ಟೀಂ ಇಂಡಿಯಾಗೆ ಮರಳಿರುವ ಇಶಾನ್ ಕಿಶನ್, ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ವಿರುದ್ಧ ಅಬ್ಬರಿಸಿದ್ದಾರೆ. ಜಾರ್ಖಂಡ್ ನಾಯಕರಾಗಿ ಕೇವಲ 33 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಲಿಸ್ಟ್ 'ಎ' ಕ್ರಿಕೆಟ್‌ನಲ್ಲಿ ಅತಿವೇಗದ ಶತಕದ ಹೊಸ ದಾಖಲೆ ನಿರ್ಮಿಸಿದ್ದಾರೆ.
ಅಹಮದಾಬಾದ್: ಬರೋಬ್ಬರಿ ಎರಡು ವರ್ಷಗಳ ಬಳಿಕ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಿರುವ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಇದೀಗ ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಎದುರಾಳಿ ತಂಡಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಇತ್ತೀಚೆಗಷ್ಟೇ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಗೆಲ್ಲಿಸಿಕೊಟ್ಟಿದ್ದ ಇಶಾನ್ ಕಿಶನ್, ಇದೀಗ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲಿ ಕರ್ನಾಟಕ ಎದುರು ತಾವಾಡಿದ ಮೊದಲ ಪಂದ್ಯದಲ್ಲೇ ವಿಸ್ಪೋಟಕ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ.
ಅಪರೂಪದ ದಾಖಲೆ ಬರೆದ ಇಶಾನ್ ಕಿಶನ್
ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಜಾರ್ಖಂಡ್ ತಂಡದ ನಾಯಕ ಇಶಾನ್ ಕಿಶನ್ ಆರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲಿಳಿದು ಕೇವಲ 33 ಎಸೆತಗಳಲ್ಲಿ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಈ ಮೂಲಕ ಲಿಸ್ಟ್ 'ಎ' ಕ್ರಿಕೆಟ್‌ನಲ್ಲಿ ಅತಿವೇಗದ ಶತಕ ಸಿಡಿಸಿದ ಬ್ಯಾಟರ್ ಎನ್ನುವ ಅಪರೂಪದ ದಾಖಲೆಗೆ ಪಾತ್ರರಾಗಿದ್ದಾರೆ. ವಿಜಯ್ ಹಜಾರೆ ಟ್ರೋಫಿ ಇತಿಹಾಸದಲ್ಲಿ ಅತಿವೇಗದ ಶತಕ ಸಿಡಿಸಿದ ದಾಖಲೆ ಪಂಜಾಬ್‌ನ ಅನ್ಮೋಲ್‌ಪ್ರೀತ್ ಸಿಂಗ್ ಹೆಸರಿನಲ್ಲಿತ್ತು. ಇನ್ನು ಬಿಹಾರ ಪರ ಇಂದು ವೈಭವ್ ಸೂರ್ಯವಂಶಿ 36 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದೀಗ ಅನ್ಮೋಲ್‌ಪ್ರೀತ್ ಹಾಗೂ ಸೂರ್ಯವಂಶಿ ದಾಖಲೆ ಅಳಿಸಿ ಹಾಕುವಲ್ಲಿ ಇಶಾನ್ ಕಿಶನ್ ಯಶಸ್ವಿಯಾಗಿದ್ದಾರೆ.
ಇಶಾನ್ ಕಿಶನ್ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಜಾರ್ಖಂಡ್ ಪರ 500ಕ್ಕೂ ಅಧಿಕ ರನ್ ಬಾರಿಸುವ ಮೂಲಕ ಗರಿಷ್ಠ ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೇರಿದ್ದರು. ಫೈನಲ್‌ನಲ್ಲಿ ಶತಕ ಸಿಡಿಸಿ ಮೊದಲ ಬಾರಿಗೆ ಜಾರ್ಖಂಡ್ ತಂಡವು ಮುಷ್ತಾಕ್ ಅಲಿ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇಶಾನ್ ಕಿಶನ್ ಅವರ ಈ ಅದ್ಭುತ ಪ್ರದರ್ಶನವನ್ನು ಗಮನಿಸಿದ ಬಿಸಿಸಿಐ ಆಯ್ಕೆ ಸಮಿತಿಯು 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಸ್ಥಾನ ನೀಡಿದ್ದಾರೆ. ಇದೀಗ ಕರ್ನಾಟಕ ಎದುರು ಇಶಾನ್ ಕಿಶನ್ ಕೇವಲ 39 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 14 ಸಿಕ್ಸರ್‌ಗಳ ನೆರವಿನಿಂದ ಸ್ಪೋಟಕ 125 ರನ್ ಸಿಡಿಸಿದರು.
ಬೃಹತ್ ಮೊತ್ತ ಕಲೆಹಾಕಿದ ಜಾರ್ಖಂಡ್:
ಇನ್ನು ನಾಯಕ ಇಶಾನ್ ಕಿಶನ್ ಬಾರಿಸಿದ ಸ್ಪೋಟಕ ಶತಕ ಹಾಗೂ ವಿರಾಟ್ ಸಿಂಗ್(88), ಕುಶಾಗ್ರಾ(63) ಬಾರಿಸಿದ ಅರ್ಧಶತಕಗಳ ನೆರವಿನಿಂದ ಜಾರ್ಖಂಡ್ ತಂಡವು ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 412 ರನ್ ಬಾರಿಸಿದ್ದು, ಕರ್ನಾಟಕಕ್ಕೆ ಕಠಿಣ ಗುರಿ ನೀಡಿದೆ.


