ತೂಗುಯ್ಯಾಲೆಯಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಟೆಸ್ಟ್ ಭವಿಷ್ಯ!
ಟಿ20 ವಿಶ್ವಕಪ್ ಬಳಿಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಟೆಸ್ಟ್ ಭವಿಷ್ಯದ ಬಗ್ಗೆ ಚರ್ಚೆಗಳು ಹೆಚ್ಚಾಗಿವೆ. ಕಳಪೆ ಪ್ರದರ್ಶನದಿಂದಾಗಿ ಇಬ್ಬರ ಭವಿಷ್ಯ ಅತಂತ್ರವಾಗಿದ್ದು, ನಿವೃತ್ತಿ ಸಾಧ್ಯತೆಗಳ ಬಗ್ಗೆಯೂ ಚರ್ಚೆಗಳು ಆರಂಭವಾಗಿವೆ. ಇದರ ಜೊತೆಗೆ, ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಿಂದ ಬಹುತೇಕ ಹೊರಬಿದ್ದಿದೆ.
ಮೆಲ್ಬರ್ನ್: ಟಿ20 ವಿಶ್ವಕಪ್ ಗೆಲುವಿನ ಬಳಿಕ ಅಂತಾರಾಷ್ಟ್ರೀಯ ಟಿ20ಗೆ ನಿವೃತ್ತಿ ಘೋಷಿಸಿರುವ ಭಾರತದ ತಾರಾ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯ ಟೆಸ್ಟ್ ಭವಿಷ್ಯ ಕೂಡಾ ತೂಗುಯ್ಯಾಲೆಯಲ್ಲಿದೆ. ಇಬ್ಬರೂ ಕೆಲ ವರ್ಷದಿಂದ ಕಳಪೆ ಪ್ರದರ್ಶನ ನೀಡುತ್ತಿದ್ದು, ಟೆಸ್ಟ್‌ನಿಂದ ನಿವೃತ್ತಿಯಾಗುವ ಬಗ್ಗೆ ಚರ್ಚೆಗಳು ಆರಂಭಗೊಂಡಿವೆ.
ಇಬ್ಬರಿಂದಲೂ 2024ರ ಟೆಸ್ಟ್‌ನಲ್ಲಿ ನಿರೀಕ್ಷಿತ ಪ್ರದರ್ಶನ ಕಂಡುಬಂದಿಲ್ಲ. ರೋಹಿತ್ ಈ ವರ್ಷ 14 ಟೆಸ್ಟ್ ಆಡಿದ್ದು, 26 ಇನ್ನಿಂಗ್ಸ್‌ಗಳಲ್ಲಿ 24.76ರ ಸರಾಸರಿಯಲ್ಲಿ ಕೇವಲ 619 ರನ್ ಗಳಿಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಸರಣಿಯಲ್ಲಿ ಕೊನೆ ಬಾರಿ ಅರ್ಧಶತಕ ಬಾರಿಸಿರುವ ಅವರು, ಆಸ್ಟ್ರೇಲಿಯಾ ಸರಣಿಯಲ್ಲಿ ಕ್ರಮವಾಗಿ 3, 6, 10, 3 ಮತ್ತು 9 ರನ್ ಗಳಿಸಿದ್ದಾರೆ.
ಟಿ20 ವಿಶ್ವಕಪ್ ಗೆದ್ದರೂ ಭಾರತಕ್ಕೆ 2024ರಲ್ಲಿ ಸಿಕ್ಕಿದ್ದು ಸಿಹಿಗಿಂತ ಕಹಿಯೇ ಹೆಚ್ಚು!
ಕೊಹ್ಲಿ ಕೂಡಾ ಲಯ ಕಂಡುಕೊಳ್ಳಲು ಪರದಾಡುತ್ತಿದ್ದಾರೆ. ಪರ್ತ್ ಟೆಸ್ಟ್‌ನಲ್ಲಿ ಶತಕ ಬಾರಿಸಿದರೂ ಈ ವರ್ಷ ಅವರು 10 ಟೆಸ್ಟ್‌ನ 19 ಇನ್ನಿಂಗ್ಸ್‌ಗಳಲ್ಲಿ ಕೇವಲ 417 ರನ್ ಗಳಿಸಿದ್ದಾರೆ. ಅವರ ಸರಾಸರಿ ಕೇವಲ 24.52. ಮೊದಲ ಪಂದ್ಯದ ಶತಕ ಹೊರತುಪಡಿಸಿ ಉಳಿದ 6 ಇನ್ನಿಂಗ್ಸ್‌ಗಳಲ್ಲಿ ಅವರು ಕ್ರಮವಾಗಿ 5, 7, 11, 3, 36 ಮತ್ತು 5 ರನ್ ಗಳಿಸಿದ್ದಾರೆ.
ಈ ನಡುವೆ, ‘ರೋಹಿತ್ ಶೀಘ್ರದಲ್ಲೇ ಟೆಸ್ಟ್‌ನಿಂದ ನಿವೃತ್ತಿ ಪಡೆಯಬಹುದು. ಆದರೆ ಕೊಹ್ಲಿ ಇನ್ನೂ 3-4 ವರ್ಷ ಮುಂದುವರಿಯುವ ಸಾಧ್ಯತೆ ಇದೆ’ ಎಂದು ಭಾರತದ ಮಾಜಿ ಕೋಚ್ ರವಿ ಶಾಸ್ತ್ರಿ ಹೇಳಿದ್ದಾರೆ.
ವಿಶ್ವ ಟೆಸ್ಟ್ ಫೈನಲ್: ಭಾರತ ಬಹುತೇಕ ಹೊರಕ್ಕೆ
ಮೆಲ್ಬರ್ನ್: ಆಸ್ಟ್ರೇಲಿಯಾ ವಿರುದ್ಧ4ನೇ ಟೆಸ್ಟ್‌ನಲ್ಲಿ ಸೋಲುವ ಮೂಲಕ ಭಾರತ ತಂಡ 2023-25 ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ರೇಸ್‌ನಿಂದ ಬಹುತೇಕ ಹೊರಬಿದ್ದಿದೆ. ತಂಡ ಕೊನೆ ಪಂದ್ಯದಲ್ಲಿ ಗೆದ್ದರೂ ಅದೃಷ್ಟ ಚೆನ್ನಾಗಿದ್ದರೆ ಮಾತ್ರ ಫೈನಲ್‌ಗೇರಬಹುದು.ದಕ್ಷಿಣ ಆಫ್ರಿಕಾ ಈಗಾಗಲೇ ಫೈನಲ್‌ಗೇರಿರುವುದರಿಂದ ಮತ್ತೊಂದು ಸ್ಥಾನಕ್ಕೆ ಭಾರತ-ಆಸ್ಟ್ರೇಲಿಯಾ ನಡುವೆ ನೇರ ಪೈಪೋಟಿ ಇದೆ.
ಸದ್ಯ ಭಾರತದ ಗೆಲುವಿನ ಪ್ರತಿಶತ ಶೇ.55.89ರಿಂದ ಶೇ.52.78ಕ್ಕೆ ಕುಸಿದಿದೆ. ಆಸ್ಟ್ರೇಲಿಯಾ ಶೇ.61.46 ಗೆಲುವಿನ ಪ್ರತಿಶತದೊಂದಿಗೆ 2ನೇ ಸ್ಥಾನದಲ್ಲಿದೆ. ಭಾರತ ಫೈನಲ್‌ಗೇರಲು ಕೊನೆ ಪಂದ್ಯದಲ್ಲಿ ಗೆಲ್ಲುವುದರ ಜೊತೆಗೆ, ಶ್ರೀಲಂಕಾ ವಿರುದ್ಧ 2 ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ ಸೋಲಬೇಕು. ಲಂಕಾ ವಿರುದ್ಧ ಆಸ್ಟ್ರೇಲಿಯಾ ಒಂದು ಪಂದ್ಯ ಗೆದ್ದರೂ ಭಾರತ ಹೊರಬೀಳಲಿದೆ.
ಬಾಕ್ಸಿಂಗ್ ಡೇ ಟೆಸ್ಟ್ ಸೋಲಿನ ಬೆನ್ನಲ್ಲೇ ಮಹತ್ವದ ಅಪ್‌ಡೇಟ್ ಕೊಟ್ಟ ರೋಹಿತ್ ಶರ್ಮಾ! ಟೀಂ ಇಂಡಿಯಾ ಪ್ಲಾನ್ ಏನು?
ಇನ್ನು, ಪರ್ತ್ ಟೆಸ್ಟ್‌ನಲ್ಲಿ ಭಾರತ ಸೋತರೆ ಅಥವಾ ಡ್ರಾ ಸಾಧಿಸಿದರೆ ತಂಡ ರೇಸ್‌ನಿಂದ ಹೊರಗುಳಿಯಲಿದೆ. ಪರ್ತ್ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾಗೆದ್ದು, ಬಳಿಕ ಶ್ರೀಲಂಕಾ ವಿರುದ್ಧ ಪಂದ್ಯಗಳಲ್ಲಿ ಸೋತರೂ ಆಸೀಸ್ ಫೈನಲ್‌ಗೇರಲಿದೆ.