ಚೆನ್ನೈ ಸೂಪರ್ ಕಿಂಗ್ಸ್ ಒಡತಿ ರೂಪಾ ಗುರುನಾಥ್ ಅವರು ಎಂಎಸ್ ಧೋನಿ ಐಪಿಎಲ್ ನಿವೃತ್ತಿ ನಿರ್ಧಾರವನ್ನು ತಿಳಿಸಿದ ಭಾವನಾತ್ಮಕ ಕ್ಷಣವನ್ನು ಹಂಚಿಕೊಂಡಿದ್ದಾರೆ. ವಿಡಿಯೋ ಕಾಲ್‌ನಲ್ಲಿ ಧೋನಿ ನಿವೃತ್ತಿ ಘೋಷಿಸಿದಾಗ ನಡೆದ ರೋಚಕ ಘಟನೆ ಮತ್ತು ಮೆಂಟರ್ ಆಗಿ ಅವರ ಹೊಸ ಪಯಣದ ಬಗ್ಗೆ ವಿವರಿಸಿದ್ದಾರೆ.

ಬೆಂಗಳೂರು (ನ.17): ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಮಾಲೀಕರಾಗಿರುವ ರೂಪಾ ಗುರುನಾಥ್ (Rupa Gurunath) ಅವರು, 'ಕ್ಯಾಪ್ಟನ್ ಕೂಲ್' ಮಹೇಂದ್ರ ಸಿಂಗ್ ಧೋನಿ ತಮ್ಮ ಐಪಿಎಲ್ ನಿವೃತ್ತಿಯ ನಿರ್ಧಾರವನ್ನು ಫ್ರಾಂಚೈಸಿಗೆ ಹೇಗೆ ತಿಳಿಸಿದರು ಎಂಬ ಭಾವನಾತ್ಮಕ ಕ್ಷಣವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಮಂಗಳವಾರ ಐಪಿಎಲ್‌ನಿಂದ ಎಂಎಸ್‌ ಧೋನಿ ಅಧಿಕೃತವಾಗಿ ನಿವೃತ್ತಿಯಾಗಿದ್ದು, ಟೀಮ್‌ ಮೆಂಟ್‌ ಆಗಿ ಮುಂದುವರಿಯಲಿದ್ದಾರೆ. ಆದರೆ, ಕಳೆದ ಶನಿವಾರವೇ ಧೋನಿ ತಮ್ಮ ಟೀಮ್‌ಗೆ ಈ ನಿರ್ಧಾರ ತಿಳಿಸಿದ್ದರು.

ಶನಿವಾರ ನಡೆದ ವಿಡಿಯೋ ಕಾಲ್‌ನಲ್ಲಿ ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್ ತಂಡದಿಂದ ರಿಲೀಸ್‌ ಮಾಡುವ ಆಟಗಾರರ ಪಟ್ಟಿ ಓದುತ್ತಿದ್ದರು. ಎಲ್ಲಾ ಹೆಸರನ್ನು ಓದಿದ ಬಳಿಕ ಕೊನೆಯಲ್ಲಿ ಅತ್ಯಂತ ಶಾಂತವಾಗಿ ಧೋನಿ "ಬಹುಶಃ ನೀವು ನನ್ನ ಹೆಸರನ್ನೂ ಅದರಲ್ಲಿ ಸೇರಿಸಬೇಕು" ಎಂದು ಹೇಳುವ ಮೂಲಕ ತಮ್ಮ ವಿದಾಯದ ನಿರ್ಧಾರ ತಿಳಿಸಿದ್ದರು. ಅಚ್ಚರಿಯ ಸಂಗತಿಯೆಂದರೆ, ಧೋನಿ ಆ ಮಾತನ್ನು ಹೇಳಿದ ಮರುಕ್ಷಣವೇ ವಿಡಿಯೋ ಕಾಲ್ ಇದ್ದಕ್ಕಿದ್ದಂತೆ ಕಟ್ (Disconnect) ಆಗಿತ್ತು ಎಂಬುದನ್ನು ರೂಪಾ ಗುರುನಾಥ್ ನೆನಪಿಸಿಕೊಂಡಿದ್ದಾರೆ.

ಇಂಟರ್‌ನೆಟ್‌ಗೂ ನಿಮ್ಮ ನಿವೃತ್ತಿ ತಡೆದುಕೊಳ್ಳಲು ಸಾಧ್ಯವಾಗಲಿಲ್ಲ

ಅಭಿಮಾನಿಗಳನ್ನು ಉದ್ದೇಶಿಸಿ ಭಾವುಕರಾಗಿ ಮಾತನಾಡಿದ ರೂಪಾ ಗುರುನಾಥ್, ಶನಿವಾರದ ನಡೆದ ಟೀಮ್‌ ವಿಡಿಯೋ ಕಾಲ್‌ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಚೆನ್ನೈ ಸೂಪರ್‌ ಕಿಂಗ್ಸ್‌ ಅಧೀಕೃತವಾಗಿ ಪ್ರಕಟಿಸಿರುವ ವಿಡಿಯೋದಲ್ಲಿ ಮಾತನಾಡಿರುವ ರೂಪಾ ಗುರುನಾಥ್‌, 'ಕಳೆದ ಎರಡು ದಶಕಗಳಿಂದ ನೀವು ಈ ತಂಡದ ಮೇಲೆ ತೋರಿದ ಪ್ರೀತಿ ಮತ್ತು ವಾತ್ಸಲ್ಯಕ್ಕೆ ಧನ್ಯವಾದ ಹೇಳುವ ಮೂಲಕ ನಾನು ಮಾತು ಆರಂಭಿಸುತ್ತೇನೆ. ಕೆಲವು ತಿಂಗಳ ಹಿಂದೆ ನಾನು ಧೋನಿ ಅವರನ್ನು ಭೇಟಿಯಾದಾಗ, ಮುಂಬರುವ ಸೀಸನ್‌ನಲ್ಲಿ ಆಡಲು ಸಾಧ್ಯವಾಗುತ್ತದೆಯೇ ಎಂಬ ಬಗ್ಗೆ ಖಚಿತವಿಲ್ಲ ಎಂದು ಹೇಳಿದ್ದರು. ಶನಿವಾರ ನಾವು ತಂಡದಿಂದ ರಿಲೀಸ್‌ ಮಾಡುವ ಆಟಗಾರರ ಕುರಿತು ಕಾಲ್‌ನಲ್ಲಿ ಚರ್ಚಿಸುತ್ತಿದ್ದೆವು. ಮುಂದಿನ ಸೀಸನ್‌ನ ತಂತ್ರಗಾರಿಕೆ, ಯಾರನ್ನು ಆಯ್ಕೆ ಮಾಡಬೇಕು ಎಂಬ ಬಗ್ಗೆ ಸುದೀರ್ಘ ಕ್ರಿಕೆಟ್ ಚರ್ಚೆ ನಡೆಸಿದ್ದೆವು. ಕರೆಯ ಕೊನೆಯಲ್ಲಿ ಕಾಶಿ ಅವರು ರಿಲೀಸ್ ಮಾಡುವ ಆಟಗಾರರ ಪಟ್ಟಿಯನ್ನು ಓದುತ್ತಿದ್ದರು. ಎಲ್ಲಾ ಹೆಸರನ್ನು ಓದಿದ ಬಳಿಕ

ಕೊನೆಯಲ್ಲಿ ಅತ್ಯಂತ ಮೃದುವಾಗಿ ಧೋನಿ, 'ಬಹುಶಃ ನೀವು ನನ್ನ ಹೆಸರನ್ನೂ ಅದರಲ್ಲಿ ಸೇರಿಸಬೇಕು' ಎಂದು ಧೋನಿ ಹೇಳೀದ್ದರು ಎಂದು ನೆನಪಿಸಿಕೊಂಡಿದ್ದಾರೆ.

"ನೀವು ನಂಬೋದಿಲ್ಲ, ಆ ಕ್ಷಣದಲ್ಲೇ ವಿಡಿಯೋ ಕಾಲ್ ಸ್ಥಗಿತಗೊಂಡಿತು. ನಾನು ಮತ್ತೆ ಅವರಿಗೆ ಕರೆ ಮಾಡಿ, 'ನೀವು ಮುಂದಿನ ಸೀಸನ್ ಆಡುವುದಿಲ್ಲ ಎಂಬುದನ್ನು ಇಂಟರ್‌ನೆಟ್ ಕೂಡ ತಡೆದುಕೊಳ್ಳಲು ಸಾಧ್ಯವಾಗಲಿಲ್ಲ ನೋಡಿ' ಎಂದು ಹೇಳಿದೆ" ಎಂದು ರೂಪಾ ಗುರುನಾಥ್ ಆ ಭಾವುಕ ಸನ್ನಿವೇಶವನ್ನು ವಿವರಿಸಿದ್ದಾರೆ.

2008ರ ಹರಾಜಿನ ನಿರ್ಧಾರ ಮತ್ತು 'ಥಲಾ' ಪಯಣದ ನೆನಪು

2008ರ ಚೊಚ್ಚಲ ಹರಾಜಿನ ದಿನಗಳನ್ನು ನೆನೆದ ರೂಪಾ, "ನನ್ನ ತಂದೆ (ಎನ್. ಶ್ರೀನಿವಾಸನ್) ಈ ತಂಡವನ್ನು ಖರೀದಿಸಲು ಬಯಸಿದಾಗ ಅವರಿಗೆ ಸ್ಪಷ್ಟವಾಗಿದ್ದ ಒಂದೇ ಒಂದು ವಿಷಯವೆಂದರೆ. ಎಂಎಸ್ ಧೋನಿ ಈ ತಂಡದ ನಾಯಕರಾಗಿರಬೇಕು ಎಂಬುದು. ಅದು ದೊಡ್ಡ ನಿರ್ಧಾರವಾಗಿತ್ತು ಮತ್ತು ನಾವು ತೆಗೆದುಕೊಂಡ ಅತ್ಯುತ್ತಮ ನಿರ್ಧಾರಗಳಲ್ಲಿ ಒಂದಾಗಿತ್ತು. ಕಳೆದ 20 ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಎಂಎಸ್ ಧೋನಿ ಏಳು-ಬೀಳುಗಳ ನಡುವೆ ಹೆಗಲಿಗೆ ಹೆಗಲು ಕೊಟ್ಟು ನಡೆದಿವೆ" ಎಂದರು.

ಧೋನಿ ನಿವೃತ್ತಿ ಹೇಳಿದ ದಿನ ಕಷ್ಟವಾಗಿತ್ತು.ಇಂತಹ ಕ್ಷಣಕ್ಕೆ ಯಾರೂ ಸಿದ್ಧರಾಗಿರಲು ಸಾಧ್ಯವಿಲ್ಲ. ಎಂಎಸ್ ಧೋನಿ ಎಂತಹ ವ್ಯಕ್ತಿ ಎಂದರೆ, ತಂಡಕ್ಕೆ ತಮ್ಮ ಶೇ. 200ರಷ್ಟು ಕೊಡುಗೆ ನೀಡಲು ಸಾಧ್ಯವಾಗದಿದ್ದರೆ ಅವರು ಆಡುವುದಿಲ್ಲ. ತಂಡಕ್ಕೆ ತಾವು ಹೊರೆಯಾಗಬಾರದು ಎಂದು ಬಯಸುವವರು. ತಮ್ಮ ಅತ್ಯುತ್ತಮ ಆಟ ನೀಡಲು ಸಾಧ್ಯವಾಗದಿದ್ದಾಗ ಅವರು ಹಿಂದೆ ಸರಿದಿದ್ದಾರೆ" ಎಂದು ರೂಪಾ ಶ್ಲಾಘಿಸಿದರು.

ಹಳದಿ ಜೆರ್ಸಿಯ ಮ್ಯಾಜಿಕ್ ಮತ್ತು 'ಟೀಮ್ ಮೆಂಟರ್' ಆಗಿ ಹೊಸ ಅವತಾರ

ಮೈದಾನದಲ್ಲಿ ಧೋನಿ ಅವರ ಆಟವನ್ನು ಮಿಸ್ ಮಾಡಿಕೊಳ್ಳುವ ಬಗ್ಗೆ ಮಾತನಾಡಿದ ಸಿಎಸ್‌ಕೆ ಒಡತಿ, ಹಳದಿ ಜೆರ್ಸಿಯಲ್ಲಿ ಅವರನ್ನು ಮೈದಾನದಲ್ಲಿ ಆಡುವುದನ್ನು ಇನ್ನು ನೋಡುವುದಿಲ್ಲ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಆ ಮಿಂಚಿನ ಸ್ಟಂಪಿಂಗ್‌ಗಳು, ಹೆಲಿಕಾಪ್ಟರ್ ಶಾಟ್‌ಗಳು, ಕೇವಲ ಒಂದು ಬೆರಳನ್ನು ಅಲ್ಲಾಡಿಸಿ ಫೀಲ್ಡಿಂಗ್ ಬದಲಾಯಿಸಿ ಮರುಕ್ಷಣವೇ ಕ್ಯಾಚ್ ಹಿಡಿಯುವಂತೆ ಮಾಡುತ್ತಿದ್ದ ಆ ಶಾಂತ ರೀತಿ..ಇಡೀ ಪಂದ್ಯದ ದಿಕ್ಕನ್ನೇ ಬದಲಿಸುತ್ತಿತ್ತು. ಅದನ್ನು ಮತ್ತೆ ನೋಡುವುದಿಲ್ಲ ಎಂದು ಯೋಚಿಸುವುದೇ ಕಷ್ಟ" ಎಂದು ಭಾವುಕರಾಗಿದ್ದಾರೆ.

2027ರಲ್ಲಿ ಚೆಪಾಕ್‌ನಲ್ಲಿ ಹೊಸ ರೂಪದಲ್ಲಿ ದರ್ಶನ

ಈಗ ಹೊಸ ಯುಗ ಆರಂಭವಾಗಿದೆ. ನಾವು ಈಗ ಎಂಎಸ್ ಧೋನಿ ಅವರನ್ನು ನಮ್ಮ ಟೀಮ್ ಮೆಂಟರ್ (Team Mentor) ಆಗಿ ಸ್ವಾಗತಿಸುತ್ತಿದ್ದೇವೆ. ನಮ್ಮದು ಪರಿವರ್ತನೆಯ ಹಂತದಲ್ಲಿರುವ ಬಹಳ ಯುವ ತಂಡ. ಮೈದಾನದ ಒಳಗೆ ಮತ್ತು ಹೊರಗೆ ಅವರಿಂದ ಕಲಿಯುವುದು ಸಾಕಷ್ಟಿದೆ. ಮೊದಲ ದಿನದಿಂದಲೂ ಎಂಎಸ್ ನಮ್ಮೊಂದಿಗಿದ್ದಾರೆ ಮತ್ತು ಯಾವಾಗಲೂ 'ಸೂಪರ್ ಕಿಂಗ್' ಆಗಿಯೇ ಇರುತ್ತಾರೆ. ಟೀಮ್ ಮೆಂಟರ್ ಎಂಬ ಹೊಸ ಅವತಾರದಲ್ಲಿ ಅವರನ್ನು ಸ್ವಾಗತಿಸಲು ನಾನು ಎದುರು ನೋಡುತ್ತಿದ್ದೇನೆ. 2027ರಲ್ಲಿ ಚೆಪಾಕ್‌ನಲ್ಲಿ ಸಿಗೋಣ" ಎಂದು ರೂಪಾ ಗುರುನಾಥ್ ಮಾತು ಮುಗಿಸಿದ್ದಾರೆ.

Scroll to load tweet…