ಆಸ್ಪತ್ರೆಯಲ್ಲೇ ಲೇಡಿ ಸಿಬ್ಬಂದಿ ಜತೆ ವಿನೋದ್ ಕಾಂಬ್ಳಿ ಬಿಂದಾಸ್ ಡ್ಯಾನ್ಸ್! ವಿಡಿಯೋ ವೈರಲ್
ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅನಾರೋಗ್ಯದಿಂದ ಚೇತರಿಸಿಕೊಂಡ ಬಳಿಕ ಆಸ್ಪತ್ರೆಯ ಸಿಬ್ಬಂದಿಯೊಂದಿಗೆ ಹಾಡಿ ಕುಣಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೂತ್ರನಾಳದ ಸೋಂಕು ಮತ್ತು ಸ್ನಾಯು ಸೆಳೆತದಿಂದ ಬಳಲುತ್ತಿದ್ದ ಕಾಂಬ್ಳಿ ಥಾಣೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮುಂಬೈ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿದ್ದ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಆದರೆ ಮಾಜಿ ಎಡಗೈ ಬ್ಯಾಟರ್ ವಿನೋದ್ ಕಾಂಬ್ಳಿ ಇದೀಗ ಚೇತರಿಸಿಕೊಂಡಂತೆ ಕಂಡು ಬಂದಿದ್ದು, ಆಸ್ಪತ್ರೆಯ ಮಹಿಳಾ ಸಿಬ್ಬಂದಿಯ ಜತೆ ಬಿಂದಾಸ್ ಆಗಿ ಹಾಡಿ ಕುಣಿದಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ವಿನೋದ್ ಕಾಂಬ್ಳಿ ಮುಂಬೈನ ಥಾಣೆ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ವಿನೋದ್ ಕಾಂಬ್ಳಿ 'ಚಕ್ ದೇ' ಸಿನಿಮಾದ ಟೈಟಲ್ ಸಾಂಗ್ ಹಾಡುತ್ತಾ ಆಸ್ಪತ್ರೆಯ ಸಿಬ್ಬಂದಿ ಜತೆ ಡ್ಯಾನ್ಸ್ ಮಾಡಿದ್ದಾರೆ. ಇದು ಅವರ ಅಭಿಮಾನಿಗಳು ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿದೆ. ವಿನೋದ್ ಕಾಂಬ್ಳಿ ಖುಷಿಯಲ್ಲಿಯೇ ಡ್ಯಾನ್ಸ್ ಮಾಡಿರುವ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದೀಗ ಥಾಣೆಯ ಆಕ್ರಿತಿ ಆಸ್ಪತ್ರೆಯಲ್ಲಿ ವಿನೋದ್ ಕಾಂಬ್ಳೆ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ವೈದ್ಯರು ಖಚಿತಪಡಿಸಿದ್ದಾರೆ.
Vinod Kambli danced in the hospital😀 #VinodKambli pic.twitter.com/uYxnZMbY1u
— Cricket Skyblogs.in (@SkyblogsI) December 31, 2024
52 ವರ್ಷದ ವಿನೋದ್ ಕಾಂಬ್ಳಿ ಮೂತ್ರನಾಳದ ಸೋಂಕು ಹಾಗೂ ಸ್ನಾಯು ಸೆಳೆತದಿಂದಾಗಿ ಕಳೆದ ಡಿಸೆಂಬರ್ 21ರಂದು ಥಾಣೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಹಲವು ಸುತ್ತಿನ ಪರೀಕ್ಷೆಗಳ ಬಳಿಕ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವ ವಿಚಾರ ಬೆಳಕಿಗೆ ಬಂದಿತ್ತು. ಇದಾದ ಬಳಿಕ ಕಾಂಬ್ಳಿ ಅವರಿಗೆ ಉತ್ತಮ ರೀತಿಯ ಚಿಕಿತ್ಸೆ ನೀಡಲಾಗಿತ್ತು.
ಬಾಡಿಗೆ ಮನೆಯಿಂದ ಬಾಕ್ಸಿಂಗ್ ಡೇ ಹೀರೋ: ಅಪ್ಪನ ಪ್ರತಿ ಬೆವರಿನ ಹನಿಗೂ ಚಿನ್ನದ ಬೆಲೆ ತಂದ ನಿತೀಶ್ ರೆಡ್ಡಿ!
ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಚೇತರಿಸಿಕೊಂಡು ಮಾತನಾಡಿದ್ದ ವಿನೋದ್ ಕಾಂಬ್ಳಿ, 'ನಾನು ಯಾವತ್ತಿಗೂ ಕ್ರಿಕೆಟ್ ಮರೆಯೊಲ್ಲ, ಯಾಕೆಂದರೆ ನಾನು ಬಾರಿಸಿದ ಶತಕ ಹಾಗೂ ದ್ವಿಶತಕಗಳು ಇಂದಿಗೂ ನನ್ನ ನೆನಪಿನಲ್ಲಿ ಉಳಿದಿವೆ' ಎಂದು ಕಾಂಬ್ಳಿ ಹೇಳಿದ್ದರು.
ಸಚಿನ್ ತೆಂಡುಲ್ಕರ್ ಬಾಲ್ಯದ ಗೆಳೆಯ ವಿನೋದ್ ಕಾಂಬ್ಳಿ ಕಳೆದ ಕೆಲ ವರ್ಷಗಳಿಂದ ಆರ್ಥಿಕ ಹಾಗೂ ಆರೋಗ್ಯದ ಸಮಸ್ಯಯಿಂದ ಬಳಲುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಜತೆ ವಿನೋದ್ ಕಾಂಬ್ಳಿ ಖಾಸಗಿ ಆಸ್ಪತ್ರೆಯಲ್ಲಿ ವೇದಿಕೆ ಹಂಚಿಕೊಂಡಿದ್ದರು. ಆಗಲೇ ವಿನೋದ್ ಕಾಂಬ್ಳಿ ಆರೋಗ್ಯ ಹದಗೆಟ್ಟಿರುವ ವಿಚಾರ ಬಹಿರಂಗಗೊಂಡಿತ್ತು. 1983ರ ಏಕದಿನ ವಿಶ್ವಕಪ್ ತಂಡದ ನಾಯಕ ಕಪಿಲ್ ದೇವ್ ಹಾಗೂ ಸುನಿಲ್ ಗವಾಸ್ಕರ್, ವಿನೋದ್ ಕಾಂಬ್ಳಿಗೆ ಸೂಕ್ತ ನೆರವು ನೀಡುವುದಾಗಿ ಘೋಷಿಸಿದ್ದರು.
ತೂಗುಯ್ಯಾಲೆಯಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಟೆಸ್ಟ್ ಭವಿಷ್ಯ!
ಮುಂಬೈ ಮೂಲದ ಎಡಗೈ ಬ್ಯಾಟರ್ ಆಗಿರುವ ವಿನೋದ್ ಕಾಂಬ್ಳಿ ಟೀಂ ಇಂಡಿಯಾ ಪರ 17 ಟೆಸ್ಟ್ ಪಂದ್ಯಗಳನ್ನಾಡಿ 54ರ ಸರಾಸರಿಯಲ್ಲಿ 1084 ರನ್ ಬಾರಿಸಿದ್ದಾರೆ. ಇನ್ನು 106 ಏಕದಿನ ಪಂದ್ಯಗಳಲ್ಲೂ ಕಾಂಬ್ಳಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.