* ಅರ್‌ಸಿಬಿ ತಂಡದ ಐಪಿಎಲ್ ಟ್ರೋಫಿ ಕನಸು ಮತ್ತೊಮ್ಮೆ ಭಗ್ನ* ಮಹತ್ವದ ಪಂದ್ಯದಲ್ಲಿ ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದ ವಿರಾಟ್ ಕೊಹ್ಲಿ* ಕೊಹ್ಲಿ ಬ್ಯಾಟಿಂಗ್ ಫಾರ್ಮ್ ವಿಶ್ಲೇಷಿಸಿದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್
ನವದೆಹಲಿ(ಮೇ.28); 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ (Rajasthan Royals) ವಿರುದ್ದ ಫಾಫ್ ಡು ಪ್ಲೆಸಿಸ್ ಜತೆಗೆ ಆರಂಭಿಕನಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ (Virat Kohli) ಮೇಲೆ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi) ನಡೆದ ಪಂದ್ಯದಲ್ಲಿ ಟ್ರೆಂಟ್ ಬೌಲ್ಟ್ ಎಸೆದ ಮೊದಲ ಓವರ್‌ನಲ್ಲೇ ವಿರಾಟ್ ಕೊಹ್ಲಿ ಡೀಪ್‌ಸ್ಕ್ವೇರ್‌ನತ್ತ ಸಿಕ್ಸರ್ ಬಾರಿಸುತ್ತಿದ್ದಂತೆಯೇ ಅಭಿಮಾನಿಗಳು ಹುಚ್ಚೆದ್ದು ಕುಣಿದರು. ಆದರೆ ಈ ಉತ್ಸಾಹ ಹೆಚ್ಚು ಹೊತ್ತು ಉಳಿಯಲು ಕರ್ನಾಟಕದ ನೀಳಕಾಯದ ವೇಗಿ ಪ್ರಸಿದ್ದ್ ಕೃಷ್ಣ ಅವಕಾಶ ನೀಡಲಿಲ್ಲ.
ಹೌದು, ಕೇವಲ 7 ರನ್ ಗಳಿಸಿದ್ದ 33 ವರ್ಷದ ವಿರಾಟ್ ಕೊಹ್ಲಿಯನ್ನು ಪೆವಿಲಿಯನ್ನಿಗಟ್ಟುವಲ್ಲಿ ರಾಜಸ್ಥಾನ ರಾಯಲ್ಸ್ ವೇಗಿ ಪ್ರಸಿದ್ಧ್ ಕೃಷ್ಣ ಯಶಸ್ವಿಯಾದರು. ವಿಕೆಟ್‌ನಿಂದ ಹೊರಹೋಗುತ್ತಿದ್ದ ಚೆಂಡನ್ನು ಕೆಣಕಲು ಹೋಗಿ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್‌ಗೆ ಸುಲಭ ಕ್ಯಾಚ್ ನೀಡಿ ವಿರಾಟ್ ಕೊಹ್ಲಿ ಪೆವಿಲಿಯನ್ ಸೇರಿದರು. ಇದೀಗ ರಾಜಸ್ಥಾನ ರಾಯಲ್ಸ್ ಎದುರು ಆರ್‌ಸಿಬಿ ಸೋಲು ಕಾಣುತ್ತಿದ್ದಂತೆಯೇ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರಾದ ವಿರೇಂದ್ರ ಸೆಹ್ವಾಗ್ ಹಾಗೂ ಪಾರ್ಥೀವ್ ಪಟೇಲ್ ವಿಸ್ತೃತ ವಿಶ್ಲೇಷಣೆ ಮಾಡಿದ್ದಾರೆ. ಈ ವೇಳೆ ಡೆಲ್ಲಿ ಮೂಲದ ವಿರೇಂದ್ರ ಸೆಹ್ವಾಗ್, ವಿರಾಟ್ ಕೊಹ್ಲಿ ತಮ್ಮ ಕ್ರಿಕೆಟ್ ಜೀವನದಲ್ಲಿ ಇದುವರೆಗೂ ಮಾಡಿದ ಒಟ್ಟು ಮಿಸ್ಟೇಕ್ಸ್‌ಗಿಂತ ಹೆಚ್ಚಿನ ತಪ್ಪನ್ನು ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯೊಂದರಲ್ಲೇ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಫಾರ್ಮ್‌ನಲ್ಲಿಲ್ಲದಿದ್ದಾಗ, ನೀವು ಸುಮ್ಮನೆ ಚೆಂಡನ್ನು ಮಧ್ಯ ಬ್ಯಾಟ್‌ನಿಂದ ಆಡುವ ಮೂಲಕ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕು. ಮೊದಲ ಓವರ್‌ನಲ್ಲಿ ಕೊಹ್ಲಿ ಕೆಲವು ಚೆಂಡನ್ನು ಮುಟ್ಟಲು ಹೋಗಲಿಲ್ಲ. ಯಾವಾಗ ನೀವು ಫಾರ್ಮ್‌ನಲ್ಲಿರುವುದಿಲ್ಲವೋ ಆಗ ಹೀಗಾಗುತ್ತದೆ. ಇನ್ನು ಕೆಲವೊಮ್ಮೆ ಬ್ಯಾಟ್ ಬೀಸಲು ಮುಂದಾದಾಗ ಅದೃಷ್ಟ ಕೂಡಾ ಕೈ ಹಿಡಿದಾಗ, ಚೆಂಡು ಬ್ಯಾಟಿನ ಅಂಚನ್ನು ತಗುಲದೇ ವಿಕೆಟ್ ಕೀಪರ್ ಕೈ ಸೇರುತ್ತದೆ. ನಾನು ಈ ಹಿಂದೆ ನೋಡುತ್ತಿದ್ದ ವಿರಾಟ್ ಕೊಹ್ಲಿಯ ಆಟ ಇದಲ್ಲ ಎಂದು ವಿರೇಂದ್ರ ಸೆಹ್ವಾಗ್ (Virendra Sehwag), ಕ್ರಿಕೆಟ್ ವೆಬ್‌ಸೈಟ್ ಕ್ರಿಕ್‌ಬಜ್‌ನಲ್ಲಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
IPL 2022: RCB ಸೋಲಿನ ನಡುವೆ ಕಚಗುಳಿಯಿಡುವ ಬೆಸ್ಟ್ ಮೀಮ್ಸ್..!
ವಿರಾಟ್ ಕೊಹ್ಲಿ ಬಹುಶಃ ತಮ್ಮ ಕ್ರಿಕೆಟ್ ಜೀವನದಲ್ಲಿ ಇದುವರೆಗೂ ಮಾಡಿದ ಒಟ್ಟು ಮಿಸ್ಟೇಕ್ಸ್‌ಗಿಂತ ಹೆಚ್ಚಿನ ತಪ್ಪನ್ನು ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯೊಂದರಲ್ಲೇ ಮಾಡಿದ್ದಾರೆ. ನಿಮ್ಮ ಬ್ಯಾಟಿಂದ ರನ್ ಬರದೇ ಹೋದಾಗ, ಏನಾದರೂ ಹೊಸತನ್ನು ಮಾಡಲು ಹೋಗುತ್ತೀರ, ಆಗ ಮತ್ತೆ ವಿಭಿನ್ನ ರೀತಿಯಲ್ಲಿ ವಿಕೆಟ್ ಒಪ್ಪಿಸುತ್ತೀರ. ಈ ಬಾರಿಯಂತೂ ವಿರಾಟ್ ಕೊಹ್ಲಿ ಎಲ್ಲಾ ರೀತಿಯಲ್ಲೂ ವಿಕೆಟ್ ಒಪ್ಪಿಸಿದ್ದಾರೆ. ಆ ಚೆಂಡನ್ನು ವಿರಾಟ್ ಕೊಹ್ಲಿ ಸುಮ್ಮನೆ ಬಿಡಬೇಕಿತ್ತು ಇಲ್ಲವೇ ಬಿರುಸಾಗಿ ಬೀಸಬೇಕಿತ್ತು. ಇಂತಹ ಮಹತ್ವದ ಪಂದ್ಯದಲ್ಲಿ ಈ ರೀತಿ ವಿಕೆಟ್ ಒಪ್ಪಿಸುವ ಮೂಲಕ ಅವರು ತಮ್ಮ ಹಾಗೂ ಆರ್‌ಸಿಬಿ ಅಭಿಮಾನಿಗಳಲ್ಲಿ (RCB Fans) ನಿರಾಸೆಯನ್ನುಂಟು ಮಾಡಿದರು ಎಂದು ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.
2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ಒಟ್ಟು 16 ಪಂದ್ಯಗಳನ್ನಾಡಿ 22.73ರ ಬ್ಯಾಟಿಂಗ್ ಸರಾಸರಿಯಲ್ಲಿ 341 ರನ್ ಬಾರಿಸಿದ್ದಾರೆ. ವಿರಾಟ್ ಕೊಹ್ಲಿ ಈ ಬಾರಿ ನಾಯಕತ್ವದ ಜವಾಬ್ದಾರಿ ಕೆಳಗಿಟ್ಟು ಕಣಕ್ಕಿಳಿದಿದ್ದರು. ಹೀಗಿದ್ದೂ ಕೊಹ್ಲಿಯಿಂದ ದೊಡ್ಡ ಇನಿಂಗ್ಸ್‌ಗಳು ಮೂಡಿ ಬರಲಿಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಎದುರು 7 ವಿಕೆಟ್‌ಗಳ ಅಂತರದ ಹೀನಾಯ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದಿದೆ.
