2025-26ರ ವಿಜಯ್ ಹಜಾರೆ ಟ್ರೋಫಿಯಲ್ಲಿ ದಾಖಲೆಗಳ ಸುರಿಮಳೆಯಾಗಿದೆ. ಬಿಹಾರದ ವೈಭವ್ ಸೂರ್ಯವಂಶಿ, ಜಾರ್ಖಂಡ್‌ನ ಇಶಾನ್ ಕಿಶನ್ ಮತ್ತು ಅಂತಿಮವಾಗಿ ಬಿಹಾರದ ನಾಯಕ ಸಕೀಬುಲ್ ಘನಿ ಕೆಲವೇ ಗಂಟೆಗಳ ಅಂತರದಲ್ಲಿ ಅತಿವೇಗದ ಶತಕದ ದಾಖಲೆಗಳನ್ನು ಮುರಿದರು.
ಪಾಟ್ನಾ: 2025-26ನೇ ಸಾಲಿನ ವಿಜಯ್ ಹಜಾರೆ ಟ್ರೋಫಿ ಟೂರ್ನಿಗೆ ಭರ್ಜರಿ ಚಾಲನೆ ಸಿಕ್ಕಿದೆ. ಟೂರ್ನಿಯ ಮೊದಲ ದಿನವೇ ಮೂರು ಅಪರೂಪದ ದಾಖಲೆಗಳು ನಿರ್ಮಾಣವಾಗಿ ಕೆಲವೇ ಗಂಟೆಗಳಲ್ಲಿ ಬ್ರೇಕ್ ಆಗಿದೆ. ಬಿಹಾರ ಪರ 14 ವರ್ಷದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ, ಅರುಣಾಚಲ ಪ್ರದೇಶ ಎದುರು ಕೇವಲ 36 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ವಿಜಯ್ ಹಜಾರೆ ಟ್ರೋಫಿ ಇತಿಹಾಸದಲ್ಲಿ ಎರಡನೇ ಅತಿವೇಗದ ಶತಕ ಸಿಡಿಸಿದ ಅಪರೂಪದ ದಾಖಲೆ ಬರೆದಿದ್ದರು.
ಇನ್ನು ಇದಾಗಿ ಒಂದು ಗಂಟೆ ಕಳೆಯುವ ಮುನ್ನವೇ ಕರ್ನಾಟಕ ಎದುರಿನ ಪಂದ್ಯದಲ್ಲಿ ಜಾರ್ಖಂಡ್ ತಂಡದ ನಾಯಕ ಇಶಾನ್ ಕಿಶನ್ ಕೇವಲ 33 ಎಸೆತಗಳಲ್ಲಿ ಸಿಕ್ಸರ್ ಸಿಡಿಸಿ ಹೊಸ ಇತಿಹಾಸ ನಿರ್ಮಿಸಿದ್ದರು. ಈ ಮೂಲಕ ವಿಜಯ್ ಹಜಾರೆ ಟ್ರೋಫಿ ಟೂರ್ನಿಯ ಇತಿಹಾಸದಲ್ಲಿ ಅತಿಕಡಿಮೆ ಎಸೆತಗಳಲ್ಲಿ ಶತಕ ಸಿಡಿಸಿದ ಮೊದಲ ಬ್ಯಾಟರ್ ಎನ್ನುವ ದಾಖಲೆಗೆ ಇಶಾನ್ ಕಿಶನ್ ಪಾತ್ರರಾಗಿದ್ದರು. ಲಿಸ್ಟ್ 'ಎ' ಕ್ರಿಕೆಟ್‌ನಲ್ಲಿ ಅತಿವೇಗದ ಶತಕ ಸಿಡಿಸಿದ ಬ್ಯಾಟರ್ ಎನ್ನುವ ಅಪರೂಪದ ದಾಖಲೆಗೆ ಇಶಾನ್ ಕಿಶನ್ ಪಾತ್ರರಾದರು.
ಈ ಮೊದಲು ವಿಜಯ್ ಹಜಾರೆ ಟ್ರೋಫಿ ಇತಿಹಾಸದಲ್ಲಿ ಅತಿವೇಗದ ಶತಕ ಸಿಡಿಸಿದ ದಾಖಲೆ ಪಂಜಾಬ್‌ನ ಅನ್ಮೋಲ್‌ಪ್ರೀತ್ ಸಿಂಗ್ ಹೆಸರಿನಲ್ಲಿತ್ತು. ಕಳೆದ ಆವೃತ್ತಿಯ ವಿಜಯ್ ಹಜಾರೆ ಟೂರ್ನಿಯಲ್ಲಿ, ಅರುಣಾಚಲ ಪ್ರದೇಶ ವಿರುದ್ದವೇ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಆ ದಾಖಲೆಯನ್ನು ಇಶಾನ್ ಕಿಶನ್ ಬ್ರೇಕ್ ಮಾಡಿದ್ದರು.
ಇಶಾನ್ ಕಿಶನ್ ದಾಖಲೆಯೂ ಕೆಲವೇ ಗಂಟೆಗಳಲ್ಲಿ ನುಚ್ಚುನೂರು:
ಇನ್ನು ಇಶಾನ್ ಕಿಶನ್ ಅಪರೂಪದ ದಾಖಲೆ ಕೂಡಾ ಹೆಚ್ಚು ಹೊತ್ತು ಉಳಿಯಲಿಲ್ಲ. ಬಿಹಾರ ತಂಡದ ನಾಯಕ ಸಕೀಬುಲ್ ಘನಿ, ಅರಣಾಚಲ ಪ್ರದೇಶ ಎದುರು ಕೇವಲ 32 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಇಶಾನ್ ಕಿಶನ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿಹಾಕಿದ್ದಾರೆ. ಬಿಹಾರ ಪರ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಳಿದ ನಾಯಕ ಸಕೀಬುಲ್ ಘನಿ, ಅರುಣಾಚಲ ಪ್ರದೇಶ ತಂಡದ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಪರಿಣಾಮ ಕೇವಲ 32 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಲಿಸ್ಟ್ 'ಎ' ಕ್ರಿಕೆಟ್ ಇತಿಹಾಸದಲ್ಲಿ ಅತಿವೇಗದ ಶತಕ ಸಿಡಿಸಿದ ಭಾರತೀಯ ಬ್ಯಾಟರ್ ಎನ್ನುವ ಹಿರಿಮೆಗೆ ಘನಿ ಪಾತ್ರರಾಗಿದ್ದಾರೆ. ಒಟ್ಟಾರೆ ಕೇವಲ 40 ಎಸೆತಗಳನ್ನು ಎದುರಿಸಿದ ಸಕೀಬುಲ್ ಘನಿ 10 ಬೌಂಡರಿ ಹಾಗೂ 12 ಮುಗಿಲೆತ್ತರದ ಸಿಕ್ಸರ್‌ಗಳ ನೆರವಿನಿಂದ 128 ರನ್ ಗಳಿಸಿ ಅಜೇಯರಾಗುಳಿದರು.
ದಾಖಲೆಯ ಮೊತ್ತ ಕಲೆಹಾಕಿದ ಬಿಹಾರ:
ಅರುಣಾಚಲ ಪ್ರದೇಶ ಎದುರು ಬಿಹಾರ ಬ್ಯಾಟರ್‌ಗಳು ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಮೈಚಳಿ ಬಿಟ್ಟು ಬ್ಯಾಟರ್ ಬೀಸಿದರು. ಬಿಹಾರ ಪರ ವೈಭವ್ ಸೂರ್ಯವಂಶಿ, ಸಕೀಬುಲ್ ಘನಿ ಮಾತ್ರವಲ್ಲದೇ ವಿಕೆಟ್ ಕೀಪರ್ ಬ್ಯಾಟರ್ ಆಯುಷ್ ಲೋಹರುಕಾ ಕೂಡಾ ಶತಕ ಸಿಡಿಸಿದರು. ಆಯುಷ್ ಕೇವಲ 56 ಎಸೆತಗಳನ್ನು ಎದುರಿಸಿ 11 ಬೌಂಡರಿ ಹಾಗೂ 8 ಸಿಕ್ಸರ್ ಗಳ ನೆರವಿನಿಂದ ಆಕರ್ಷಕ 116 ರನ್ ಸಿಡಿಸಿದರು. ಈ ಮೂವರು ಬ್ಯಾಟರ್‌ಗಳ ಆಕರ್ಷಕ ಶತಕಗಳ ನೆರವಿನಿಂದ ಬಿಹಾರ ತಂಡವು ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ದಾಖಲೆಯ 575 ರನ್ ಕಲೆಹಾಕಿತು. ಇದು ಲಿಸ್ಟ್ 'ಎ' ಕ್ರಿಕೆಟ್ ಇತಿಹಾಸದಲ್ಲಿ ದಾಖಲಾದ ಗರಿಷ್ಠ ಸ್ಕೋರ್ ಎನಿಸಿಕೊಂಡಿದೆ.


