ಐಪಿಎಲ್ 2027ರ ರಿಟೆನ್ಷನ್ ಪ್ರಕಟಣೆಗೂ ಮುನ್ನ ಮೊಹಮ್ಮದ್ ಶಮಿ ಲಖನೌ ತೊರೆದು ರಾಜಸ್ಥಾನ್ ರಾಯಲ್ಸ್ ಸೇರಿದ್ದಾರೆ. ಸ್ಯಾಮ್ ಕರನ್ ಲಖನೌ ತಂಡದ ಪಾಲಾಗಿದ್ದು, ಈ ಟ್ರೇಡ್ ಕುತೂಹಲ ಮೂಡಿಸಿದೆ.

ಬೆಂಗಳೂರು(ನ.17): ಐಪಿಎಲ್‌ 2027ರ ಆಟಗಾರರ ಉಳಿಸಿಕೊಳ್ಳುವಿಕೆ (Retention) ಪ್ರಕಟಣೆಗೂ ಮುನ್ನ ರಾಜಸ್ಥಾನ್‌ ರಾಯಲ್ಸ್‌ ಮತ್ತು ಲಖನೌ ಸೂಪರ್‌ ಜೈಂಟ್ಸ್‌ ತಂಡಗಳ ನಡುವೆ ಮಹತ್ವದ ಆಟಗಾರರ ವಿನಿಮಯ ನಡೆದಿದೆ. ಭಾರತದ ಅನುಭವಿ ವೇಗಿ ಮೊಹಮ್ಮದ್‌ ಶಮಿ ಲಖನೌ ತಂಡವನ್ನು ತೊರೆದು ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಸೇರಿಕೊಂಡಿದ್ದಾರೆ. ಇಂಗ್ಲೆಂಡ್‌ ಆಲ್‌ರೌಂಡರ್‌ ಸ್ಯಾಮ್‌ ಕರನ್‌ ಲಖನೌ ತಂಡದ ಪಾಲಾಗಿದ್ದಾರೆ. ಎಡಗೈ ಸ್ಪಿನ್ನರ್‌ ಎಂ. ಸಿದ್ಧಾರ್ಥ್‌ ಕೂಡ ರಾಜಸ್ಥಾನ್‌ ತಂಡಕ್ಕೆ ವರ್ಗಾವಣೆಯಾಗಿದ್ದಾರೆ.

ಮೂರು ಆಟಗಾರರ ಈ ಟ್ರೇಡ್‌ನಲ್ಲಿ ಶಮಿ ₹8 ಕೋಟಿ ಮೊತ್ತಕ್ಕೆ ರಾಜಸ್ಥಾನ್‌ ರಾಯಲ್ಸ್‌ ಸೇರಿದ್ದಾರೆ. ಲಖನೌ ತಂಡವು ಅವರನ್ನು ಈ ಹಿಂದೆ ₹10 ಕೋಟಿ ಮೊತ್ತಕ್ಕೆ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಇದೀಗ ಎರಡು ಕೋಟಿ ರೂಪಾಯಿ ಕಡಿಮೆ ಮೊತ್ತಕ್ಕೆ ಅವರು ಹೊಸ ತಂಡವನ್ನು ಸೇರಿದ್ದಾರೆ. ಸಿದ್ಧಾರ್ಥ್‌ ತಮ್ಮ ಹಳೆಯ ₹75 ಲಕ್ಷ ಮೊತ್ತದಲ್ಲೇ ರಾಜಸ್ಥಾನ್‌ ತಂಡದ ಪರ ಆಡಲಿದ್ದಾರೆ. ಇತ್ತ ಸ್ಯಾಮ್‌ ಕರನ್‌ ₹2.4 ಕೋಟಿ ಮೊತ್ತಕ್ಕೆ ಲಖನೌ ತಂಡವನ್ನು ಸೇರಿದ್ದಾರೆ.

ಏಳನೇ ಐಪಿಎಲ್‌ ಫ್ರಾಂಚೈಸಿ ಸೇರಿದ ಮೊಹಮ್ಮದ್‌ ಶಮಿ..!

35 ವರ್ಷದ ಮೊಹಮ್ಮದ್‌ ಶಮಿ ತಮ್ಮ ಐಪಿಎಲ್‌ ವೃತ್ತಿಜೀವನದಲ್ಲಿ ಇದೀಗ ಏಳನೇ ಫ್ರಾಂಚೈಸಿಯ ಪರ ಆಡಲಿದ್ದಾರೆ. ಈ ಹಿಂದೆ ಕೋಲ್ಕತಾ ನೈಟ್‌ ರೈಡರ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌, ಪಂಜಾಬ್‌ ಕಿಂಗ್ಸ್‌, ಗುಜರಾತ್‌ ಟೈಟನ್ಸ್‌, ಸನ್‌ರೈಸರ್ಸ್‌ ಹೈದರಾಬಾದ್‌ ಮತ್ತು ಲಖನೌ ಸೂಪರ್‌ ಜೈಂಟ್ಸ್‌ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಐಪಿಎಲ್‌ನಲ್ಲಿ ಇದುವರೆಗೆ 132 ಪಂದ್ಯಗಳನ್ನು ಆಡಿರುವ ಶಮಿ 145 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಹೊಸ ಚೆಂಡಿನಲ್ಲಿ ಸ್ವಿಂಗ್‌ ಮೂಲಕ ಎದುರಾಳಿ ಬ್ಯಾಟರ್‌ಗಳಿಗೆ ಸವಾಲೊಡ್ಡುವ ಸಾಮರ್ಥ್ಯ ಹೊಂದಿರುವ ಅವರು, ರಾಜಸ್ಥಾನ್‌ ರಾಯಲ್ಸ್‌ ತಂಡದ ವೇಗದ ಬೌಲಿಂಗ್‌ ವಿಭಾಗಕ್ಕೆ ಬಲ ತುಂಬುವ ನಿರೀಕ್ಷೆಯಿದೆ.

ಎಂ. ಸಿದ್ಧಾರ್ಥ್‌ ಕೂಡ ರಾಜಸ್ಥಾನ್‌ ತಂಡಕ್ಕೆ

ಈ ಟ್ರೇಡ್‌ನಲ್ಲಿ ಎಡಗೈ ಸ್ಪಿನ್ನರ್‌ ಮನಿಮಾರನ್‌ ಸಿದ್ಧಾರ್ಥ್‌ ಕೂಡ ಲಖನೌ ತಂಡದಿಂದ ರಾಜಸ್ಥಾನ್‌ ರಾಯಲ್ಸ್‌ಗೆ ವರ್ಗಾವಣೆಯಾಗಿದ್ದಾರೆ. ₹75 ಲಕ್ಷ ಮೂಲ ಒಪ್ಪಂದದ ಮೊತ್ತದಲ್ಲೇ ಅವರು ಹೊಸ ತಂಡವನ್ನು ಸೇರಲಿದ್ದಾರೆ. ತಮ್ಮ ನಿಖರ ಎಸೆತಗಳು ಮತ್ತು ನಿಯಂತ್ರಿತ ಬೌಲಿಂಗ್‌ಗೆ ಹೆಸರಾಗಿರುವ ಸಿದ್ಧಾರ್ಥ್‌, ರಾಜಸ್ಥಾನ್‌ ತಂಡಕ್ಕೆ ಹೆಚ್ಚುವರಿ ಸ್ಪಿನ್‌ ಆಯ್ಕೆಯಾಗಲಿದ್ದಾರೆ.

ಇದಕ್ಕೆ ಪ್ರತಿಯಾಗಿ ಇಂಗ್ಲೆಂಡ್‌ ಆಲ್‌ರೌಂಡರ್‌ ಸ್ಯಾಮ್‌ ಕರನ್‌ ಲಖನೌ ಸೂಪರ್‌ ಜೈಂಟ್ಸ್‌ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಎರಡರಲ್ಲೂ ಕೊಡುಗೆ ನೀಡಬಲ್ಲ ಕರನ್‌, ಲಖನೌ ತಂಡಕ್ಕೆ ಉತ್ತಮ ಆಯ್ಕೆಯಾಗಲಿದ್ದಾರೆ.

ಐಪಿಎಲ್‌ 2026ರಲ್ಲಿ ಹೊರಗುಳಿದಿದ್ದ ಸ್ಯಾಮ್‌ ಕರನ್‌

ಸ್ಯಾಮ್‌ ಕರನ್‌ ಅವರ ತಂಡ ಬದಲಾವಣೆಯ ಹಿಂದೆ ಐಪಿಎಲ್‌ 2026ರ ವಿವಾದವೂ ಇದೆ. ರಾಜಸ್ಥಾನ್‌ ರಾಯಲ್ಸ್‌ ತಂಡವು ಅವರನ್ನು ₹2.4 ಕೋಟಿಗೆ ತನ್ನ ತಂಡಕ್ಕೆ ಸೇರಿಸಿಕೊಂಡಿತ್ತು. ಆದರೆ ತೊಡೆಸಂದು ಗಾಯದ ಕಾರಣ ನೀಡಿ ಅವರು ಇಡೀ ಐಪಿಎಲ್‌ ಆವೃತ್ತಿಯಿಂದ ಹಿಂದೆ ಸರಿದಿದ್ದರು. ಅವರ ಬದಲಿಯಾಗಿ ಶ್ರೀಲಂಕಾದ ದಸುನ್‌ ಶನಕ ಅವರನ್ನು ರಾಜಸ್ಥಾನ್‌ ತಂಡಕ್ಕೆ ಕರೆತರಲಾಗಿತ್ತು.

ಆದರೆ ಐಪಿಎಲ್‌ ಆವೃತ್ತಿ ಮುಗಿಯುವ ಮೊದಲೇ ಕರನ್‌ ಇಂಗ್ಲೆಂಡ್‌ನ ಸರ್ರೆ ತಂಡದ ಪರ ವೈಟಾಲಿಟಿ ಬ್ಲಾಸ್ಟ್‌ ಟೂರ್ನಿಯಲ್ಲಿ ಆಡಲು ಮರಳಿದ್ದು ಚರ್ಚೆಗೆ ಕಾರಣವಾಗಿತ್ತು. ಈ ಬಗ್ಗೆ ರಾಜಸ್ಥಾನ್‌ ತಂಡದ ಆಗಿನ ಮುಖ್ಯ ಕೋಚ್‌ ಕುಮಾರ್‌ ಸಂಗಕ್ಕಾರ ಅಸಮಾಧಾನ ವ್ಯಕ್ತಪಡಿಸಿದ್ದರು. “ಸ್ಯಾಮ್‌ ಕರನ್‌ ಅವರಿಗೆ ಇಡೀ ಋತುವಿನಲ್ಲಿ ಆಡಲು ಸಾಧ್ಯವಾಗದಂತಹ ಗಾಯವಾಗಿದೆ ಎಂದು ನಮಗೆ ತಿಳಿಸಲಾಗಿತ್ತು. ಆದರೆ ಅವರು ಸರ್ರೆ ಪರ ಎರಡು ಅಥವಾ ಮೂರು ಪಂದ್ಯಗಳನ್ನು ಆಡಿದ್ದನ್ನು ನಾನು ನೋಡಿದೆ. ಅವರು ನಮ್ಮ ತಂಡದ ಪರ ಆಡಿದ್ದರೆ ನಮಗೆ ಸಂತೋಷವಾಗುತ್ತಿತ್ತು. ಈ ಬೆಳವಣಿಗೆ ನಿರಾಶೆ ಮೂಡಿಸಿತು” ಎಂದು ಐಪಿಎಲ್‌ 2026ರಿಂದ ರಾಜಸ್ಥಾನ್‌ ಹೊರಬಿದ್ದ ಬಳಿಕ ಸಂಗಕ್ಕಾರ ಹೇಳಿದ್ದರು.

ಐಪಿಎಲ್‌ನಲ್ಲಿ ಕರನ್‌ ಇದುವರೆಗೆ 997 ರನ್‌ ಗಳಿಸಿದ್ದು, 59 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರ ಆಲ್‌ರೌಂಡ್‌ ಸಾಮರ್ಥ್ಯ ಲಖನೌ ತಂಡಕ್ಕೆ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಎರಡರಲ್ಲೂ ಹೆಚ್ಚಿನ ಆಯ್ಕೆಗಳನ್ನು ಒದಗಿಸಲಿದೆ.

Scroll to load tweet…

ರಿಟೆನ್ಷನ್‌ ಪ್ರಕಟಣೆ ಮೇಲೆ ಎಲ್ಲರ ಕಣ್ಣು

ಐಪಿಎಲ್‌ 2027ರ ರಿಟೆನ್ಷನ್‌ ಪ್ರಕಟಣೆಗೂ ಮುನ್ನ ನಡೆದಿರುವ ಈ ಮೂರು ಆಟಗಾರರ ಟ್ರೇಡ್‌ ಎರಡೂ ತಂಡಗಳ ಸಂಯೋಜನೆಯಲ್ಲಿ ಬದಲಾವಣೆ ತರಲಿದೆ. ಶಮಿ ಸೇರ್ಪಡೆಯಿಂದ ರಾಜಸ್ಥಾನ್‌ ತಂಡದ ವೇಗದ ಬೌಲಿಂಗ್‌ ವಿಭಾಗ ಬಲಿಷ್ಠವಾಗಲಿದ್ದರೆ, ಕರನ್‌ ಆಗಮನದಿಂದ ಲಖನೌ ತಂಡದ ಆಲ್‌ರೌಂಡ್‌ ವಿಭಾಗಕ್ಕೆ ಹೆಚ್ಚಿನ ಶಕ್ತಿ ಸಿಗಲಿದೆ.

ಇದೀಗ ನವೆಂಬರ್‌ 17ರ ರಿಟೆನ್ಷನ್‌ ಗಡುವಿನ ಹಿನ್ನೆಲೆಯಲ್ಲಿ ಯಾವ ಆಟಗಾರರನ್ನು ಉಳಿಸಿಕೊಳ್ಳಲಾಗುತ್ತದೆ, ಯಾರನ್ನು ಬಿಡುಗಡೆ ಮಾಡಲಾಗುತ್ತದೆ ಎಂಬ ಕುತೂಹಲ ಹೆಚ್ಚಾಗಿದೆ. ಮುಂಬರುವ ಹರಾಜಿಗೂ ಮುನ್ನ ತಂಡಗಳ ಬಲಾಬಲ ಹೇಗಿರಲಿದೆ ಎಂಬುದರ ಮೇಲೆ ಕ್ರಿಕೆಟ್‌ ಅಭಿಮಾನಿಗಳ ಗಮನ ನೆಟ್ಟಿದೆ.