ಬಾಡಿಗೆ ಮನೆಯಿಂದ ಬಾಕ್ಸಿಂಗ್ ಡೇ ಹೀರೋ: ಅಪ್ಪನ ಪ್ರತಿ ಬೆವರಿನ ಹನಿಗೂ ಚಿನ್ನದ ಬೆಲೆ ತಂದ ನಿತೀಶ್ ರೆಡ್ಡಿ!
ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಶತಕ ಸಿಡಿಸಿ ಮೆರೆದ ನಿತೀಶ್ ರೆಡ್ಡಿ ಅವರ ಬದುಕಿನ ಹಿನ್ನೆಲೆ ಮತ್ತು ಕ್ರಿಕೆಟ್ ಪಯಣದ ಕುರಿತಾದ ಒಂದು ನೋಟ. ತಂದೆಯ ತ್ಯಾಗ, ಐಪಿಎಲ್‌ನ ಪ್ರಭಾವ ಮತ್ತು ಮೆಲ್ಬರ್ನ್‌ನಲ್ಲಿನ ಯಶಸ್ಸಿನ ಕಥೆ.

- ನವೀನ್ ಕೊಡಸೆ, ಏಷ್ಯಾನೆಟ್ ಸುವರ್ಣನ್ಯೂಸ್
'ಬೆಳೆದು ನಿಂತ ಆತನ ಮನೆಯ ಕ್ಯಾಬಿನ್‌ನಲ್ಲಿ ಒಂದೇ ಒಂದು ಟ್ರೋಫಿ ಇರಲಿಲ್ಲ, ಈಗಲೂ ಇಲ್ಲ. ಒಂದಾದರೂ ಟ್ರೋಫಿ ಮನೆಯಲ್ಲಿ ಇರಬೇಕು ಎನ್ನುವುದು ಆತನ ಕನಸು. ಆದ್ರೆ ಏನ್ ಮಾಡೋದು ಹೇಳಿ ನಾವಿರೋದು ಬಾಡಿಗೆ ಮನೆಯಲ್ಲಿ. ನಾವಿಲ್ಲಿ ಮನೆಯ ಗೋಡೆಗೆ ಎಲ್ಲಿ ಬೇಕೆಂದರಲ್ಲಿ ಮೊಳೆ ಹೊಡೆದು ಫೋಟೋ ನೇತಾಕಲು ಆಗಲ್ಲ' ಇದು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ಭಾರತದ ಮಾನ ಕಾಪಾಡಿದ ನಿತೀಶ್ ಕುಮಾರ್ ರೆಡ್ಡಿ ತಂದೆ ಮುತ್ಯಾಲ ರೆಡ್ಡಿಯ ಮನದಾಳದ ಮಾತು.
ನಿತೀಶ್ ಕುಮಾರ್ ರೆಡ್ಡಿ ಎನ್ನುವ ಅಪ್ಪಟ ದೇಶಿ ಪ್ರತಿಭೆ ಜನಿಸಿದ್ದು ಆಂಧ್ರಪ್ರದೇಶದ ಕಡಲತಡಿಯ ವಿಶಾಖಪಟ್ಟಣಂನಲ್ಲಿ. ತಂದೆ ಹಿಂದುಸ್ತಾನ್ ಜಿಂಕ್ ಸಂಸ್ಥೆಯ ಉದ್ಯೋಗಿ. 5ನೇ ವಯಸ್ಸಿಗೆ ಎಲ್ಲಾ ಮಕ್ಕಳಂತೆ ಪ್ಲಾಸ್ಟಿಕ್ ಬ್ಯಾಟ್ ಹಿಡಿದು ಕ್ರಿಕೆಟ್ ಆಡಲಾರಂಭಿಸಿದ ನಿತೀಶ್ ರೆಡ್ಡಿ, ಹಿಂದೂಸ್ತಾನ್ ಜಿಂಕ್ ಗ್ರೌಂಡ್‌ನಲ್ಲಿ ಸೀನಿಯರ್ಸ್ ಕ್ರಿಕೆಟರ್‌ಗಳ ಆಟ ನೋಡಲು ಮೈದಾನಕ್ಕೆ ಹೋಗುವುದು ದಿನನಿತ್ಯದ ಅಭ್ಯಾಸ ಮಾಡಿಕೊಂಡುಬಿಟ್ಟ. ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಮಗನ ಕ್ರಿಕೆಟ್ ಪ್ರತಿಭೆಯನ್ನು ಬಾಲ್ಯದಲ್ಲಿಯೇ ಗಮನಿಸಿದ ತಂದೆ ಮುತ್ಯಾಲ ರೆಡ್ಡಿ ನನ್ನ ಮಗನನ್ನು ವೃತ್ತಿಪರ ಕ್ರಿಕೆಟಿಗನನ್ನಾಗಿ ಮಾಡಿಯೇ ತೀರುತ್ತೇನೆ ಎಂದು ಭೀಷ್ಮ ಪ್ರತಿಜ್ಞೆ ಮಾಡಿಬಿಟ್ಟರು. 'ಮಿಡಲ್ ಕ್ಲಾಸ್ ಮೆಂಟಾಲಿಟಿಯೇ ಹಾಗೆ, ಖರ್ಚನೆಲ್ಲಾ ಕಮ್ಮಿ ಮಾಡಿಕೊಂಡು ಪ್ರತಿರುಪಾಯಿ ಉಳಿಸಿಕೊಳ್ತಾರೆ, ಆದ್ರೆ ಅವಶ್ಯಕತೆ ಬಿದ್ರೆ ಒಂದು ರುಪಾಯಿ ಉಳಿಯದಂಗೆ ಖರ್ಚು ಮಾಡ್ತಾರೆ' ಎನ್ನುವ ಲಕ್ಕಿ ಬಾಸ್ಕರ್ ಸಿನಿಮಾದ ಡೈಲಾಗ್‌ನಂತೆ ಮಗನನ್ನು ಕ್ರಿಕೆಟಿಗನನ್ನಾಗಿ ಮಾಡಲು ತಂದೆ ಮುತ್ಯಾಲ ರೆಡ್ಡಿ ಯಾವ ಹಂತದ ತ್ಯಾಗಕ್ಕೂ ತಯಾರಾಗಿಬಿಟ್ಟರು. ಇದಕ್ಕಾಗಿ ಅವರು ಉದಯಪುರಕ್ಕೆ ವರ್ಗಾವಣೆ ಮಾಡಿಸಿಕೊಂಡರು. ಯಾಕೆಂದರೆ ರಾಜಸ್ಥಾನದ ಉದಯಪುದಲ್ಲಿ ಹಿಂದೂಸ್ತಾನ ಜಿಂಕ್ ಸಂಸ್ಥೆಯ ಗುಣಮಟ್ಟದ ಸ್ಟೇಡಿಯಂ ಇತ್ತು.
Nitish Kumar Reddy's father Mutalya Reddy after watching him score his first Test century ❤️ 😭 pic.twitter.com/mcRIPCHPTu
— ESPNcricinfo (@ESPNcricinfo) December 28, 2024
ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಭಾರತಕ್ಕೆ ಆಪತ್ಬಾಂಧವರಾದ ನಿತೀಶ್-ವಾಷಿಂಗ್ಟನ್!
'ನಾನು ಹನ್ನೆರಡೋ ಹದಿಮೂರೋ ವರ್ಷದವನಿರಬೇಕು. ನನ್ನ ತಂದೆ ನನಿಗಾಗಿ ಕೆಲಸ ಬಿಡಲು ತೀರ್ಮಾನಿಸಿದರು. ಅವರು ಉದಯಪುರಕ್ಕೆ ಸ್ಥಳಾಂತರಗೊಂಡರು. ಅಲ್ಲಿ ಕ್ರಿಕೆಟ್‌ನ ಆಳ-ಅಗಲವನ್ನು ಅನಾಲೈಸ್ ಮಾಡಿದರು. ಒಂದು ಹಂತದಲ್ಲಿ ಕ್ರಿಕೆಟ್‌ನಲ್ಲಿ ನಡೆಯುವ ರಾಜಕೀಯ ಮಗನ ಮೇಲೆ ಪರಿಣಾಮ ಬೀರಬಹುದೇನೋ ಎಂದು ಹೆದರಿದ್ದರು. ಇನ್ನು ಇದೆಲ್ಲವೂ ಸಾಲದೆಂಬಂತೆ ಸಂಬಂಧಿಕರೆಲ್ಲಾ ಈತನಿಗೆಲ್ಲೋ ಹುಚ್ಚು. ಮಗನನ್ನು ಕ್ರಿಕೆಟಿಗನನ್ನಾಗಿ ಮಾಡಲು ಕೆಲಸ ಬಿಟ್ಟಿದ್ದಾನೆ ಎಂದು ವ್ಯಂಗ್ಯವಾಡಿದರು. ಆದರೆ ಎಷ್ಟೇ ಟೀಕೆಗಳು ಬಂದರೂ ಕೇಳಿಯೂ ಕೇಳದಂತೆ ಇದ್ದು ಮಗನ ಪ್ರತಿಭೆಯನ್ನು ಇನ್ನಷ್ಟು ಪ್ರಕರವಾಗಿಸಲು ತನ್ನ ವೃತ್ತಿಬದುಕನ್ನೆ ತ್ಯಾಗ ಮಾಡಿದರು. ಜಗತ್ತಿನಲ್ಲಿ ನನ್ನ ಮೇಲೆ ವಿಶ್ವಾಸವಿಟ್ಟ ಮೊದಲ ವ್ಯಕ್ತಿಯೆಂದರೆ ಅದು ನನ್ನಪ್ಪ ಎಂದು ತಮ್ಮ ತಂದೆಯ ಬಗ್ಗೆ ಸಂದರ್ಶನವೊಂದರಲ್ಲಿ ನಿತೀಶ್ ರೆಡ್ಡಿ ಹೆಮ್ಮೆಯಿಂದ ಹೇಳಿದ್ದರು.
Take a bow, Nitish Reddy! What a gritty debut century!!! Your innings was pure class, but I bet the proudest smile today belongs to your dad.
— Suniel Shetty (@SunielVShetty) December 28, 2024
Here’s to many more centuries and to keeping that Reddy fire alive.
P.S. - Your dad might need a bigger trophy shelf soon pic.twitter.com/I56yC2QsOw
ಎಂಎಸ್‌ಕೆ ಪ್ರಸಾದ್ ಕಣ್ಣಿಗೆ ಬಿದ್ದ ರೆಡ್ಡಿ:
ನಿತೀಶ್ ಕುಮಾರ್ ರೆಡ್ಡಿ ಎನ್ನುವ ಅಪ್ಪಟ ದೇಶಿ ಪ್ರತಿಭೆಯ ಸಾಮರ್ಥ್ಯವನ್ನು ಗುರುತಿಸಿದ ಕೀರ್ತಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್‌ಗೆ ಸಲ್ಲುತ್ತದೆ. ಅಂಡರ್ -12 ಹಾಗೂ ಅಂಡರ್-14 ವಯೋಮಿತಿಯ ಟೂರ್ನಿಯಲ್ಲಿ ಆಂಧ್ರ ಕ್ರಿಕೆಟ್ ತಂಡದಲ್ಲಿ ನಿತೀಶ್‌ಗೆ ಅವಕಾಶ ಕಲ್ಪಿಸಲಾಯಿತು. ಕಡಪದಲ್ಲಿರುವ ಆಂಧ್ರ ಕ್ರಿಕೆಟ್ ಸಂಸ್ಥೆಯ ಅಕಾಡೆಮಿಯಲ್ಲಿ ಮಧುಸೂದನರೆಡ್ಡಿ ಹಾಗೂ ಶ್ರೀನಿವಾಸ ರಾವ್ ನಿತೀಶ್ ರೆಡ್ಡಿಗೆ ಮತ್ತಷ್ಟು ಕ್ರಿಕೆಟ್ ಕೌಶಲ ಕಲಿಸಿದರು.
ನಿತೀಶ್ ರೆಡ್ಡಿ ಶತಕಕ್ಕೆ ಕೈಮುಗಿದು ಆನಂದಭಾಷ್ಪ ಸುರಿಸಿದ ತಂದೆ! ಮಿಲಿಯನ್ ಡಾಲರ್ ಕ್ಷಣದ ವಿಡಿಯೋ ವೈರಲ್
ಇಷ್ಟು ಸಾಕಾಗಿತ್ತು ನಿತೀಶ್ ರೆಡ್ಡಿಗೆ ತಾವೇನು ಎನ್ನುವುದನ್ನು ಸಾಬೀತುಪಡಿಸಲು. 2017-18ನೇ ಸಾಲಿನ 16 ವರ್ಷದೊಳಗಿನವರ ವಿಜಯ್ ಮರ್ಚೆಂಟ್ ಟೂರ್ನಿಯಲ್ಲಿ ಆಂಧ್ರ ಪ್ರದೇಶ ಪರ ಕಣಕ್ಕಿಳಿದ ರೆಡ್ಡಿ ಮೊದಲ ಪಂದ್ಯದಲ್ಲೇ ತಮಿಳುನಾಡು ಎದುರು ಅಜೇಯ 301 ರನ್ ಸಿಡಿಸಿದರು. ಇದರಲ್ಲಿ 41 ಆಕರ್ಷಕ ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿತ್ತು. ಇದಾದ ಬಳಿಕ ಅದೇ ಟೂರ್ನಿಯಲ್ಲಿ ನಾಗಾಲ್ಯಾಂಡ್ ಎದುರು ಕೇವಲ 366 ಎಸೆತಗಳನ್ನು ಎದುರಿಸಿ ಬರೋಬ್ಬರಿ 60 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 441 ರನ್ ಸಿಡಿಸಿ ಇಡೀ ಕ್ರಿಕೆಟ್ ಜಗತ್ತೇ ಹುಬ್ಬೇರಿಸುವಂತೆ ಮಾಡಿ ಬಿಟ್ಟರು. ಕೇವಲ 16 ವರ್ಷ ವಯೋಮಿತಿಯ ವಿಜಯ್ ಮರ್ಚೆಂಟ್ ಟೂರ್ನಿಯಲ್ಲಿ ನಿತೀಶ್ ರೆಡ್ಡಿ 176.41ರ ಸರಾಸರಿಯಲ್ಲಿ ಗಳಿಸಿದ್ದು ಬರೋಬ್ಬರಿ 1237 ರನ್! ಇದೂ ಸಾಲದೆಂಬಂತೆ ಬೌಲಿಂಗ್‌ನಲ್ಲಿ ಪಡೆದಿದ್ದು 26 ವಿಕೆಟ್.
What it means to Nitish Kumar Reddy and his family 🥹
— ICC (@ICC) December 28, 2024
📝 #AUSvIND: https://t.co/YYbhcFNXcB#WTC25 pic.twitter.com/lWqauw5BA7
ನಿತೀಶ್ ರೆಡ್ಡಿ ಅಮೋಘ ಪ್ರದರ್ಶನಕ್ಕೆ ಬಿಸಿಸಿಐ ಕೊಡಮಾಡುವ 2017-18ನೇ ಸಾಲಿನ ಅಂಡರ್ 16 ಬೆಸ್ಟ್ ಕ್ರಿಕೆಟರ್ ಅವಾರ್ಡ್ ಆಗಿರುವ ಜಗಮೋಹನ್ ದಾಲ್ಮೀಯ ಪ್ರಶಸ್ತಿ ರೆಡ್ಡಿ ಅವರನ್ನು ಅರಸಿ ಬಂದಿತು. ಈ ಮೂಲಕ ಈ ಪ್ರತಿಷ್ಠಿತ ಪ್ರಶಸ್ತಿ ಪಡೆದ ಆಂಧ್ರದ ಮೊದಲ ಯುವ ಕ್ರಿಕೆಟರ್ ಎನ್ನುವ ಹಿರಿಮೆಯೂ ನಿತೀಶ್ ರೆಡ್ಡಿ ಪಾಲಾಯಿತು. ಈ ಪ್ರಶಸ್ತಿ ಜತೆಗೆ ಬಿಸಿಸಿಐ ನಿತೀಶ್ ರೆಡ್ಡಿಗೆ 2 ಲಕ್ಷ ರುಪಾಯಿ ನಗದು ಬಹುಮಾನ ನೀಡಿತು. 2018ರಲ್ಲಿ ಕಟ್ಟಿಸಿದ ಸ್ವಂತ ಮನೆಗೆ ಹೋಗುವ ಅವಕಾಶವಿದ್ದರೂ ಅಲ್ಲಿ ಸೂಕ್ತ ಕ್ರಿಕೆಟ್ ಸೌಲಭ್ಯವಿಲ್ಲದ ಕಾರಣ ನಿತೀಶ್ ರೆಡ್ಡಿ ಕುಟುಂಬ ಬಾಡಿಗೆ ಮನೆಯಲ್ಲೇ ಉಳಿಯಲು ತೀರ್ಮಾನಿಸಿಬಿಟ್ಟಿತು. ಇದು ಮಗನಿಗಾಗಿ ನಿತೀಶ್ ರೆಡ್ಡಿ ಕುಟುಂಬ ಮಾಡಿದ ಮತ್ತೊಂದು ತ್ಯಾಗ. ಸ್ವಂತ ಗೂಡಿದ್ದರೂ ಮಗನಿಗಾಗಿ ಬಾಡಿಗೆ ಮನೆಯಲ್ಲಿ ಉಳಿದುಬಿಟ್ಟರು.
Nitish Kumar Reddy's hundred as seen by his father ❤️
— ESPNcricinfo (@ESPNcricinfo) December 28, 2024
via @StarSportsIndia | #AUSvIND pic.twitter.com/rhuTjktqwI
ಬಾಕ್ಸಿಂಗ್ ಡೇ ಟೆಸ್ಟ್: ನಿತೀಶ್ ರೆಡ್ಡಿ ಭರ್ಜರಿ ಶತಕ, ಆಸೀಸ್‌ನಲ್ಲಿ ಹೊಸ ರೆಕಾರ್ಡ್ ಬರೆದ ಟೀಂ ಇಂಡಿಯಾ ಹೀರೋ!
ಬದುಕು ಬದಲಿಸಿದ ಐಪಿಎಲ್:
'ಟ್ಯಾಲೆಂಟ್ಸ್ ಮೀಟ್ಸ್ ಅಪಾರ್ಚುನಿಟಿ' ಎನ್ನುವಂತೆ ನಿತೀಶ್ ಕುಮಾರ್ ರೆಡ್ಡಿ ಅವರನ್ನು 2023ರ ಐಪಿಎಲ್ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು 20 ಲಕ್ಷ ರುಪಾಯಿ ನೀಡಿ ಖರೀದಿಸಿತ್ತು. ಆದರೆ ಆವೃತ್ತಿಯಲ್ಲಿ ಆಡಲು ಅವಕಾಶ ಸಿಕ್ಕಿದ್ದು ಕೇವಲ 2 ಪಂದ್ಯಗಳಲ್ಲಿ ಮಾತ್ರ. ಉಳಿದೆಲ್ಲಾ ಪಂದ್ಯಗಳಲ್ಲಿ ಬೆಂಚ್ ಕಾಯಿಸಿದ್ದು, ಉಳಿದ ಆಟಗಾರರಿಗೆ ವಾಟರ್ ಬಾಯ್ ಆಗಿದ್ದು. ದೇಶಿ ಕ್ರಿಕೆಟ್‌ನಲ್ಲಿ ಅಸಾಧಾರಣ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದ ರೆಡ್ಡಿ, ಐಪಿಎಲ್‌ನಲ್ಲಿ ಇನ್ನೊಂದು ಅವಕಾಶಕ್ಕಾಗಿ ಚಾತಕ ಪಕ್ಷಿಯಂತೆ ಕಾದುಕುಳಿತುಬಿಟ್ಟ. ಆದರೆ 2024ರ ಐಪಿಎಲ್ ಟೂರ್ನಿ ನಿತೀಶ್ ರೆಡ್ಡಿ ಕ್ರಿಕೆಟ್ ಬದುಕನ್ನೇ ಬದಲಿಸಿತು. ಹಿಂದಿನ ವರ್ಷದ ಬಹುತೇಕ ಪಂದ್ಯಗಳಲ್ಲಿ ಬಹುತೇಕ ಪಂದ್ಯಗಳಲ್ಲಿ ಬೆಂಚ್ ಕಾಯಿಸಿ ಅವಕಾಶಕ್ಕಾಗಿ ಪರಿತಪಿಸಿದ್ದ ನಿತೀಶ್ ರೆಡ್ಡಿ, 2024ರ ಐಪಿಎಲ್‌ನಲ್ಲಿ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡ. ಕಳೆದ ಐಪಿಎಲ್ ಟೂರ್ನಿಯಲ್ಲಿ ಆರೆಂಜ್ ಆರ್ಮಿ ಪರ ನಿತೀಶ್ ರೆಡ್ಡಿ 303 ರನ್ ಹಾಗೂ 3 ವಿಕೆಟ್ ಕಬಳಿಸುವ ಮೂಲಕ ಟೂರ್ನಿಯ ಉದಯೋನ್ಮುಖ ಆಟಗಾರನಾಗಿ ಹೊರಹೊಮ್ಮಿದ. ಈ ಕಾರಣಕ್ಕಾಗಿಯೇ ನಿತೀಶ್ ರೆಡ್ಡಿಯ ಪ್ರತಿಭೆ ಮನಗಂಡು ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು 2025ರ ಐಪಿಎಲ್‌ಗೂ ಮುನ್ನ ಬರೋಬ್ಬರಿ 6 ಕೋಟಿ ರುಪಾಯಿ ನೀಡಿ ರೀಟೈನ್ ಮಾಡಿಕೊಂಡಿದೆ.
ಮೆಲ್ಬರ್ನ್‌ನಲ್ಲಿ ಹೊಸ ಸ್ಟಾರ್ ಉಗಮ:
ಪರ್ತ್ ಟೆಸ್ಟ್‌ನಲ್ಲಿ ಅಶ್ವಿನ್ ಹೊರಗಿಟ್ಟು ನಿತೀಶ್ ರೆಡ್ಡಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡಿದಾಗ ಕೊಂಕು ನುಡಿದವರೇ ಹೆಚ್ಚು. ಆದರೆ ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ರೆಡ್ಡಿ ಬಾರಿಸಿದ 41 ರನ್ ಭಾರತ ತಂಡದ ಪರ ದಾಖಲಾದ ಗರಿಷ್ಠ ವೈಯುಕ್ತಿಕ ಸ್ಕೋರ್ ಎನಿಸಿಕೊಂಡಿತು. ಇನ್ನು ಅಡಿಲೇಡ್ ಟೆಸ್ಟ್‌ನಲ್ಲಿ ಇಡೀ ತಂಡವೇ ಬ್ಯಾಟಿಂಗ್ ವೈಫಲ್ಯ ಅನಭವಿಸಿದರೂ ರೆಡ್ಡಿ ಎರಡೂ ಇನ್ನಿಂಗ್ಸ್‌ನಲ್ಲಿ ತಲಾ 42 ರನ್ ಸಿಡಿಸಿ ಗಮನ ಸೆಳೆದರು. ಇದೀಗ ಮೆಲ್ಬರ್ನ್ ಟೆಸ್ಟ್‌ನಲ್ಲಿ ಇಡೀ ತಂಡ ಫಾಲೋ ಆನ್ ಭೀತಿಗೆ ಸಿಲುಕಿದ್ದಾಗ ವಾಷಿಂಗ್ಟನ್ ಸುಂದರ್ ಜತೆಗೂಡಿ ತಂಡವನ್ನು ಅಪಾಯದಿಂದ ಪಾರು ಮಾಡಿದರು. ಇನ್ನು ರೆಡ್ಡಿ ಶತಕದ ಹೊಸ್ತಿಲಲ್ಲಿದ್ದಾಗ ವಾಷಿಂಗ್ಟನ್ ಸುಂದರ್ ವಿಕೆಟ್ ಒಪ್ಪಿಸಿದರು. ಆಗ ನಿತೀಶ್ ರೆಡ್ಡಿ 97 ರನ್ ಗಳಿಸಿದ್ದರು. ಇನ್ನು ಇದರ ಬೆನ್ನಲ್ಲೇ 9ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜಸ್ಪ್ರೀತ್ ಬುಮ್ರಾ ಕೂಡಾ ಖಾತೆ ತೆರೆಯುವ ಮುನ್ನವೇ ಕಮಿನ್ಸ್‌ಗೆ ವಿಕೆಟ್ ಒಪ್ಪಿದರು. ಆಗ ಮೈದಾನದಲ್ಲಿದ್ದ ಮುತ್ಯಾಲ ರೆಡ್ಡಿ ತಮ್ಮ ಮಗ ಶತಕ ಸಿಡಿಸಲಿ ಎಂದು ತುದಿಗಾಲಿನಲ್ಲಿ ನಿಂತು ಮುಕ್ಕೋಟಿ ದೇವರನ್ನು ಪ್ರಾರ್ಥಿಸುತ್ತಿದ್ದರು. ಆದರೆ ಕೊನೆಯ ಕ್ಷಣದವರೆಗೂ ತಾಳ್ಮೆ ಕಳೆದುಕೊಳ್ಳದ ರೆಡ್ಡಿ ಕೊನೆಗೂ ಶತಕ ಸಿಡಿಸುವ ಮೂಲಕ ಅಪ್ಪನ ಕನಸು ನನಸು ಮಾಡಿದ್ದಾರೆ. ಈಗ ಅಪ್ಪನ ಪ್ರತಿಬೆವರಿನ ಹನಿಗೆ ಚಿನ್ನದ ಬೆಲೆ ತಂದಿದ್ದಾರೆ. ಬಲಾಢ್ಯ ಆಸ್ಟ್ರೇಲಿಯಾ ಎದುರು 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಳಿದು ಶತಕ ಸಿಡಿಸಿದ ಭಾರತದ ಮೊದಲಿಗ ಎನಿಸಿಕೊಂಡಿರುವ ನಿತೀಶ್ ರೆಡ್ಡಿ ಭಾರತದ ಭವಿಷ್ಯದ ಸೂಪರ್‌ಸ್ಟಾರ್ ಆಲ್ರೌಂಡರ್ ಆಗುವ ಲಕ್ಷಣವಿದೆ. ಮುಂಬರುವ ದಿನಗಳಲ್ಲಿ ನಿತೀಶ್ ರೆಡ್ಡಿ ಟೀಂ ಇಂಡಿಯಾದ ಪೋಸ್ಟರ್ ಬಾಯ್ ಆದರೆ ಅಚ್ಚರಿಯೇನಿಲ್ಲ.