂದು ಕೊಹ್ಲಿ ಹೇಳಿಕೊಂಡಿದ್ದರು.
ಆದರೆ, ವಿಧಿಯಾಟ ಬೇರೆಯದೇ ಆಗಿತ್ತು. ಸುಮಾರು ಒಂದು ದಶಕಕ್ಕೂ ಹೆಚ್ಚು ಕಾಲ ಟೆಸ್ಟ್ ಕ್ರಿಕೆಟ್‌ನಲ್ಲಿ ಅಧಿಪತ್ಯ ಸಾಧಿಸಿದ ಕೊಹ್ಲಿ, 10,000 ರನ್‌ಗಳ ಮೈಲಿಗಲ್ಲಿನ ಸನಿಹಕ್ಕೆ ಬಂದು ತಲುಪಿದ್ದರು. 9230 ರನ್‌ಗಳಿಗೆ ತಮ್ಮ ಟೆಸ್ಟ್ ಕ್ರಿಕೆಟ್ ಜೀವನವನ್ನು ಕೊನೆ ಮಾಡಿದರು. ವೃತ್ತಿಜೀವನದ ಸಂಧ್ಯಾಕಾಲದಲ್ಲಿ ಎದುರಾದ ಫಾರ್ಮ್ ಏರಿಳಿತ ಮತ್ತು ಸತತ ವೈಫಲ್ಯಗಳ ನಡುವೆ, ತಮ್ಮ ನೆಚ್ಚಿನ ಸ್ವರೂಪವಾದ ಟೆಸ್ಟ್ ಕ್ರಿಕೆಟ್‌ಗೆ ಕೊಹ್ಲಿ ವಿದಾಯ ಘೋಷಿಸಬೇಕಾಯಿತು. ಕಳೆದ ವರ್ಷದ ಮೇ ತಿಂಗಳಲ್ಲಿ ಅವರು ದಿಢೀರ್ ಆಗಿ ಟೆಸ್ಟ್‌ಗೆ ವಿದಾಯ ಘೋಷಿಸಿದ್ದರು.
ಧೋನಿ ಪಾಲಿಒಗೆ ನನಸಾಗದ 'ಚೆಪಾಕ್‌ನಲ್ಲಿ ಕೊನೆಯ ಪಂದ್ಯ' ಆಡುವ ಆಸೆ
ಇನ್ನು, ಭಾರತಕ್ಕೆ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದುಕೊಟ್ಟ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 5 ಐಪಿಎಲ್ ಕಿರೀಟಗಳನ್ನು ತೊಡಿಸಿದ ಎಂಎಸ್ ಧೋನಿ ಕೂಡ 2021ರಲ್ಲಿ ತಮ್ಮ ಅಭಿಮಾನಿಗಳ ಮುಂದೆ ಒಂದು ಆಸೆಯನ್ನು ವ್ಯಕ್ತಪಡಿಸಿದ್ದರು.
ವೃತ್ತಿಜೀವನದಲ್ಲಿ ನಾನು ಆಡುವ ಕೊನೆಯ ಟಿ20 ಪಂದ್ಯದ ಸ್ಥಳ ಚೆನ್ನೈ ಆಗಿರುತ್ತದೆ ಎನ್ನುವ ಆಶಾಭಾವನೆ ನನ್ನದು ಎಂದಿದ್ದರು. 2021ರಲ್ಲಿಯೇ ಅವರು ಈ ಆಸೆ ವ್ಯಕ್ತಪಡಿಸಿ ಮಾತನಾಡಿದ್ದರು. ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಕಿಕ್ಕಿರಿದು ತುಂಬಿದ ಹಳದಿ ಸಾಗರದ ನಡುವೆ ತಮ್ಮ ಕೊನೆಯ ಐಪಿಎಲ್ ಪಂದ್ಯವಾಡಿ ಬ್ಯಾಟ್ ಕೆಳಗಿಡಬೇಕು ಎಂಬುದು ಧೋನಿ ಮತ್ತು ಅವರ ಕೋಟ್ಯಂತರ ಅಭಿಮಾನಿಗಳ ಕನಸಾಗಿತ್ತು.
ಆದರೆ, ಮಂಗಳವಾರ ತಮ್ಮ 19 ಸೀಸನ್‌ಗಳ ಐಪಿಎಲ್ ಪಯಣಕ್ಕೆ ತೆರೆ ಎಳೆದಿದ್ದಾರೆ. 2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಸದ್ದಿಲ್ಲದೆ ವಿದಾಯ ಹೇಳಿದ್ದ ಧೋನಿ, ಇದೀಗ ಐಪಿಎಲ್‌ಗೂ ಚೆಪಾಕ್ ಮೈದಾನದ ವಿದಾಯದ ಪಂದ್ಯವಿಲ್ಲದೆಯೇ ಗುಡ್‌ಬೈ ಹೇಳಿದ್ದಾರೆ. 2025ರ ಮೇ 25 ರಂದು ಗುಜರಾತ್ ಟೈಟಾನ್ಸ್ ವಿರುದ್ಧ ಅಹಮದಾಬಾದ್‌ನಲ್ಲಿ ಆಡಿದ್ದ ಐಪಿಎಲ್ ಪಂದ್ಯವೇ ಅವರ ಕೊನೇ ಟಿ20 ಪಂದ್ಯ ಎನಿಸಿದೆ.
ಭಾರತೀಯ ಕ್ರಿಕೆಟ್‌ನ ಇಬ್ಬರು ಶ್ರೇಷ್ಠ ನಾಯಕರು ಒಬ್ಬರು ಅಂತಾರಾಷ್ಟ್ರೀಯ ಕ್ರಿಕೆಟ್ ಹಾಗೂ ಟೆಸ್ಟ್‌ನಲ್ಲಿ, ಮತ್ತೊಬ್ಬರು ಐಪಿಎಲ್‌ನಲ್ಲಿ ತಮ್ಮದೇ ಆದ ಭವ್ಯ ವಿದಾಯದ ಕನಸು ಕಂಡಿದ್ದರು. ಆದರೆ ವಿಧಿಯ ಲಿಖಿತ ಬೇರೆಯದೇ ಆಗಿತ್ತು. ಮೈದಾನದಲ್ಲಿ ಫೇರ್‌ವೆಲ್ ಪಂದ್ಯವಿಲ್ಲದಿದ್ದರೂ, ಈ ಇಬ್ಬರು ದಿಗ್ಗಜರು ಭಾರತೀಯ ಕ್ರಿಕೆಟ್‌ಗೆ ನೀಡಿರುವ ಕೊಡುಗೆ ಮತ್ತು ಸೃಷ್ಟಿಸಿರುವ ನೆನಪುಗಳು ಎಂದೆಂದಿಗೂ ಅಜರಾಮರ.










