ಟೀಕಾಕಾರರ ಬಾಯಿ ಮುಚ್ಚಿಸಿದ ವಿನೋದ್ ಕಾಂಬ್ಳಿ; ಬಾಲ್ಯದ ಗೆಳೆಯ ಸಚಿನ್ ಬಗ್ಗೆ ಖಡಕ್ ಮಾತಾಡಿದ ಮಾಜಿ ಕ್ರಿಕೆಟರ್!
ವಿನೋದ್ ಕಾಂಬ್ಳಿ ತಮ್ಮ ಬಾಲ್ಯದ ಗೆಳೆಯ ಸಚಿನ್ ತೆಂಡುಲ್ಕರ್ ನೆರವು ನೀಡಿದ್ದಾರೆ ಎಂದು ಹೇಳಿದ್ದಾರೆ. 2013ರಲ್ಲಿ ಎರಡು ಶಸ್ತ್ರಚಿಕಿತ್ಸೆಗೆ ಸಚಿನ್ ನೆರವು ನೀಡಿದ್ದರು ಎಂದು ಕಾಂಬ್ಳಿ ಬಹಿರಂಗ ಮಾಡಿದ್ದಾರೆ.
ಬೆಂಗಳೂರು: ಒಂದು ಕಾಲದಲ್ಲಿ ಭಾರತ ಕಂಡ ಪ್ರತಿಭಾನ್ವಿತ ಕ್ರಿಕೆಟಿಗ ಎಂದು ಕರೆಸಿಕೊಳ್ಳುತ್ತಿದ್ದ ವಿನೋದ್ ಕಾಂಬ್ಳಿ ಇದೀಗ ಬೇಡದ ಸುದ್ದಿಗೆ ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿದ್ದಾರೆ. ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಆರಂಭದಲ್ಲೇ ಯಶಸ್ಸಿನ ಉನ್ನತ ಶಿಖರಕ್ಕೇರಿದ್ದ ಕಾಂಬ್ಳಿ, ಅಷ್ಟೇ ವೇಗವಾಗಿ ಪಾತಾಳಕ್ಕೆ ಕುಸಿದಿದ್ದು ನಮ್ಮ ಕಣ್ಣ ಮುಂದೆಯೇ ನಡೆದ ಅಚ್ಚರಿಯಾಗಿದೆ.
ಭಾರತದ ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಅವರ ಬಾಲ್ಯದ ಗೆಳೆಯನಾಗಿದ್ದ ಕಾಂಬ್ಳಿ, ಶಾಲಾ ದಿನಗಳಲ್ಲಿ ಒಟ್ಟಿಗೆ ಹಲವಾರು ಅವಿಸ್ಮರಣೀಯ ಜತೆಯಾಟವಾಡಿ ಗಮನ ಸೆಳೆದಿದ್ದರು. ಸಚಿನ್ ತೆಂಡುಲ್ಕರ್ ಕ್ರಿಕೆಟ್ ಇತಿಹಾಸದ ದಿಗ್ಗಜ ಆಟಗಾರನಾಗಿ ಹೊರಹೊಮ್ಮಿದರೇ ವಿನೋದ್ ಕಾಂಬ್ಳಿ ಸದ್ಯ ದುರಂತ ನಾಯಕನಾಗಿ ನಮ್ಮ ಮುಂದಿದ್ದಾರೆ. ಮುಂಬೈನ ರಮಾಕಾಂತ್ ಆರ್ಚೆಕರ್ ಗರಡಿಯಲ್ಲಿ ಪಳಗಿದ ಈ ಇಬ್ಬರು ಕ್ರಿಕೆಟಿಗರ ನಡುವೆ ಇದೀಗ ಅಜಗಜಾಂತರ ವ್ಯತ್ಯಾಸವಿದೆ. ಒಂದು ಕಡೆ ಸಚಿನ್, ಕ್ರಿಕೆಟ್ ಜಗತ್ತಿನ ಮಾದರಿ ಆಟಗಾರನಾಗಿ ಹಲವು ಯುವ ಕ್ರಿಕೆಟಿಗರಿಗೆ ಸ್ಪೂರ್ತಿಯಾಗಿದ್ದಾರೆ. ಇನ್ನೊಂದೆಡೆ ವಿನೋದ್ ಕಾಂಬ್ಳಿ ಅದ್ಭುತ ಪ್ರತಿಭೆ ಹೊಂದಿದ್ದರು ಕುಡಿತದ ಚಟ, ಐಶಾರಾಮಿ ಬದುಕಿಗೆ ಮಾರು ಹೋಗಿ ಇದೀಗ ಬೀದಿಗೆ ಬೀಳುವ ಭೀತಿಗೆ ಸಿಲುಕಿದ್ದಾರೆ.
ಪೈಸೆ ಪೈಸೆಗೂ ಪರದಾಡುತ್ತಿರುವ ವಿನೋದ್ ಕಾಂಬ್ಳಿ; ಬೀದಿಗೆ ಬೀಳುವ ಆತಂಕದಲ್ಲಿ ಮಾಜಿ ಕ್ರಿಕೆಟರ್!
ಸಂದರ್ಶನವೊಂದರಲ್ಲಿ ವಿನೋದ್ ಕಾಂಬ್ಳಿ ತಮಗೆ ಸಚಿನ್ ಸೇರಿದಂತೆ ಯಾರೂ ನೆರವಿಗೆ ಬಂದಿಲ್ಲ ಎಂದು ಹೇಳಿದ್ದು ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆದರೆ ಇದೀಗ ಮತ್ತೊಂದು ಸಂದರ್ಶನದಲ್ಲಿ ತಮ್ಮ ಹೇಳಿಕೆಗಳ ಬಗ್ಗೆ ಸ್ಪಷ್ಟನೆ ನೀಡಿದ್ದು, ಸಚಿನ್ ಟೀಕಾಕಾರರಿಗೆ ಕಾಂಬ್ಳಿ ತಿರುಗೇಟು ನೀಡಿದ್ದಾರೆ.
'ಆ ಸಮಯದಲ್ಲಿ ನಾನು ತುಂಬಾ ನಿರಾಶಾದಾಯಕ ಹಂತ ತಲುಪಿದ್ದೆ. ಹೀಗಾಗಿ ಸಚಿನ್ ನನಗೇನೂ ಸಹಾಯ ಮಾಡಲಿಲ್ಲ ಎಂದು ಆಕ್ರೋಶ ಹೊರಹಾಕಿದ್ದೆ. ಆದರೆ ಸಚಿನ್ ತೆಂಡುಲ್ಕರ್ ನನಗೆ ಎಲ್ಲಾ ರೀತಿಯ ಸಹಾಯವನ್ನು ಮಾಡಿದ್ದಾರೆ. 2013ರಲ್ಲಿ ನನಗೆ ಆದ ಎರಡು ಶಸ್ತ್ರಚಿಕಿತ್ಸೆಗೂ ಸಂಪೂರ್ಣ ನೆರವನ್ನು ನೀಡಿದ್ದಾರೆ. ನನ್ನ ಬಾಲ್ಯದ ಗೆಳೆಯ ಆ ದಿನಗಳನ್ನು ನೆನಪಿನಲ್ಲಿಟ್ಟುಕೊಂಡು ನೆರವು ನೀಡಿದರು' ಎಂದು ವಿನೋದ್ ಕಾಂಬ್ಳಿ ದಿ ವಿಕಿ ಲಾಲ್‌ವಾನಿ ಶೋನಲ್ಲಿ ಮಾಜಿ ಕ್ರಿಕೆಟಿಗ ಮನಬಿಚ್ಚಿ ಹೇಳಿದ್ದಾರೆ.
ವಿನೋದ್ ಕಾಂಬ್ಳಿ ಹೆಸರಿನಲ್ಲಿರುವ ಆ ಒಂದು ರೆಕಾರ್ಡ್ ಬ್ರೇಕ್ ಮಾಡಲು ಯಾವ ದಿಗ್ಗಜರಿಗೂ ಸಾಧ್ಯವಾಗಿಲ್ಲ!
'ಕ್ರಿಕೆಟ್ ಹೇಗೆ ಆಡಬೇಕು ಎನ್ನುವುದನ್ನು ನನಗೆ ಸಚಿನ್ ಹೇಳಿಕೊಡುತ್ತಿದ್ದರು. ನಾನು 9 ಬಾರಿ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿದ್ದೇನೆ. ನಾವು ಕ್ರಿಕೆಟಿಗರಾಗಿದ್ದರೂ ಮನುಷ್ಯರೇ ಅಲ್ಲವೇ. ನಾವು ಔಟ್ ಆದಾಗ ಸಹಜವಾಗಿಯೇ ನೋವಾಗುತ್ತದೆ ಎಂದು ವಿನೋದ್ ಕಾಂಬ್ಳಿ ಹೇಳಿದ್ದಾರೆ.