* ಚೊಚ್ಚಲ ಐಪಿಎಲ್ ಟ್ರೋಫಿ ಗೆಲ್ಲುವ ಆರ್‌ಸಿಬಿ ಕನಸು ಭಗ್ನ* ಎರಡನೇ ಕ್ವಾಲಿಫೈಯರ್‌ನಲ್ಲಿ ರಾಜಸ್ಥಾನ ರಾಯಲ್ಸ್‌ಗೆ ಶರಣಾದ ಆರ್‌ಸಿಬಿ* ಅರ್‌ಸಿಬಿ ಸೋಲಿನ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಮೀಮ್ಸ್‌ಗಳು ವೈರಲ್
ಬೆಂಗಳೂರು(ಮೇ.28): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ (Rajasthan Royals) ಎದುರು 7 ವಿಕೆಟ್‌ಗಳ ಅಂತರದ ಹೀನಾಯ ಸೋಲು ಕಾಣವುದರೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಅಭಿಯಾನ ಅಧಿಕೃತವಾಗಿ ಅಂತ್ಯವಾಗಿದೆ. ಐಪಿಎಲ್ ಆರಂಭವಾಗಿ 15 ವರ್ಷಗಳು ಸವೆದರೂ ಆರ್‌ಸಿಬಿಗೆ ಕಪ್ ಗೆಲ್ಲುವ ಅದೃಷ್ಟದ ಕಾಲ ಕೂಡಿ ಬಂದಿಲ್ಲ. ಇದೆಲ್ಲದರ ನಡುವೆ ಆರ್‌ಸಿಬಿ ಅಭಿಮಾನಿಗಳು ತಂಡ ಸೊತರೂ ಸಹಾ ಬೆಂಗಳೂರು ತಂಡದ ಬೆನ್ನಿಗೆ ನಿಂತಿದ್ದಾರೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ಮೀಮ್ಸ್‌ಗಳು ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡುತ್ತಿದ್ದು, ಸೋಲಿನ ನೋವು ಮರೆಯುವಂತಹ ಕಚಗುಳಿಯನ್ನು ಇವು ನೀಡುತ್ತಿವೆ.
2022ನೇ ಸಾಲಿನ ಐಪಿಎಲ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ಎದುರು ಭರ್ಜರಿ ಗೆಲುವು ಸಾಧಿಸುವ ಮೂಲಕ ಎರಡನೇ ಕ್ವಾಲಿಫೈಯರ್‌ಗೆ ಅರ್ಹತೆಗಿಟ್ಟಿಸಿಕೊಂಡಿದ್ದ ಆರ್‌ಸಿಬಿ, ಬಲಿಷ್ಠ ರಾಜಸ್ಥಾನ ರಾಯಲ್ಸ್ ಎದುರು 7 ವಿಕೆಟ್‌ಗಳ ಅಂತರದ ಹೀನಾಯ ಸೋಲು ಕಂಡಿದೆ. ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೆ ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂ ಎನಿಸಿಕೊಂಡಿರುವ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ (Narendra Modi Stadium) ಆತಿಥ್ಯವನ್ನು ವಹಿಸಿತ್ತು. ಎರಡೂ ತಂಡಗಳ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿದ್ದ ಈ ಕಾದಾಟದಲ್ಲಿ ಆರ್‌ಸಿಬಿ (RCB) ಕನಸಿನ ಫೈನಲ್ ನಾಗಾಲೋಟಕ್ಕೆ ರಾಜಸ್ಥಾನ ರಾಯಲ್ಸ್ ತಂಡವು ಬ್ರೇಕ್ ಹಾಕುವಲ್ಲಿ ಯಶಸ್ವಿಯಾಗಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಇನಿಂಗ್ಸ್‌ನ ಎರಡನೇ ಓವರ್‌ನಲ್ಲೇ ವಿರಾಟ್ ಕೊಹ್ಲಿಯನ್ನು (Virat Kohli) ಬಲಿ ಪಡೆಯುವಲ್ಲಿ ನೀಳಕಾಯದ ವೇಗಿ ಪ್ರಸಿದ್ಧ್ ಕೃಷ್ಣ ಯಶಸ್ವಿಯಾದರು. ಇನ್ನು ಎರಡನೇ ವಿಕೆಟ್‌ಗೆ ನಾಯಕ ಫಾಫ್ ಡು ಪ್ಲೆಸಿಸ್ ಹಾಗೂ ಕಳೆದ ಪಂದ್ಯದ ಹೀರೋ ರಜತ್ ಪಾಟೀದಾರ್ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಲು ಯಶಸ್ವಿಯಾದರು. ಡು ಪ್ಲೆಸಿಸ್ 25 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ರಜತ್ ಪಾಟೀದಾರ್ 58 ರನ್ ಸಿಡಿಸಿ ತಂಡಕ್ಕೆ ಆಸರೆಯಾದರು. ಇನ್ನು ಗ್ಲೆನ್ ಮ್ಯಾಕ್ಸ್‌ವೆಲ್ ಸ್ಪೋಟಕ 24 ರನ್ ಸಿಡಿಸಿದರು. ಇದಾದ ಬಳಿಕ ಆರ್‌ಸಿಬಿ ದಿಢೀರ್ ಕುಸಿತ ಕಂಡಿತು. ಮಧ್ಯಮ ಕ್ರಮಾಂಕದಲ್ಲಿ ಮಹಿಪಾಲ್ ಲೋಮ್ರಾರ್ ಹಾಗೂ ದಿನೇಶ್ ಕಾರ್ತಿಕ್ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಆರ್‌ಸಿಬಿ ಇನಿಂಗ್ಸ್‌ನ ಕೊನೆಯ 3 ಓವರ್‌ಗಳಲ್ಲಿ ಕೇವಲ 18 ರನ್ ಗಳಿಸಲಷ್ಟೇ ಶಕ್ತವಾಯಿತು. ಅಂತಿಮವಾಗಿ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 157 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು.
ಐಪಿಎಲ್ ಕಪ್ ಕನಸು ಭಗ್ನ: ಗೆಲ್ಲಲಿ-ಸೋಲಲಿ RCB forever ಎಂದ ಫ್ಯಾನ್ಸ್..!
ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಯಶಸ್ವಿ ಜೈಸ್ವಾಲ್ ಹಾಗೂ ಜೋಸ್ ಬಟ್ಲರ್ ಮೊದಲ ವಿಕೆಟ್‌ಗೆ 61 ರನ್‌ಗಳ ಜತೆಯಾಟ ನಿಭಾಯಿಸಿದರು. ಜೈಸ್ವಾಲ್ 21 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಮತ್ತೋರ್ವ ಆರಂಭಿಕ ಬ್ಯಾಟರ್ ಜೋಸ್ ಬಟ್ಲರ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸುವ ಮೂಲಕ ಏಕಾಂಗಿಯಾಗಿ ರಾಯಲ್ಸ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಬಟ್ಲರ್ ಕೇವಲ 60 ಎಸೆತಗಳಲ್ಲಿ 10 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ ಅಜೇಯ 106 ರನ್ ಸಿಡಿಸುವ ಮೂಲಕ ರಾಜಸ್ಥಾನ ರಾಯಲ್ಸ್ ತಂಡವನ್ನು ಫೈನಲ್‌ಗೇರಿಸಿದರು.
ಈ ಸೋಲಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಪಿಎಲ್ ಟ್ರೋಫಿ ಗೆಲ್ಲುವ ಕನಸು ಭಗ್ನವಾಗಿದೆ. ಇದರ ಬೆನ್ನಲ್ಲೇ ಸಾಕಷ್ಟು ಕಚಗುಳಿಯಿಡುವ ಮೀಮ್ಸ್‌ಗಳು ಹರಿದಾಡಲಾರಂಭಿಸಿವೆ. ಇವುಗಳಲ್ಲಿ ಹೆಚ್ಚು ಗಮನ ಸೆಳೆದ ಮೀಮ್ಸ್‌ಗಳು ಇಲ್ಲಿವೆ ನೋಡಿ...
